ಬಳ್ಳಾರಿ: ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯನ್ನು ಬಿಜೆಪಿ ಮೂರು ವಿಷಯಗಳನ್ನು ಮುಂದಿಟ್ಟು ಎದುರಿಸುತ್ತಿದೆ, ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆ ಮತ್ತು ಜನ ವಿರೋಧಿ ನೀತಿಯನ್ನು ಜನರ ಮುಂದಿಡಲಾಗುತ್ತಿದೆ ಎಂದು ಮಾಜಿ ಸಚಿವ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬುಧವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿ.ಟಿ.ರವಿ ‘ ಮೂರೂ ಕ್ಷೇತ್ರಗಳಲ್ಲಿಯೂ ಬಿಜೆಪಿ ಮೈತ್ರಿ ಕೂಟ ಗೆಲ್ಲುವ ವಿಶ್ವಾಸವಿದೆ. ಭ್ರಷ್ಟಾಚಾರದಲ್ಲಿ ವಿಶ್ವಕಪ್ ಇಟ್ಟರೆ ಅದು ಕಾಂಗ್ರೆಸ್ ಪಾಲಿಗೆ ಸಿಗಲಿದೆ. ಸಿದ್ದರಾಮಯ್ಯ ಅವರು ಮಿಸ್ಟರ್ ಕರೆಪ್ಟ್ ಆಗಿ ಬದಲಾಗಿದ್ದಾರೆ. ವಾಲ್ಮೀಕಿ ನಿಗಮದ ಹಣ ಕಾಂಗ್ರೆಸ್ ಪಕ್ಷದ ಚುನಾವಣೆಗೆ ಬಳಕೆಯಾಗಿದೆ. ಸ್ವಯಂ ಉದ್ಯೋಗಕ್ಕಾಗಿ ಬಳಕೆಯಾಗಬೇಕಿದ್ದ ಹಣ ಕೆಲವರ ಆಸ್ತಿ ಖರೀದಿಗಾಗಿ ಬಳಕೆಯಾಗಿದೆ. ನೇರ ಸಾಲಕ್ಕಾಗಿ ಬಳಕೆಯಾಗಬೇಕಿದ್ದ ಹಣ ಕೋಟ್ಯಂತರ ರೂ. ಮೌಲ್ಯದ ಕಾರು ಖರೀದಿಗೆ ಬಳಕೆಯಾಗಿದ್ದು, ಎಸ್ ಟಿ ಸಮುದಾಯಕ್ಕೆ ಆದ ಮಹಾ ಅನ್ಯಾಯವಾಗಿದೆ. ಕಾಂಗ್ರೆಸ್ ಸರಕಾರ ಎಸ್ ಟಿ ಸಮುದಾಯದ ಹಣ ಲೂಟಿ ಹೊಡೆದಿದೆ. ಎಸ್ ಸಿಪಿ, ಟಿಎಸ್ ಪಿ ಹಣ ದುರ್ಬಳಕೆಯಾಗಿದೆ. ಮೂಡದಲ್ಲಿ ಸ್ವಜನ ಪಕ್ಷಪಾತ ಸಿಎಂ ಅವರೇ ಮಾಡಿದ್ದಾರೆ ಈ ಎಲ್ಲವುದಕ್ಕೂ ತಪ್ಪಿತಸ್ಥರ ವಿರುದ್ಧ ಶಿಕ್ಷೆಯಾಗಬೇಕು’ ಎಂದರು.
‘ಅಬಕಾರಿ, ಆಸ್ತಿ, ವಾಹನ ಖರೀದಿ ನೋಂದಣಿ, ಪೆಟ್ರೋಲ್, ಡಿಸೇಲ್ ಮೇಲೆ ಸೆಸ್ ಹೆಚ್ಚಳ ಮಾಡಲಾಗಿದೆ. ಗೃಹ ಬಳಕೆ ವಿದ್ಯುತ್ ದರ, ಪಹಣಿ ಆರ್ ಟಿಸಿ, ಸ್ಟಾಂಪ್ ಪೇಪರ್ ಸೇರಿ ಹಾಲಿನಿಂದ ಆಲ್ಕೋಹಾಲ್ ವರೆಗೂ ಬೆಲೆ ಹೆಚ್ಚಳ ಮಾಡಿದೆ. ಇದರೊಂದಿಗೆ ಜನವಿರೋಧಿ ನೀತಿಗಳನ್ನು ಕೈಗೊಂಡಿದ್ದಾರೆ. ಸರಕಾರ ಆಡಳಿತಕ್ಕೆ ಬಂದ ಮೇಲೆ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಗಡಿ ಎರಡು ಸಾವಿರ ದಾಟಿದೆ. ಹೀಗಾಗಿ ರಾಜ್ಯದ ಜನ ಹಿತ ಮರೆತ ಸರಕಾರವಾಗಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಭ್ರಷ್ಟಾಚಾರ ಕಳಂಕ ಅವರ ಆತ್ಮವಿಶ್ವಾಸ ದುರ್ಬಲಗೊಳಿಸಿದೆ. ಈ ಸಂದರ್ಭವನ್ನು ಕಾಂಗ್ರೆಸ್ ನ ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ಪ್ಲ್ಯಾನ್ ಅನುಮತಿಗೆ ಒಂದು ಅಡಿಗೆ ನೂರು ರೂಪಾಯಿ ಕೊಡಬೇಕು. ಹೀಗಾಗಿ, ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತದಾರರು ತಕ್ಕಪಾಠ ಕಲಿಸಬೇಕು’ ಎಂದರು.
‘ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಪಂಚರ್ ಆಗಿದೆ. ಕೇವಲ ಹಬ್ಬ ಹರಿದಿನಗಳಿಗೆ ಸೀಮಿತವಾಗಿದೆ. ಗ್ಯಾರಂಟಿ ನೆಪದಲ್ಲಿ ಅಭಿವೃದ್ಧಿ ನಿಂತುಹೋಗಿವೆ. ಒಂದೂವರೆ ವರ್ಷದಲ್ಲಿ ದೂರ ದೃಷ್ಟಿ ಯೋಜನೆಗಳನ್ನು ರೂಪಿಸಿರುವ ಬಗ್ಗೆ ಜನರ ಮುಂದೆ ಇಡಲಿ. ಕಾಂಗ್ರೆಸ್ ವಿರುದ್ಧ ಜನ ಆಕ್ರೋಶದ ಜತೆಗೆ ಆ ಪಕ್ಷದ ಕೆಲ ಶಾಸಕರ ಆಕ್ರೋಶ ಸಹ ಇದೆ. ಈ ಎಲ್ಲದರ ಪರಿಣಾಮ ಚುನಾವಣೆ ಮೇಲೆ ಬೀರಲಿದೆ. ಜನ ದಾರಿ ತಪ್ಪಿರುವ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಬೇಕು’ ಎಂದರು.
‘ಸಚಿವ ಜಮೀರ್ ಅವರು ವಕ್ಫ್ ಬೋಡ್೯ ಮೂಲಕ ಲ್ಯಾಂಡ್ ಜಿಹಾದ್ ಜಾರಿಗೆ ತಂದಿದ್ದಾರೆ. ಕಾನೂನು ಬಳಸಿಕೊಳ್ಳುವ ಮೂಲಕ ಲ್ಯಾಂಡ್ ಜಿಹಾದ್ ಗೆ ಕಾಂಗ್ರೆಸ್ ಮಾಡುತ್ತಿದೆ. ಆಸ್ತಿ ಕಳೆದುಕೊಂಡವರಿಗೆ, ಬಡ ಮುಸ್ಲಿಂರಿಗೆ ವಕ್ಫ್ ಟ್ರಿಬುನಲ್ ನಲ್ಲಿ ನ್ಯಾಯ ಸಿಗುವ ಗ್ಯಾರಂಟಿ ಇಲ್ಲ. ತೋಳದ ಬಳಿ ಕುರಿ ಮರಿ ನ್ಯಾಯ ಕೇಳಿದಂತಾಗಲಿದೆ. ಕಾಂಗ್ರೆಸ್ ಸಂವಿಧಾನ ವಿರೋಧ ಅನುಸರಿಸುತ್ತಿದೆ. ವಿಪರ್ಯಾಸವೆಂದರೆ ಇಸ್ಲಾಮಿಕ್ ದೇಶಗಳಲ್ಲೂ ಈ ಕಾಯ್ದೆಯಿಲ್ಲ. ಕಾಂಗ್ರೆಸ್ ಗೆ ಸಂವಿಧಾನದ ಬಗ್ಗೆ ಗೌರವ, ವಿಶ್ವಾಸವಿದ್ದರೆ ಈ ಕಾಯ್ದೆಯನ್ನು ವಿರೋಧಿಸಬೇಕು. ರಾಜಕೀಯ ಕೊನೆ ಗಾಲದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರು ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಸತ್ಯದ ಪರ ನಿಲ್ಲಬೇಕು. ಸಂವಿಧಾನ ವಿರೋಧಿ ಕಾಯ್ದೆ ರದ್ದಾಗಬೇಕು. ಈ ಅನ್ಯಾಯದ ಕಾಯ್ದೆ ವಿರುದ್ಧ ಡ್ರಾಫ್ಟ್ ಸಿದ್ಧಗೊಂಡಿದ್ದು, ಜಂಟಿ ಸಮಿತಿಯ ಮುಂದಿದೆ’ ಎಂದರು.