Advertisement
ನೂತನ ವರ್ಷಾರಂಭದಲ್ಲಿ ಮಹದೇಶ್ವರಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಲು ಸರಕಾರ ಚಿಂತನೆ ನಡೆಸಿತ್ತು. ಆದರೆ ದಿನಾಂಕ ನಿಗದಿಯಾಗಿರಲಿಲ್ಲ. ಪ್ರಸ್ತುತ ಸಿದ್ದರಾಮಯ್ಯ ಅವರು ಜ. 9 ಅಥವಾ 16ರಂದು ಸಭೆ ನಡೆಸಲು ತಯಾರಿ ನಡೆಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ 15 ಕೋಟಿ ರೂ. ವೆಚ್ಚದಡಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ.
ಚಾಮರಾಜನಗರ ಜಿಲ್ಲೆಯು ಮೈಸೂರು ಜಿಲ್ಲೆಯಿಂದ ಬೇರ್ಪಟ್ಟು ನೂತನ ಜಿಲ್ಲೆಯಾಗಿ 27 ವರ್ಷ ಕಳೆದರೂ ಇನ್ನೂ ಪೂರ್ಣ ಪ್ರಮಾಣದ ಮೂಲ ಸೌಲಭ್ಯಗಳು ದೊರಕಿಲ್ಲ. ನಂಜುಂಡಪ್ಪ ವರದಿ ಪ್ರಕಾರ ಚಾಮರಾಜನಗರ ಹಿಂದುಳಿದ ಜಿಲ್ಲೆಯಾಗಿದೆ. ಆದರೆ ಜಿಲ್ಲೆಯ ಅಭಿವೃದ್ಧಿಗೆ ಈವರೆಗೂ ಸರಕಾರದಿಂದ ವಿಶೇಷ ಅನುದಾನ ದೊರೆತಿಲ್ಲ. ಹಾಗಾಗಿ ಬೆಟ್ಟದಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ಜಿಲ್ಲೆಯ ಸ್ಥಳೀಯ ಸಮಸ್ಯೆಗಳಿಗೆ ಹೆಚ್ಚಿನ ಒತ್ತು ನೀಡಲು ಸಾಧ್ಯವಾಗಲಿದ್ದು ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಜಿಲ್ಲೆಯ ಜನರು ನಿರೀಕ್ಷಿಸಿದ್ದಾರೆ. ಮಹದೇಶ್ವರ ಬೆಟ್ಟದಲ್ಲಿ ಮೊದಲ ಬಾರಿಗೆ ಕ್ಯಾಬಿನೆಟ್ ಸಭೆ ನಡೆಯಲಿರುವುದರಿಂದ ಜಿಲ್ಲೆಯ ಅಭಿವೃದ್ಧಿ ಸಂಬಂಧ ಪ್ರಮುಖ ಯೋಜನೆಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗುತ್ತದೆ. ಹಾಗಾಗಿ ಸಭೆಯು ಯಶಸ್ವಿಯಾಗಬೇಕು. ಈ ನಿಟ್ಟಿನಲ್ಲಿ ಸಮಿತಿ ರಚಿಸಿ ಜವಾಬ್ದಾರಿ ನೀಡಲಾಗುವುದು.
– ಶಿಲ್ಪಾನಾಗ್, ಜಿಲ್ಲಾಧಿಕಾರಿ