Advertisement

Assembly By Election: ನಿಖಿಲ್‌ ಗೆಲುವಿಗೆ ಬಿಜೆಪಿ-ಜೆಡಿಎಸ್‌ ಜಂಟಿ ಕಾರ್ಯತಂತ್ರ

12:27 AM Oct 27, 2024 | Team Udayavani |

ಬೆಂಗಳೂರು: ಚನ್ನಪಟ್ಟಣ, ಶಿಗ್ಗಾವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫ‌ಲಿತಾಂಶ ರಾಜ್ಯ ರಾಜಕಾರಣದ ದಿಕ್ಕನ್ನು ಬದಲಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅಭಿಪ್ರಾಯಪಟ್ಟಿದ್ದಾರೆ.

Advertisement

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಹಿನ್ನೆಲೆಯಲ್ಲಿ ನಡೆದ ಜಂಟಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯನ್ನು ನಾವು ಸವಾಲಾಗಿ ಸ್ವೀಕಾರ ಮಾಡಿದ್ದೇವೆ. ಶಿಗ್ಗಾವಿ ಕ್ಷೇತ್ರವನ್ನು ಬಿಜೆಪಿ ಈಗಾಗಲೇ ಗೆದ್ದಿರುವಂಥ ವಾತಾವರಣ ನಿರ್ಮಾಣವಾಗಿದೆ. ಸಂಡೂರಿನಲ್ಲೂ ಬಿಜೆಪಿ ಐತಿಹಾಸಿಕ ಗೆಲುವಿನ ನಿರೀಕ್ಷೆಯಲ್ಲಿದೆ. ಚನ್ನಪಟ್ಟಣದಲ್ಲಿ ನಿಖಿಲ್‌ ಕುಮಾರಸ್ವಾಮಿ ಎನ್‌ಡಿಎ ಅಭ್ಯರ್ಥಿಯಾಗಿ ಗೆಲುವು ಸಾಧಿಸುತ್ತಾರೆಂದು ಭವಿಷ್ಯ ನುಡಿದರು. ಚುನಾವಣೆಯಲ್ಲಿ ನಮ್ಮ ಪ್ರತಿಯೊಬ್ಬ ಕಾರ್ಯಕರ್ತರು ಹಗಲು- ರಾತ್ರಿ ಶ್ರಮ ಹಾಕಿ ನಿಖಿಲ್‌ ಕುಮಾರಸ್ವಾಮಿ ಅವರನ್ನು ದೊಡ್ಡ ಅಂತರದಲ್ಲಿ ಗೆಲ್ಲಿಸುವುದಕ್ಕೆ ಕಾರ್ಯತಂತ್ರ ರೂಪಿಸಿದ್ದೇವೆ ಎಂದರು.

ನಿಖಿಲ್‌ ಕುಮಾರಸ್ವಾಮಿ ಮಾತನಾಡಿ, ಬದಲಾದ ರಾಜಕಾರಣದ ಸನ್ನಿವೇಶದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ನನ್ನನ್ನು ಘೋಷಿಸಿದ್ದಾರೆ. ನಿನ್ನೆ ನಾಮಪತ್ರ ಸಲ್ಲಿಕೆಗೆ ಸಹಸ್ರಾರು ಸಂಖ್ಯೆಯಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಬಂದು ಆಶೀರ್ವಾದ ಮಾಡಿದ್ದಾರೆ. 3 ಕಡೆ ಎನ್‌ಡಿಎ ಅಭ್ಯರ್ಥಿಗಳ ಗೆಲುವಿಗೆ ಸ್ಪಷ್ಟ ಸಂದೇಶವನ್ನು ವಿಜಯೇಂದ್ರ ಕೊಟ್ಟಿದ್ದಾರೆ ಎಂದು ವಿವರಿಸಿದರು.


“ಈ ಚುನಾವಣೆಯನ್ನು ಸವಾಲಾಗಿ ಪರಿಗಣಿಸಿದ್ದೇವೆ. 3 ಕ್ಷೇತ್ರದ ಉಪ ಚುನಾವಣೆ ರಾಜ್ಯ ರಾಜಕಾರಣದ ದಿಕ್ಕು ಬದಲಿಸಲಿದೆ. ಎರಡೂ ಪಕ್ಷಗಳ ಕಾರ್ಯಕರ್ತರು ರಣೋತ್ಸಾಹದಲ್ಲಿ ಇದ್ದಾರೆ. ದೊಡ್ಡ ಅಂತರದಲ್ಲಿ ನಿಖಿಲ್‌ ಗೆಲ್ಲಬೇಕು. ಈ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಿದ್ದೇವೆ.” – ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

“ಈಗಾಗಲೇ ನಾಮಪತ್ರ ಸಲ್ಲಿಸಿದ್ದೇನೆ. ಬಿಜೆಪಿ ರಾಜ್ಯ ಮಟ್ಟದ ನಾಯಕರು, ತಂದೆ ಸಮಾನ ಯಡಿಯೂರಪ್ಪ, ಕುಮಾರಣ್ಣ, ದೇವೇಗೌಡರು ಕುಳಿತು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಂಡಿದ್ದಾರೆ. ಬದಲಾದ ರಾಜಕೀಯ ಪರಿಸ್ಥಿತಿ, ಕಾರ್ಯಕರ್ತರ ಆಕಾಂಕ್ಷೆಯಿಂದ ನನ್ನ ಆಯ್ಕೆ ಮಾಡಿದ್ದಾರೆ. ಸಹೋದರ ಸಮಾನ ವಿಜಯೇಂದ್ರ ಸ್ಥಳೀಯ ಬಿಜೆಪಿ ಮುಖಂಡರಿಗೆ ನನ್ನ ಗೆಲ್ಲಿಸುವಂತೆ ಸಂದೇಶ ರವಾನೆ ಮಾಡಿದ್ದಾರೆ.” – ನಿಖಿಲ್‌ ಕುಮಾರಸ್ವಾಮಿ, ಚನ್ನಪಟ್ಟಣ ಎನ್‌ಡಿಎ ಅಭ್ಯರ್ಥಿ

Advertisement
Advertisement

Udayavani is now on Telegram. Click here to join our channel and stay updated with the latest news.

Next