ಬೆಂಗಳೂರು:ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ಕೊನೆಯ ದಿನ. ಆದರೆ ಬಿಜೆಪಿಯು ಇದುವರೆಗೂ ಅಧಿಕೃತವಾಗಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿಲ್ಲ. ಆದರೆ ರಾತ್ರೋರಾತ್ರಿ ಪಟ್ಟಿ ಅಂತಿಮವಾಗಿದ್ದು, ನಾಲ್ವರಿಗೆ ಬಿ ಫಾರಂ ವಿತರಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳಾಗಿ ಲಿಂಗರಾಜ ಪಾಟೀಲ್, ಚಲವಾದಿ ನಾರಾಯಣ ಸ್ವಾಮಿ, ಮಂಜುಳಾ ಮತ್ತು ಕೇಶವಪ್ರಸಾದ್ ಬಹುತೇಕ ಫೈನಲ್ ಎಂದು ಬಿಜೆಪಿ ಮೂಲಗಳು ಹೇಳಿವೆ.
ಇದನ್ನೂ ಓದಿ:ರಿಲೇಯೋಗ ಈ ಬಾರಿಯ ಆಕರ್ಷಣೆ: ಜೂ.21ರಂದು ಮೈಸೂರಲ್ಲಿ ಪ್ರಧಾನಿ ನೇತೃತ್ವದಲ್ಲಿ ಕಾರ್ಯಕ್ರಮ
ಒಬಿಸಿ, ಎಸ್ ಸಿ, ಲಿಂಗಾಯತ ಮತ್ತು ಒಕ್ಕಲಿಗ ಮಹಿಳೆ, ಹೀಗೆ ಎಲ್ಲಾ ಲೆಕ್ಕಾಚಾರ ನಡೆಸಿ ಬಿಜೆಪಿ ಟಿಕೆಟ್ ನೀಡಿದೆ. ರಾಜ್ಯ ಕೋರ್ ಕಮಿಟಿ ಶಿಫಾರಸು ಮಾಡಿದ್ದ ಹೆಸರುಗಳಲ್ಲೇ ಟಿಕೆಟ್ ಅಂತಿಮ ಮಾಡಲಾಗಿದೆ. ಆದರೆ ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರಗೆ ಟಿಕೆಟ್ ನಿರಾಕರಿಸಲಾಗಿದೆ.
ವಿಜಯೇಂದ್ರಗೆ ಟಿಕೆಟ್ ಕೈ ತಪ್ಪಿದ್ದು ರಾಜಕೀಯ ವಲಯದಲ್ಲಿ ನಾನಾ ಚರ್ಚೆಗೆ ಕಾರಣವಾಗಿದೆ. ವಿಜಯೇಂದ್ರ ಕಾರಣಕ್ಕೆ ಅಭ್ಯರ್ಥಿಗಳ ಲಿಸ್ಟ್ ಅಂತಿಮಗೊಳಿಸಲು ತಡರಾತ್ರಿವರೆಗೆ ಕಸರತ್ತು ನಡೆಸಲಾಗಿತ್ತು. ಆದರೆ ವಿಜಯೇಂದ್ರಗೆ ಟಿಕೆಟ್ ನೀಡಿದರೆ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ ಆರೋಪಕ್ಕೆ ತುತ್ತಾಗುವ ಆತಂಕದಿಂದ ಬಿಜೆಪಿ ವರಿಷ್ಠರು ಹಿಂದೇಟು ಹಾಕಿದ್ದಾರೆ ಎನ್ನುತ್ತಿವೆ ಮೂಲಗಳು.