Advertisement
ಆಪರೇಷನ್ ಕಮಲ ಕಾರ್ಯಾಚರಣೆ ಮೂಲಕ ಇಪ್ಪತ್ತು ಶಾಸಕರನ್ನು ಸೆಳೆದು ಸಮ್ಮಿಶ್ರ ಸರ್ಕಾರವನ್ನೇ ಕೆಡವಲು ಕಾರ್ಯತಂತ್ರ ರೂಪಿಸಿದ್ದ ಬಿಜೆಪಿ ಅದು ವಿಫಲವಾದ ನಂತರ ಎಂಟು ಶಾಸಕರನ್ನಾದರೂ ಸೆಳೆದು ವಿಧಾನಪರಿಷತ್‌ನ ಮೂರೂ ಸ್ಥಾನ ಗೆಲ್ಲಲು ಆಪರೇಷನ್ ಎಂಎಲ್‌ಸಿ ಕಾರ್ಯಾಚರಣೆಯೂ ಕೈಗೂಡದಂತಾಗಿದೆ.
Related Articles
Advertisement
ಯೋಗೇಶ್ವರ್ ನಂಬಿ ಆಪರೇಷನ್ ಕಮಲ ಕಾರ್ಯಾಚರಣೆಗೆ ಮುಂದಾಗಿದ್ದರಿಂದ ಪಕ್ಷ ಮುಜುಗರ ಅನುಭವಿಸಬೇಕಾಯಿತು. ಇದೀಗ ಮತ್ತೆ ಅವರನ್ನೇ ಸ್ಪರ್ಧೆಗಿಳಿಸಿ ಶಾಸಕರ ಖರೀದಿಗೆ ಮುಂದಾದರೆ ಮತ್ತಷ್ಟು ಸಂಕಷ್ಟ ಎದುರಾಗಬಹುದು. ಕಾಂಗ್ರೆಸ್-ಜೆಡಿಎಸ್‌ನವರು ಬಿಜೆಪಿ ಶಾಸಕರನ್ನೇ ಸೆಳೆಯಬಹುದು ಎಂದು ಕೇಂದ್ರದ ನಾಯಕರಿಗೆ ತಿಳಿಸಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಭ್ಯರ್ಥಿಗಳನ್ನು ಹಾಕದಂತೆ ಕೊನೇ ಕ್ಷಣದಲ್ಲಿ ಸೂಚನೆ ನೀಡಲಾಯಿತು ಎಂದು ಮೂಲಗಳು ತಿಳಿಸಿವೆ.
ಒಗ್ಗಟ್ಟು ಪ್ರದರ್ಶನ: ಕಾಂಗ್ರೆಸ್‌ನ ನಸೀರ್ ಅಹಮದ್ ಹಾಗೂ ವೇಣುಗೋಪಾಲ್ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಸಚಿವರಾದ ಡಿ.ಕೆ.ಶಿವಕುಮಾರ್, ಜಮೀರ್ ಅಹಮದ್, ಹಿರಿಯ ಮುಖಂಡ ಸಿ.ಎಂ.ಇಬ್ರಾಹಿಂ ಸೇರಿ ಹಲವರು ನಾಯಕರು ಉಪಸ್ಥಿತರಿದ್ದರು. ಒಗ್ಗಟ್ಟು ಪ್ರದರ್ಶಿಸಿದರು. ಜೆಡಿಎಸ್ ಅಭ್ಯರ್ಥಿ ರಮೇಶ್‌ಗೌಡ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಸಚಿವ ಸಾ.ರಾ.ಮಹೇಶ್, ಪರಿಷತ್ ಸದಸ್ಯರಾದ ಟಿ.ಎ.ಶರವಣ, ನಾರಾಯಣಸ್ವಾಮಿ, ಕೋನರೆಡ್ಡಿ ಉಪಸ್ಥಿತರಿದ್ದರು.
ಪರಿಷತ್ ಅಭ್ಯರ್ಥಿ : ಜೆಡಿಎಸ್‌ನಲ್ಲಿ ಗೊಂದಲ ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಂಬಂಧ ಜೆಡಿಎಸ್‌ನಲ್ಲಿ ಅಂತಿಮ ಕ್ಷಣದವರೆಗೂ ಗೊಂದಲ ಮುಂದುವರಿದಿತ್ತು. ರಮೇಶ್‌ಬಾಬು, ಕೋನರೆಡ್ಡಿ, ಅಮರನಾಥ್. ರಮೇಶ್‌ಗೌಡ ಆಕಾಂಕ್ಷಿಗಳಾಗಿದ್ದರು. ಸೋಮವಾರ ಬೆಳಗ್ಗೆ ದೇವೇಗೌಡರ ನಿವಾಸದಲ್ಲಿ ಸಭೆ ನಡೆಸಿ ರಮೇಶ್‌ಗೌಡ ಹೆಸರು ಅಂತಿಮಗೊಳಿಸಲಾಯಿತು. ಅವರು ದಾಖಲೆ ಸಿದ್ಧಪಡಿಸಿಕೊಂಡು ನಾಮಪತ್ರ ಸಲ್ಲಿಸಲು ವಿಧಾನಸೌಧಕ್ಕೆ ಬಂದಾಗ ಇತ್ತ ಮಾಜಿ ಶಾಸಕ ಕೋನರೆಡ್ಡಿ ಸಹ ಕುಮಾರಸ್ವಾಮಿ ಹೇಳಿದ್ದಾರೆ ಎಂದು ನಾಮಪತ್ರ ಸಲ್ಲಿಸಲು ಮುಂದಾದರು. ಆದರೆ, ಬಿ ಫಾರಂ ರಮೇಶ್‌ಗೌಡ ಅವರಿಗೆ ನೀಡಿದ್ದರಿಂದ ಕೋನರೆಡ್ಡಿ ಹಿಂದಕ್ಕೆ ಸರಿಯಬೇಕಾಯಿತು. ದೇವೇಗೌಡರ ಕುಟುಂಬ ಸದಸ್ಯರ ಒತ್ತಡದಿಂದ ರಮೇಶ್‌ಗೌಡ ಅವರಿಗೆ ಕೊನೇ ಕ್ಷಣದಲ್ಲಿ ಬಿ ಫಾರಂ ನೀಡಲಾಯಿತು. ಪರಿಷತ್ ಆಕಾಂಕ್ಷಿಗಳಾಗಿದ್ದವರು ಬೇಸರಗೊಂಡಿದ್ದಾರೆ ಎಂದು ಹೇಳಲಾಗಿದೆ. ಮಹೂರ್ತ ಕಾದ ಎಂಸಿವಿ
ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ನಸೀರ್ ಅಹಮದ್ ಬೆಳಗ್ಗೆಯೇ ವಿಧಾನಸೌಧಕ್ಕೆ ಆಗಮಿಸಿ ಸೂಚಕರು-ಅನುಮೋದಕರ ಸಹಿ ಪಡೆದು ನಾಮಪತ್ರ ಸಲ್ಲಿಸಲು ಸಜ್ಜಾದರು. ಮತ್ತೂಬ್ಬ ಅಭ್ಯರ್ಥಿ ಎಂ.ಸಿ.ವೇಣುಗೋಪಾಲ್ ಅವರು ಶುಭ ಮಹೂರ್ತಕ್ಕೆ ಕಾದು ಕುಳಿತು ಸ್ವಲ್ಪ ಹೊತ್ತಿನ ಬಳಿಕ ಆಗಮಿಸಿದರು. ಇನ್ನು ಬಿಜೆಪಿ ಅಭ್ಯರ್ಥಿಗಳು ದಾಖಲಾತಿ ಸಿದ್ಧಪಡಿಸಿಕೊಂಡು ಬರಲಿದ್ದಾರೆ ಎಂದು ಮಧ್ಯಾಹ್ನ 2.30 ರವರೆಗೂ ಹೇಳಲಾಗುತ್ತಿದ್ದಾರೂ ಅಂತಿಮವಾಗಿ ಸ್ಪರ್ಧೆ ಮಾಡುವುದಿಲ್ಲ ಎಂದು ತಿಳಿಸಲಾಯಿತು. ಮೂಲಗಳ ಪ್ರಕಾರ ವಿಧಾನಸೌಧದವರೆಗೂ ನಾಮಪತ್ರ ಸಲ್ಲಿಕೆಗೆ ಬಂದಿದ್ದ ಬಿಜೆಪಿ ಅಭ್ಯರ್ಥಿಗಳು ಪಕ್ಷದ ನಾಯಕರ ದಿಢೀರ್ ಸೂಚನೆ ಮೇರೆಗೆ ವಾಪಸ್ಸಾದರು ಎಂದು ಹೇಳಲಾಗಿದೆ.