Advertisement

Council: ಸದನದಲ್ಲಿ ಮುಡಾ ಗಲಾಟೆ: ಇಕ್ಕಟ್ಟಿಗೆ ಸಿಲುಕಿದ ಸಭಾಪತಿ

02:45 AM Jul 25, 2024 | Team Udayavani |

ಬೆಂಗಳೂರು: ಮುಡಾ ನಿವೇಶನ ಹಂಚಿಕೆಯಲ್ಲಿನ ಹಗರಣದ ಮೇಲಿನ ಚರ್ಚೆಗೆ ಅವಕಾಶ ನೀಡಬೇಕೋ ಅಥವಾ ನೀಡಬಾರದೋ ಎನ್ನುವ ಕುರಿತ ಪರ-ವಿರೋಧಗಳು ಸ್ವತಃ ಸಭಾಪತಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿತು. ಕೊನೆಗೆ ಯಾವುದೂ ನಿರ್ಣಯವಾಗದೆ ಉಂಟಾದ ಗದ್ದಲದಿಂದ ಸದನವನ್ನೇ ಮುಂದೂಡಿದ ಪ್ರಸಂಗ ನಡೆಯಿತು.

Advertisement

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆಯಲ್ಲಿ ನಡೆದ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ವಿಪಕ್ಷಗಳು ಬುಧವಾರ ಮಧ್ಯಾಹ್ನ ಮಂಡಿಸಿದ ನಿಲುವಳಿ ಸೂಚನೆ ಪ್ರಸ್ತಾವವನ್ನು ಸಭಾಪತಿ ಬಸವರಾಜ ಹೊರಟ್ಟಿ ತಳ್ಳಿಹಾಕಿದರು. ಆದರೆ ಬೆನ್ನಲ್ಲೇ ತಮ್ಮ ನಿರ್ಣಯವನ್ನು ಮರುಪರಿಶೀಲಿಸುವಂತೆ ಬಿಜೆಪಿ ನೀಡಿದ ಅರ್ಜಿಯೂ ಈ ಗೊಂದಲಕ್ಕೆ ಮುನ್ನುಡಿ ಬರೆಯಿತು.

ಸಭಾಪತಿ ನಿರ್ಣಯಕ್ಕೆ ಆಡಳಿತ ಪಕ್ಷದ ಸದಸ್ಯರು ಸಹಮತ ವ್ಯಕ್ತಪಡಿಸಿದರೆ, ವಿಪಕ್ಷ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಎರಡೂ ಕಡೆಯ ಸದಸ್ಯರು, ನಿಯಮಾವಳಿಗಳ ಪುಸ್ತಕಗಳನ್ನು ಹಿಡಿದು ತಮ್ಮ ನಿಲುವಿನ ಸಮರ್ಥನೆಗೆ ನಿಂತರು. ವಾಗ್ವಾದಗಳು ತಾರಕಕ್ಕೇರಿದಾಗ ಸಿಟ್ಟಿಗೆದ್ದ ಸಭಾಪತಿಗಳು, ನನಗೇ ನಿಯಮಗಳನ್ನು ಹೇಳಿಕೊಡ್ತೀರಾ? ನಾನು ಈಗಾಗಲೇ ನಿರ್ಣಯ ಕೊಟ್ಟಾಗಿದೆ. ಈಗ ಅದನ್ನು ಮರುಪರಿಶೀಲಿಸುವಂತೆ ಅರ್ಜಿ ಸಲ್ಲಿಸಿದ್ದೀರಿ. ಕೂಲಂಕಷವಾಗಿ ಪರಿಶೀಲಿಸಿ ಅನಂತರ ನಿರ್ಣಯ ಪ್ರಕಟಿಸುತ್ತೇನೆ’ ಎಂದು ಗದರಿದರು. ಆಗ ವಿಪಕ್ಷಗಳು, ನಿನ್ನೆ (ಮಂಗಳವಾರ) ಸ್ಥಳದಲ್ಲೇ ಕ್ಷಣಾರ್ಧದಲ್ಲಿ ನಿಲುವಳಿ ಸೂಚನೆಗೆ ನಿರ್ಣಯ ಪ್ರಕಟಿಸಿದ್ದೀರಿ. ಇದನ್ನೂ ಹಾಗೇ ಮಾಡಬೇಕು’ ಅಂತಾ ಪಟ್ಟುಹಿಡಿದರು.

ರೂಲ್‌ ಬುಕ್‌ ಹಿಡಿದು ವಾದ ಮಂಡನೆ
ವಾಗ್ವಾದಗಳು ಮತ್ತಷ್ಟು ಜೋರಾದವು. ಆಡಳಿತ ಪಕ್ಷದಿಂದ ಬಿ.ಕೆ.ಹರಿಪ್ರಸಾದ್‌, ಯು.ಬಿ.ವೆಂಕಟೇಶ್‌, ಪ್ರಕಾಶ್‌ ರಾಥೋಡ್‌, ಸಲೀಂ ಅಹಮದ್‌ ಮತ್ತಿತರರು ನಿರ್ಣಯ ನೀಡಿದ ಮೇಲೆ ಮುಗಿಯಿತು. ಮತ್ತೆ ಅವಕಾಶ ನೀಡುವಂತಿಲ್ಲ. ಒಂದು ನಿಲುವಳಿ ಸೂಚನೆಗೆ ಮಾತ್ರ ಅವಕಾಶ ಇದೆ. ಮರುಪರಿಶೀಲನೆಗೆ ಅರ್ಜಿ ಸಲ್ಲಿಸಿದರೂ ಅದಕ್ಕೆ ಮರುದಿನ ರೂಲಿಂಗ್‌ ಕೊಡಬೇಕು ಎಂದು ವಾದಿಸಿದರು.

ಪರಿಷತ್ತಿನಲ್ಲೂ ಮುಂದುವರಿದ ಗಲಾಟೆ, ಕೋಲಾಹಲ
ಮುಡಾ ನಿವೇಶನ ಹಂಚಿಕೆ ಹಗರಣ ವಿಚಾರ ಬುಧವಾರ ವಿಧಾನಪರಿಷತ್‌ನಲ್ಲೂ ಪ್ರತಿಧ್ವನಿಸಿತು. ಪರಸ್ಪರ ವಾಗ್ವಾದದಿಂದ ಕೋಲಾಹಲ ಸೃಷ್ಟಿಯಾಗಿ, ಸದನವನ್ನು ಮುಂದೂಡಲಾಯಿತು. ಇದರ ಅನಂತರವೂ ಪಟ್ಟುಹಿಡಿದ ವಿಪಕ್ಷ ಗಳ ಸದಸ್ಯರು, ಸ್ಥಳದಲ್ಲೇ ಅಹೋರಾತ್ರಿ ಧರಣಿ ನಡೆಸಿದರು.

Advertisement

ಮಧ್ಯಾಹ್ನ ಸದನ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ವಿಪಕ್ಷಗಳು, ಇದೊಂದು ಬಹುದೊಡ್ಡ ಹಗರಣವಾಗಿದ್ದು, ಇದರಲ್ಲಿ ಸ್ವತಃ ಮುಖ್ಯಮಂತ್ರಿಗಳ ಹೆಸರು ಕೇಳಿಬರುತ್ತಿರುವುದರಿಂದ ಚರ್ಚೆಗೆ ಅವಕಾಶ ನೀಡಲೇಬೇಕು’ ಎಂದು ಪಟ್ಟುಹಿಡಿದವು. ಆದರೆ, ಸಭಾಪತಿಗಳು ಈ ಸಂಬಂಧ ಈಗಾಗಲೇ ರೂಲಿಂಗ್‌ (ನಿರ್ಣಯ) ಕೊಟ್ಟಾಗಿದೆ. ಹಾಗಾಗಿ, ಮತ್ತೆ ಚರ್ಚೆಗೆ ಅವಕಾಶ ಎಲ್ಲಿಂದ ಬಂತು’ ಎಂದು ಕೇಳಿದರು. ಇದು ಪರ-ವಿರೋಧದ ಅಲೆ ಎಬ್ಬಿಸಿತು.

Advertisement

Udayavani is now on Telegram. Click here to join our channel and stay updated with the latest news.

Next