Advertisement
ಅದೊಂದು ಕತೆ. ಶಿವಾಜಿ ಮಹಾರಾಜರು ಒಮ್ಮೆ ಯುದ್ಧದಲ್ಲಿ ಸೋತು, ತಲೆಮೇಲೆ ಕೈಹೊತ್ತು ಕುಳಿತಿದ್ದರು. ಅವರೆದುರಿಗೆ ಒಂದು ಗೋಡೆಯಿತ್ತು. ಅಲ್ಲೊಂದು ಇರುವೆ ಆ ಗೋಡೆಯನ್ನೇರಲು ಇನ್ನಿಲ್ಲದಂತೆ ಯತ್ನಿಸಿ, ಕೆಳಕ್ಕೆ ಬೀಳುತ್ತಲೇ ಇತ್ತು. ಪ್ರತಿಸಲ ಬಿದ್ದಾಗಲೂ, ಅದು ಚಿಂತೆಗಿಟ್ಟು, ಪ್ರಯತ್ನ ಕೈಬಿಡಲಿಲ್ಲ. ಅದಕ್ಕೆ ಮತ್ತಷ್ಟು ಶಕ್ತಿ ಬರುತ್ತಿತ್ತು. ಪುನಃ ಗೋಡೆಯನ್ನು ಹತ್ತುವ ಉತ್ಸಾಹವು ಆ ಪುಟ್ಟ ದೇಹದೊಳಗೆ ಪುಟಿಯುತ್ತಲೇ ಇತ್ತು. ಕೊನೆಗೂ ಇರುವೆ ಗೋಡೆ ಏರಿಯೇಬಿಟ್ಟಿತು!
Related Articles
ದೀಪದ ಬುಡದಲ್ಲಿ ಸದಾ ಕತ್ತಲು ಎಂಬ ಮಾತಿಗೆ ಅಬ್ರಾಹಂ ಲಿಂಕನ್ ಬದುಕೂ ಹೊರತಲ್ಲ. ಅಮೆರಿಕದ ಅಧ್ಯಕ್ಷರಾಗಿ ಜಗತ್ತಿನ ಕಣ್ಮುಂದೆಯೇನೋ ಇವರು ಸೆಲೆಬ್ರಿಟಿಯಾದರು. ಆದರೆ, ಹಾಗೆ ಆಗುವುದಕ್ಕಿಂತ ಮುಂಚೆ ಅವರು ಹಲವು ಕಹಿ ಉಂಡಿದ್ದು ಅನೇಕರಿಗೆ ಗೊತ್ತೇ ಇಲ್ಲ. ಸೋಲು ಎನ್ನುವುದು ಅವರನ್ನು ಬೆಂಬಿಡದಂತೆ ಕಾಡಿತ್ತು. ಮನೆಯಿಂದ ಹೊರಬಿದ್ದರು. ಬ್ಯುಸಿನೆಸ್ ಕೈಕೊಟ್ಟಿತು. ಕೆಲಸ ಕಳಕೊಂಡರು. 17 ವರ್ಷ ಸಾಲದಲ್ಲೇ ಮುಳುಗಿದ್ದರು. ಕೈಹಿಡಿಯಬೇಕಾದ ಸಂಗಾತಿ ಇದ್ದಕ್ಕಿದ್ದಂತೆ ಇಹಲೋಕ ತ್ಯಜಿಸಿದಳು. ಖನ್ನತೆಗೊಳಗಾಗಿ 6 ತಿಂಗಳು ಬೆಡ್ ಮೇಲೆ ಮಲಗಿದ್ದರು. ನಿಂತ ಎಲೆಕ್ಷನ್ನಿನಲ್ಲೆಲ್ಲ ಸೋಲುಂಡರು. ಕೊನೆಗೂ 1860ರಲ್ಲಿ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ನಿಂತು, ಗೆಲವು ಕಂಡರು. ಅದೇ ಅವರ ಮೊದಲ ಗೆಲುವು. ಆ ಗೆಲುವೇ ಅವರ ಬದುಕಿಗೆ ಟರ್ನಿಂಗ್ ಪಾಯಿಂಟ್ ಕೊಟ್ಟಿತು. ಒಂದು ವೇಳೆ ಲಿಂಕನ್ ಧೈರ್ಯಗುಂದಿದ್ದರೆ, ಇವತ್ತು ನಾವ್ಯಾರೂ ಅವರನ್ನು ನೆನೆಯುತ್ತಿರಲಿಲ್ಲ.
Advertisement
ಯಾವುದೂ ಶಾಶ್ವತವಲ್ಲ…ಜೀವನ ಒಂದು ಪಯಣ. ಆ ಪಯಣದ ಹಾದಿಯಲ್ಲಿ ಕಷ್ಟ- ಸುಖ, ನೋವು- ನಲಿವು… ಎಲ್ಲ ಬರುತ್ತೆ, ಹೋಗುತ್ತೆ. ಇಲ್ಲಿ ಯಾವುದೂ ಶಾಶ್ವತವಲ್ಲ. ಕತ್ತಲು ಕಳೆದ ಮೇಲೆ ಬೆಳಕು ಬರುವುದು, ಬೆಳಕು ಕಳೆದ ಮೇಲೆ ಕತ್ತಲು ಆವರಿಸುವುದು ಸಹಜ. ಬದುಕಿನ ಹಾದಿಯಲ್ಲಿ ಸಂಕಷ್ಟಗಳು ಎದುರಾದಾಗ ಮನುಷ್ಯ ವಿಚಲಿತನಾಗಬಾರದು. ಇವೆಲ್ಲ ದೇವರು ನಮ್ಮನ್ನು ಪರೀಕ್ಷಿಸಲು, ಮಾನಸಿಕವಾಗಿ ಗಟ್ಟಿ ಮಾಡಲು ನೀಡಿದ ಪರೀಕ್ಷೆ ಅಂತಲೇ ಭಾವಿಸಬೇಕು. ಈ ಪರೀಕ್ಷೆಗೆ ಎದೆಗೊಡಲು ಅಂಜಿಬಿಟ್ಟರೆ, ನಾವೆಂದೂ ಪಾಸ್ ಆಗೆವು. ಗೆಲುವಿಗೆ ಆರೇ ಮೆಟ್ಟಿಲು
1. ಸೋಲು ಎನ್ನುವುದು ಹಿನ್ನಡೆ ಅಲ್ಲ, ಅದೊಂದು ಜೀವನ ಪಾಠ.
2. ಯಾವ ವಿಚಾರಕ್ಕೆ ನೀವು ಸೋತಿದ್ದೀರಿ ಎನ್ನುವುದನ್ನು ಆತ್ಮವಿಮರ್ಶೆ ಮಾಡಿಕೊಂಡು, ಅದನ್ನು ತಿದ್ದಿಕೊಳ್ಳಲು ಯತ್ನಿಸಿ.
3. “ಧೈರ್ಯಂ ಸರ್ವತ್ರ ಸಾಧನಂ’ ಎಂಬ ಮಾತಿದೆ. ಅಂಜಿಕೆಯನ್ನು ಸದಾ ಮೆಟ್ಟಿ ನಿಲ್ಲಿ.
4. ಯಾವುದೇ ಹೆಜ್ಜೆ ಇಡುವ ಮುನ್ನ ಒಂದು ಕ್ಷಣ ಆಲೋಚಿಸಿಯೇ, ಹೆಜ್ಜೆ ಇಡಿ.
5. ಗುರಿಯ ಹಾದಿಯಲ್ಲಿ ಶ್ರದ್ಧೆ, ಶ್ರಮ, ಏಕಾಗ್ರತೆ ನಿಮ್ಮ ಜತೆಗೂಡಲಿ.
6. ಯಾವುದಾದರೂ ಒಬ್ಬರು ಮಹಾತ್ಮರ ಬದುಕು ನಿಮಗೆ ಆದರ್ಶವಾಗಿರಲಿ. ರಂಗನಾಥ ಎನ್. ವಾಲ್ಮೀಕಿ