Advertisement

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

12:43 AM Nov 15, 2024 | Team Udayavani |

ಬೆಂಗಳೂರು: ಕೋವಿಡ್‌ ಅಕ್ರಮ ಸಂಬಂಧ ನ್ಯಾ| ಮೈಕಲ್‌ ಡಿ’ಕುನ್ಹಾ ಮಧ್ಯಾಂತರ ವರದಿಯನ್ನು ಆಧರಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಮಾಜಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಸೇರಿದಂತೆ ವರದಿಯಲ್ಲಿ ಉಲ್ಲೇಖಗೊಂಡ ವ್ಯಕ್ತಿ, ಸಂಸ್ಥೆಗಳೆಲ್ಲರ ವಿರುದ್ಧ ಎಫ್ಐಆರ್‌ ದಾಖಲಿಸುವಂತೆ ಸಚಿವ ಸಂಪುಟ ಸಭೆಯಲ್ಲಿ ಹಿರಿಯ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಒತ್ತಡ ಹೇರಿದ್ದಾರೆ.
ಕಾಂಗ್ರೆಸ್‌ ಸರಕಾರದ ವಿರುದ್ಧ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಸರಣಿ ಆರೋಪ ಮಾಡುತ್ತಿರುವ ಬಿಜೆಪಿಗೆ ಸಂಪುಟದ ಈ ನಿಲುವು ತೀವ್ರ ಇಕ್ಕಟ್ಟು ಸೃಷ್ಟಿಸುವ ಸಾಧ್ಯತೆ ಇದ್ದು, ಬಿಜೆಪಿ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಯಡಿಯೂರಪ್ಪ ವಿರುದ್ಧವೇ ಎಫ್ಐಆರ್‌ ದಾಖಲಿಸಿ ಎಸ್‌ಐಟಿ ತನಿಖೆ ನಡೆಸಿದರೆ ಬಿಜೆಪಿಯ ವರಿಷ್ಠ ನಾಯಕರನ್ನೇ ಮುಜುಗರಕ್ಕೆ ಸಿಲುಕಿಸಬಹುದೆಂಬ ಅಭಿಪ್ರಾಯ ವ್ಯಕ್ತವಾಗಿದೆ.

Advertisement

ಕುನ್ಹಾ ವರದಿಯನ್ನು ಸಂಪುಟದಲ್ಲಿ ಮಂಡಿಸಿ ಚರ್ಚೆ ನಡೆಸುವುದು ಆರಂಭದ ಅಜೆಂಡಾದಲ್ಲಿ ದಾಖಲಾಗಿರಲಿಲ್ಲ. ಆದರೆ ಹೆಚ್ಚುವರಿಯಾಗಿ ಈ ವಿಷಯ ಸೇರ್ಪಡೆಗೊಂಡಿದ್ದು, ಬಿಜೆಪಿ ನಾಯಕರ ಟೀಕೆಗೆ ಇನ್ನೂ ಹೆಚ್ಚಿನ ಅವಕಾಶ ನೀಡುವುದು ಬೇಡ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ವರದಿಯಲ್ಲಿ ಯಾವುದೇ ವ್ಯಕ್ತಿ, ಖಾಸಗಿ ಹಾಗೂ ಸರಕಾರಿ ಸ್ವಾಮ್ಯದ ಸಂಸ್ಥೆ ಹಾಗೂ ಟಾಸ್ಕ್ಪೋರ್ಸ್‌ನಿಂದ ಅಕ್ರಮಕ್ಕೆ ದಾರಿಯಾಗಿದ್ದರೂ ರಿಯಾಯಿತಿ ನೀಡುವುದು ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಎಲ್ಲರ ವಿರುದ್ಧವೂ ಎಫ್ಐಆರ್‌ ದಾಖಲಿಸಿಯೇ ತನಿಖೆ ನಡೆಸಬೇಕೆಂದು ಕೆಲ ಸಚಿವರು ಬಲವಾಗಿ ಆಗ್ರಹಿಸಿದ್ದಾರೆ. ಹೀಗಾಗಿ ಸಚಿವ ಸಂಪುಟ ಉಪಸಮಿತಿಯ ಮೌಖೀಕ ಅಭಿಪ್ರಾಯವನ್ನೂ ಆಧರಿಸಿ ಎಸ್‌ಐಟಿ ರಚನೆಗೆ ಸಿದ್ದರಾಮಯ್ಯ ಹಸುರು ನಿಶಾನೆ ತೋರಿದರು ಎಂದು ಉನ್ನತ ಮೂಲಗಳು ತಿಳಿಸಿವೆ.

ಸಾವಿನ ಸಂಖ್ಯೆಯ ಬಗ್ಗೆ ಪ್ರಸ್ತಾವ
ಹಿಂದಿನ ಬಿಜೆಪಿ ಸರಕಾರ ಕೋವಿಡ್‌ ಅವಧಿ ಯಲ್ಲಿ ಆದ ಸಾವಿನ ವಾಸ್ತವ ಸಂಖ್ಯೆಯನ್ನು ಮುಚ್ಚಿಟ್ಟು ಕೇಂದ್ರ ಸರಕಾರಕ್ಕೆ ತಪ್ಪು ಮಾಹಿತಿ ರವಾನೆ ಮಾಡಲಾಗಿತ್ತು ಎಂಬ ವಿಚಾರವೂ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ‌ ಚರ್ಚೆಗೆ ಒಳಗಾಗಿದೆ. ಕೇಂದ್ರ ಸ್ವಾಮ್ಯಕ್ಕೆ ಒಳಪಟ್ಟ ರಾಷ್ಟ್ರೀಯ ಸಂಸ್ಥೆಗಳ ವರದಿ ಆಧರಿಸಿ ರಾಜ್ಯದಲ್ಲಿ ಸುಮಾರು 4.20 ಲಕ್ಷ ಜನರು ಕೋವಿಡ್‌ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಅಂದಿನ ಸರಕಾರ ಕೇವಲ 30 ಸಾವಿರ ಸಾವಿನ ನಮೂದಿಸಿದೆ. ಈ ಬಗ್ಗೆಯೂ ಶೋಧ ನಡೆಸಬೇಕೆಂದು ಸಚಿವರೊಬ್ಬರು ಪ್ರಸ್ತಾವಿಸಿದ್ದಾರೆ.

ಯಾರು ಗುರಿ?
ಇದೆಲ್ಲದರ ಜತೆಗೆ ಕೋವಿಡ್‌ ಸಂದರ್ಭ ರಚನೆಯಾಗಿದ್ದ ಆರೋಗ್ಯ ಕಾರ್ಯಪಡೆಯ ಶಿಫಾರಸುಗಳ ಆಧಾರದ ಮೇಲೆ ಖರೀದಿ ಅಕ್ರಮ ನಡೆದಿದ್ದರೆ ಅವರನ್ನೂ ತನಿಖೆಗೆ ಒಳಪಡಿಸಿದರೆ ತಪ್ಪೇನು? ಎಂಬ ವಿಚಾರ ಪ್ರಸ್ತಾವವಾಗಿದೆ. ಹೀಗಾಗಿ ಕಾರ್ಯಪಡೆಯ ಮಾಜಿ ಅಧ್ಯಕ್ಷ, ಸಂಸದ ಡಾ| ಸಿ.ಎನ್‌. ಮಂಜುನಾಥ್‌ ಅವರತ್ತಲೂ ತನಿಖೆಯ ಗುರಿ ಇಡುವ ಸಾಧ್ಯತೆ ಇದೆ. ಆದರೆ ಸಚಿವರೊಬ್ಬರ ಪ್ರಕಾರ ವರದಿಯಲ್ಲಿ ಈ ವಿಚಾರ ಪ್ರಸ್ತಾವವಿಲ್ಲ. ಬೆಡ್‌ ಖರೀದಿಗೆ ಸಂಬಂಧಪಟ್ಟಂತೆ ಸರಕಾರ ಸಲ್ಲಿಸಿದ್ದ ಅನಗತ್ಯ ಬೇಡಿಕೆಗಳನ್ನು ಡಾ| ಮಂಜುನಾಥ್‌ ತಿರಸ್ಕರಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಮತ್ತೊಂದಿಷ್ಟು ಕಂತು ಸೋರಿಕೆ
ಇದೆಲ್ಲದರ ಮಧ್ಯೆ ನ್ಯಾ| ಡಿ’ಕುನ್ಹಾ ವರದಿಯ ಇನ್ನಷ್ಟು ಪುಟಗಳು ಸೋರಿಕೆಯಾಗಿವೆ. ಒಟ್ಟು 3 ಹಂತದಲ್ಲಿ ವರದಿಯ ಅಂಶಗಳು ಸಾರ್ವಜನಿಕ ಬಳಕೆಗೆ ಲಭ್ಯವಾಗಿದೆ. ಆದರೆ ಸರಕಾರ ವರದಿ ಸೋರಿಕೆ ಸಾಧ್ಯತೆಯನ್ನು ನಿರಾಕರಿಸಿದೆ.

Advertisement

ಮಂಕಾಗಿದ್ದ ಜಮೀರ್‌
ರಾಜ್ಯದಲ್ಲಿ ನಡೆದ ಮೂರು ಉಪಚುನಾವಣೆಗಳ ಬಗ್ಗೆಯೂ ಸಂಪುಟ ಸಭೆಯಲ್ಲಿ ಪ್ರಸ್ತಾವವಾಗಿದ್ದು, ಗೆಲ್ಲುವ ವಿಶ್ವಾಸವನ್ನು ಸಿಎಂ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ. ಆದರೆ ಸಚಿವ ಸಂಪುಟ ಸಭೆಯಲ್ಲಿ ಸಚಿವ ಜಮೀರ್‌ ಅಹ್ಮದ್‌ಖಾನ್‌ ಮಾತ್ರ ತುಸು ಮಂಕಾಗಿದ್ದರು ಎಂದು ಉನ್ನತ ಮೂಲಗಳು ತಿಳಿಸಿವೆ. ಇದೇ ವೇಳೆ ಹಿರಿಯ ಸಚಿವರ ಜತೆಗೆ ಪ್ರತ್ಯೇಕವಾಗಿ ನಡೆಸಿದ ಚರ್ಚೆ ಮಾತ್ರ ಕುತೂಹಲ ಸೃಷ್ಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next