Advertisement

ಅಪಾಯ ಎಂದಿಗೂ ತಪ್ಪಿದ್ದಲ್ಲ ; ಭಾರತದ ಕೋವಿಡ್ ಸ್ಥಿತಿಗತಿ ಕುರಿತು WHO ತಜ್ಞರ ಹೇಳಿಕೆ

05:08 PM Jun 07, 2020 | Hari Prasad |

ವಿಶ್ವಸಂಸ್ಥೆ: ಭಾರತದಲ್ಲಿ ಕೋವಿಡ್ ವೈರಸ್‌ ಇನ್ನೂ ಸ್ಫೋಟಗೊಂಡಿಲ್ಲ.

Advertisement

ಆದರೆ ದೇಶವ್ಯಾಪಿ ಘೋಷಿಸಲಾಗಿದ್ದ ನಿರ್ಬಂಧವನ್ನು ಹಂತ ಹಂತವಾಗಿ ತೆರವುಗೊಳಿಸುತ್ತಿರುವ ಕಾರಣ, ಮುಂದೆ ಅಪಾಯವಾಗುವ ಸಾಧ್ಯತೆ ಇದ್ದೇ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್‌ಒ) ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಭಾರತವು ಜಾಗತಿಕ 10 ಹಾಟ್‌ ಸ್ಪಾಟ್‌ ದೇಶಗಳ ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ತಲುಪಿದ ಬೆನ್ನಲ್ಲೇ ತಜ್ಞರಿಂದ ಈ ಹೇಳಿಕೆ ಹೊರಬಿದ್ದಿದೆ.

ಭಾರತದಲ್ಲಿ ಪ್ರಸ್ತುತ ಸೋಂಕು ದ್ವಿಗುಣಗೊಳ್ಳುವ ಅವಧಿಯು ಸುಮಾರು ಮೂರು ವಾರದಷ್ಟಿದೆ. ಹಾಗಾಗಿ ಸೋಂಕಿನ ವ್ಯಾಪಿಸುವಿಕೆ ಭಯಾನಕ ಮಟ್ಟದಲ್ಲಿದೆ ಎಂದು ಹೇಳಲು ಸಾಧ್ಯವಿಲ್ಲ.

ಆದರೂ ವ್ಯಾಪಿಸುವಿಕೆ ಮುಂದುವರಿದಿದೆ. ದೇಶದ ವಿವಿಧ ಭಾಗಗಳಲ್ಲಿ ಹಾಗೂ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸೋಂಕಿನ ಪ್ರಭಾವವು ಬೇರೆ ಬೇರೆ ರೀತಿಯದಾಗಿದೆ.

Advertisement

ಗ್ರಾಮೀಣ ಪ್ರದೇಶದಲ್ಲಿ ಪಸರಿಸಲು ಸಾಮೂಹಿಕ ವಲಸೆಯೇ ಮುಖ್ಯ ಕಾರಣ. ಭಾರತ ಮಾತ್ರವಲ್ಲದೆ, ಬಾಂಗ್ಲಾದೇಶ, ಪಾಕಿಸ್ಥಾನ ಸೇರಿದಂತೆ ಜನಸಂಖ್ಯೆಯ ಸಾಂದ್ರತೆ ಹೆಚ್ಚಿರುವ ದಕ್ಷಿಣ ಏಷ್ಯಾದ ಹಲವು ದೇಶಗಳಲ್ಲಿ, ಕೋವಿಡ್ ಸೋಂಕು ಸ್ಫೋಟಗೊಂಡಿಲ್ಲ. ಹಾಗೆಂದ ಮಾತ್ರಕ್ಕೆ ರಿಸ್ಕ್ ಇಲ್ಲ ಎಂದಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆರೋಗ್ಯ ತುರ್ತು ಯೋಜನೆಯ ಕಾರ್ಯಕಾರಿ ನಿರ್ದೇಶಕ ಮೈಕೆಲ್‌ ರಾನ್‌ ಹೇಳಿದ್ದಾರೆ.

ಅನ್‌ಲಾಕ್‌ನಿಂದಾಗಿ ಸ್ಫೋಟ ಸಾಧ್ಯತೆ: ಈ ಸೋಂಕು ಒಂದು ಬಾರಿ ಸಮುದಾಯದೊಳಕ್ಕೆ ಕಾಲಿಟ್ಟರೆ, ಅದು ಯಾವುದೇ ಸಮಯದಲ್ಲೂ ದಿಢೀರ್‌ ವೃದ್ಧಿಯಾಗಿ ಆತಂಕಕಾರಿ ಸ್ಥಿತಿ ನಿರ್ಮಾಣ ಮಾಡಬಹುದು. ಹಲವು ದೇಶಗಳಲ್ಲಿ ಆಗಿದ್ದು ಇದುವೇ. ಭಾರತದಲ್ಲಿ ದೇಶ ವ್ಯಾಪಿ ಲಾಕ್‌ ಡೌನ್‌ ನಂತಹ ಕಠಿಣ ಕ್ರಮ ಕೈಗೊಂಡಿದ್ದ ಕಾರಣ, ಸೋಂಕಿನ ವ್ಯಾಪಿಸುವಿಕೆಗೆ ಕಡಿವಾಣ ಬಿದ್ದಿತ್ತು. ಆದರೆ, ಈಗ ದೇಶವು ಅನ್‌ ಲಾಕ್‌ ಆಗಲು ಹೊರಟಿದೆ.

ಹೀಗಾಗಿ, ಯಾವುದೇ ಕ್ಷಣದಲ್ಲೂ ಸೋಂಕು ಸ್ಫೋಟಗೊಳ್ಳಬಹುದು. ಜತೆಗೆ, ಹೆಚ್ಚಿನ ಜನಸಂಖ್ಯೆ, ಭಾರೀ ಪ್ರಮಾಣದ ವಲಸೆ, ನಗರ ಪ್ರದೇಶಗಳ ಜನ ಸಾಂದ್ರತೆ, ಕಾರ್ಮಿಕರಿಗೆ ಪ್ರತಿ ದಿನ ಕೆಲಸಕ್ಕೆ ಹೋಗಲೇಬೇಕಾದ ಅನಿವಾರ್ಯತೆ ಇತ್ಯಾದಿ ಅಂಶಗಳು ಕೂಡ ಭಾರತದಲ್ಲಿ ಸೋಂಕಿನ ವ್ಯಾಪಿಸುವಿಕೆಗೆ ಕೊಡುಗೆ ನೀಡಬಹುದು ಎಂದೂ ತಜ್ಞರು ಹೇಳಿದ್ದಾರೆ.

ಹಾಗಾಗಿ, ಭಾರತವು ಲಾಕ್‌ ಡೌನ್‌ ತೆರವುಗೊಳಿಸಿದರೂ, ಜನರೆಲ್ಲರೂ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸು ವಂತೆ ನೋಡಿಕೊಳ್ಳಬೇಕು. ಜನರ ನಡವಳಿಕೆಯಲ್ಲಿ ಬದಲಾವಣೆ ಯಾದರೆ ಸೋಂಕಿಗೆ ಕಡಿವಾಣ ಹಾಕಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

9,887 ಹೊಸ ಪ್ರಕರಣ ಪತ್ತೆ
ಒಟ್ಟಾರೆ ಸೋಂಕಿತರ ಸಂಖ್ಯೆಯಲ್ಲಿ ಭಾರತವು ಇಟಲಿಯನ್ನು ಮೀರಿಸಿ ಜಗತ್ತಿನ ಟಾಪ್‌ 10 ಹಾಟ್‌ ಸ್ಪಾಟ್‌ ದೇಶಗಳ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ ಬೆನ್ನಲ್ಲೇ, ದೇಶದಲ್ಲಿ ಒಂದೇ ದಿನ ಸುಮಾರು 10 ಸಾವಿರದಷ್ಟು ಹೊಸ ಪ್ರಕರಣಗಳು ಪತ್ತೆಯಾಗಿವೆ. ಶುಕ್ರವಾರ ಬೆಳಗ್ಗೆ 8ರಿಂದ ಶನಿವಾರ ಬೆಳಗ್ಗೆ 8ರವರೆಗೆ ದೇಶಾದ್ಯಂತ 9,887 ಮಂದಿಗೆ ಸೋಂಕು ದೃಢಪಟ್ಟಿದ್ದು, 294 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಜತೆಗೆ, 1,14,073 ಮಂದಿ ಈವರೆಗೆ ಗುಣಮುಖರಾಗಿದ್ದಾಗಿಯೂ ಅಧಿಕಾರಿಗಳು ತಿಳಿಸಿದ್ದಾರೆ.

ಆಯುಷ್ಮಾನ್‌ ಯೋಜನೆಗೆ ವೇಗ ನೀಡಲು ಸಕಾಲ
ಆಯುಷ್ಮಾನ್‌ ಭಾರತ್‌ನಂತಹ ಆರೋಗ್ಯ ವಿಮಾ ಯೋಜನೆಗೆ ವೇಗ ನೀಡಲು ಭಾರತಕ್ಕೆ ಇದು ಸಕಾಲ’. ಹೀಗೆಂದು ಹೇಳಿರುವುದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್‌ ಗೇಬ್ರೆಯೇಸಸ್‌. ಕೋವಿಡ್ ವೈರಸ್‌ ಸೋಂಕು ವ್ಯಾಪಿಸುತ್ತಿರುವುದು ಹಲವು ದೇಶಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಆದರೆ, ಭಾರತವು ಪ್ರಾಥಮಿಕ ಆರೋಗ್ಯ ಸೇವೆಗೆ ವಿಶೇಷವಾಗಿ ಒತ್ತು ನೀಡುವ ಮೂಲಕ ಆಯುಷ್ಮಾನ್‌ನಂತಹ ಆರೋಗ್ಯ ವಿಮಾ ಯೋಜನೆಗೆ ವೇಗ ನೀಡಲು ಈ ಸಮಯವನ್ನು ಸದ್ಬಳಕೆ ಮಾಡಬಹುದು ಎಂದು ಟೆಡ್ರೋಸ್‌ ಅಭಿಪ್ರಾಯಪಟ್ಟಿದ್ದಾರೆ. ಭಾರತದ ಕೊರೊನಾ ಸ್ಥಿತಿಗತಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸುವ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ.

ಕೋವಿಡ್ ಸೋಂಕು ಬಹುತೇಕ ದೇಶಗಳಿಗೆ ಸಂಕಷ್ಟ ತಂದೊಡ್ಡಿದೆ. ಆದರೆ ನಾವೆಲ್ಲರೂ ಅವಕಾಶಗಳತ್ತಲೂ ಕಣ್ಣುಹಾಯಿಸಬೇಕು. ಭಾರತವನ್ನು ಉದಾಹರಣೆಯಾಗಿ ಹೇಳುವುದಾದರೆ, ಭಾರತ ಸರಕಾರವು ಆಯುಷ್ಮಾನ್‌ ಯೋಜನೆಗೆ ವೇಗ ನೀಡಲು ಉತ್ಸುಕವಾಗಿದೆ. ಹಾಗೆ ಮಾಡಲು ಇದು ಸಕಾಲ ಕೂಡ. ಇದೊಂದು ಶ್ಲಾಘನೀಯ ಹೆಜ್ಜೆಯೂ ಆಗಿದೆ ಎಂದಿದ್ದಾರೆ ಟೆಡ್ರೋಸ್‌.

ದಿಲ್ಲಿಯ ಚಿತಾಗಾರ ಸಿಬ್ಬಂದಿಗೆ ರಾತ್ರಿಯಿಡೀ ಕೆಲಸ
ಸ್ಮಶಾನದ ಗೇಟನ್ನು ಮುಚ್ಚುವಂತಿಲ್ಲ. ಚಿತಾಗಾರ ಸಿಬ್ಬಂದಿಯ ಕೆಲಸ ನಡು ರಾತ್ರಿಯಾದರೂ ಮುಗಿಯುತ್ತಿಲ್ಲ! ಇದು ದಿಲ್ಲಿಯ ಸ್ಮಶಾನಗಳ ಅವಸ್ಥೆ. ಕಳೆದ 2 ತಿಂಗಳಿನಲ್ಲಿ ಇಲ್ಲಿನ ಬಹು ದೊಡ್ಡ ರುದ್ರಭೂಮಿ ನಿಗಮ್‌ಬೋಧ್‌ ಘಾಟ್‌ ಬರೋಬ್ಬರಿ 500 ಕೋವಿಡ್ ಸೋಂಕಿತರ ಶವಗಳ ಅಂತ್ಯಸಂಸ್ಕಾರಕ್ಕೆ ಸಾಕ್ಷಿಯಾಗಿದೆ. ಸಾಮಾನ್ಯ ದಿನಗಳಲ್ಲಿ ರಾತ್ರಿ 8ಕ್ಕೆ ಸ್ಮಶಾನ ಸಿಬ್ಬಂದಿಯ ಕೆಲಸ ಮುಗಿಯುತ್ತಿತ್ತು.

ಕೋವಿಡ್ ಆರ್ಭಟದಿಂದಾಗಿ ಈಗ ತಡರಾತ್ರಿ, ಕೆಲವೊಮ್ಮೆ ಮುಂಜಾನೆ ತನಕವೂ ಶವಗಳ ಅಂತ್ಯಕ್ರಿಯೆ ನಡೆಸಲಾಗುತ್ತಿದೆ. 6 ವಿದ್ಯುತ್‌ ಚಿತಾಗಾರಗಳಲ್ಲಿ 3 ಕೈಕೊಟ್ಟಿವೆ. ಕಳೆದ ವಾರದಿಂದ ಕಟ್ಟಿಗೆ ಮೂಲಕ ಶವ ಸುಡಲಾಗುತ್ತಿದೆ. ‘ಕಟ್ಟಿಗೆ ಮೂಲಕ ಸುಟ್ಟ ಶವಗಳು ಭಸ್ಮಗೊಳ್ಳಲು ಕನಿಷ್ಠ 2 ಗಂಟೆಯಾದರೂ ಬೇಕು. ಸರಕಾರದವರು, ಮೃತರ ಸಂಬಂಧಿಕರು ಬೇಗ ಅಂತ್ಯಕ್ರಿಯೆ ನಡೆಸಿ ಎಂದು ಹೇಳುತ್ತಾರೆ. ಆದರೆ ಇಲ್ಲಿ ಮೂವರು ಮಾತ್ರ ಸಿಬಂದಿ ಇದ್ದಾರೆ. ಸ್ಮಶಾನಕ್ಕೆ ಸೋಂಕಿತರ ಶವಗಳು ಬಂದರೆ ಮುಟ್ಟಲು ಹೆದರಿಕೆಯಾಗುತ್ತಿದೆ’ ಎಂದು ಘಾಟ್‌ನ ಉಸ್ತುವಾರಿ ಸುಮನ್‌ ಕುಮಾರ್‌ ಗುಪ್ತಾ ಅಳಲು ತೋಡಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next