Advertisement

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

07:56 PM Dec 26, 2024 | Team Udayavani |

ಬೆಳಗಾವಿ: 1924ರ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ಅಂಗವಾಗಿ ಬೆಳಗಾವಿಯು ಮೈಸೂರಿನ ದಸರಾ ರೀತಿಯಲ್ಲೇ ಸಿಂಗರಿಸಲ್ಪಟ್ಟಿದೆ. ಅಂತೆಯೇ ಕಾಂಗ್ರೆಸ್‌ ಪಕ್ಷದ ಉನ್ನತ ನಾಯಕರ ಸ್ವಾಗತ ಕೋರಿ ಪ್ರದರ್ಶಿಸಿರುವ ಪೋಸ್ಟರ್‌ಗಳಲ್ಲಿ ಭಾರತದ ನಕ್ಷೆ ತಪ್ಪಾಗಿ ಚಿತ್ರಿಸಿ ಎಡವಟ್ಟು ಮಾಡಿಕೊಂಡಿದ್ದು, ಈ ಕುರಿತಂತೆ ವಿವಾದ ಭುಗಿಲೆದ್ದು ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

Advertisement

ಕಾಂಗ್ರೆಸ್ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಬೆಳಗಾವಿ ನಗರಾದ್ಯಂತ ಪೋಸ್ಟರ್‌ಗಳಲ್ಲಿ ಕಾಣಿಸಿಕೊಂಡಿರುವ ಭಾರತದ ನಕ್ಷೆಯು ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ ಪ್ರದೇಶ ಮತ್ತು ಪ್ರಸ್ತುತ ಚೀನಾದ ಆಡಳಿತದಲ್ಲಿರುವ ಅಕ್ಸಾಯ್ ಚಿನ್ ಪ್ರದೇಶ ಬಿಟ್ಟು ಬಿಡಲಾಗಿದೆ. ಅವು ಜಮ್ಮು ಮತ್ತು ಕಾಶ್ಮೀರದ ಅವಿಭಾಜ್ಯ ಅಂಗವಾಗಿದೆ.

ಕಾಂಗ್ರೆಸ್ ಅನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಕೇಂದ್ರ ಬಿಜೆಪಿ. ವಿಪಕ್ಷ ನಾಯಕ ರಾಹುಲ್ ಗಾಂಧಿಯ ಮೊಹಬ್ಬತ್ ಕಿ ದುಕಾನ್ ಚೀನಾಕ್ಕೆ ಯಾವಾಗಲೂ ತೆರೆದಿರುತ್ತದೆ. ಕಾಂಗ್ರೆಸ್ಸಿಗರ ಮನಸ್ಥಿತಿ ರಾಷ್ಟ್ರವನ್ನು ಒಡೆಯುವುದೇ ಆಗಿದೆ ಎಂದು ಆರೋಪಿಸಿದೆ. ಮತ್ತೊಂದೆಡೆ ರಾಜ್ಯ ಬಿಜೆಪಿ ಸಹ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಗುರಿಯಾಗಿಸಿಕೊಂಡಿದ್ದು ಭಾರತೀಯ ಭೂಪಟವನ್ನು “ತಪ್ಪಾಗಿ ಚಿತ್ರಿಸಿ” ತನ್ನ “ಮತ ಬ್ಯಾಂಕ್”  ಸಮಾಧಾನಪಡಿಸುವ ಮಾರ್ಗವೆಂದು ಹೇಳಿದೆ.

ನಕಾಶೆ ತಿರುಚಿರುವುದು ನಿಜಕ್ಕೂ ದೇಶದ್ರೋಹ:

ಮತ್ತೊಂದೆಡೆ, ರಾಜ್ಯ ಬಿಜೆಪಿ ಕೂಡ ಎಕ್ಸ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಪಾಕ್ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಕಾಂಗ್ರೆಸ್‌ಗೆ ಧಾರೆ ಎರೆದು ಕೊಟ್ಟಿದೆ. ಗಾಂಧಿ ಭಾರತ ಹೆಸರಿನಲ್ಲಿ ಭಾರತದ ನಕಾಶೆಯನ್ನು ಕಾಂಗ್ರೆಸ್ಸಿಗರು ತಿರುಚಿರುವುದು ನಿಜಕ್ಕೂ ದೇಶದ್ರೋಹ. ವೈಯಕ್ತಿಕ ಸ್ವಾರ್ಥ ಸಾಧನೆಗಾಗಿ, ಓಲೈಕೆ ರಾಜಕಾರಣಕ್ಕಾಗಿ ಕಾಂಗ್ರೆಸ್ ಎಂತಹಾ ಹೀನ ಕೆಲಸಕ್ಕಾದರೂ “ಸಿದ್ಧ ” ಎಂಬುದಕ್ಕೆ ಬೆಳಗಾವಿಯಲ್ಲಿ ಹಾಕಿಸಿರುವ ಬ್ಯಾನರ್‌ಗಳೇ ಸಾಕ್ಷಿ.  ಬ್ಯಾನರ್ ಗಳ ತೆರವುಗೊಳಿಸಿ, ಭಾರತದ ನಕಾಶೆಯನ್ನು ತಿರುಚಿದ ದೇಶದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದೆ.


ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಈ ಚಿತ್ರ ಕಾಂಗ್ರೆಸ್ಸಿನ ದೇಶದ್ರೋಹವನ್ನು ಎತ್ತಿ ತೋರಿಸುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ದೇಶ, ಭಾಷೆ, ಅಂಬೇಡ್ಕರ್, ಮಹಾತ್ಮಾ ಗಾಂಧಿ, ಕಾಶ್ಮೀರ ಎಲ್ಲವು ಮತವನ್ನು ಸೆಳೆಯಲು ಮಾತ್ರವೇ ಬೇಕಾಗಿದೆ ಹೊರತು ನಿಜವಾಗಿ ಅಲ್ಲ. ಕಾಂಗ್ರೆಸ್ಸಿಗೆ ನಿಜವಾಗಿ ಬೇಕಾದ್ದು ಅಧಿಕಾರ ಹಾಗೂ ದುರಾಡಳಿತ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next