Advertisement

ಕೃಷಿ, ತೋಟಗಾರಿಕೆ ಇಲಾಖೆಯಲಿ ಭ್ರಷ್ಟಾಚಾರ

12:52 PM Nov 15, 2018 | |

ಚಿಕ್ಕಬಳ್ಳಾಪುರ: ಹನಿ ನೀರಾವರಿ ಯೋಜನೆಯಲ್ಲಿ ನಡೆದಿದೆಯಂತೆ ಕೋಟ್ಯಂತರ ರೂ. ಅಕ್ರಮ. ಭ್ರಷ್ಟಾ ಚಾರದಲ್ಲಿ ತೊಡಗಿರುವ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಕ್ಷೇತ್ರ ಅಧಿಕಾರಿ ಅಮಾನತ್ತಿಗೆ ಶಾಸಕರ ಶಿಫಾರಸು, ಸ್ಮಶಾನ, ಗುಂಡು ತೋಪು, ಕೆರೆ, ಕಾಲುವೆಗಳ ಒತ್ತುವರಿಗೆ ತೆರವಿಗೆ ಆದೇಶ. ಎತ್ತಿನಹೊಳೆ ಯೋಜನೆ ಕಾಮಗಾರಿಗಳ ನಿಧಾನಗತಿಗೆ ಶಾಸಕರ ಕಿಡಿಕಿಡಿ. ಬರದ ವೇಳೆ ಕುಡಿಯುವ ನೀರಿಗೆ ಆದ್ಯತೆ ನೀಡುವಂತೆ ಸೂಚನೆ.

Advertisement

ನಗರದ ತಾಪಂ ಸಭಾಂಗಣದಲ್ಲಿ ಬುಧವಾರ ಶಾಸಕ ಡಾ.ಕೆ.ಸುಧಾಕರ್‌ ಅಧ್ಯಕ್ಷತೆಯಲ್ಲಿ ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಗೆ ನಡೆದ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಇಲಾಖೆಗಳ ಮೇಲಿನ ಚರ್ಚೆ ವೇಳೆ ಕೇಳಿ ಬಂದ ವಿಷಯಗಳು. 

ಸಭೆ ಆರಂಭದಲ್ಲಿ ತಾಲೂಕಿನ ಬರ ಪರಿಸ್ಥಿತಿ ಕುರಿತು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕ ಡಾ.ಕೆ.ಸುಧಾಕರ್‌, ಏನ್ರೀ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ಡ್ರಿಪ್‌ ಇರಿಗೇಷನ್‌ನಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆದಿದೆಯಂತೆ. ಇಲ್ಲಿ ಇರಿಗೇಷನ್‌ ಪರಿಕರಗಳ ಅಂಗಡಿ ಇಟ್ಟಿರುವರು ಕುಬೇರರು ಆಗಿದ್ದಾರಂತೆ ಎಂದು ತಾಲೂಕಿನ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥರನ್ನು ಪ್ರಶ್ನಿಸಿದರು. ಡ್ರಿಪ್‌ ಇರಿಗೇಷನ್‌ಲ್ಲಿ ಸಾಕಷ್ಟು ಅಕ್ರಮ, ಅವ್ಯಹಾರ ನಡೆದಿದೆ ಎಂದು ಬಹಳಷ್ಟು ದೂರುಗಳು ನನ್ನ ಗಮನಕ್ಕೆ ಬಂದಿವೆ ಎಂದರು. 

ಆದರೆ ಶಾಸಕ ಆರೋಪವನ್ನು ನಿರಾಕರಿಸಿದ ಕೃಷಿ ಅಧಿಕಾರಿ ಮಂಜುನಾಥ, ಆ ರೀತಿ ಯಾವುದೇ ರೀತಿಯ ಭ್ರಷ್ಟಾಚಾರ, ಅಕ್ರಮಗಳು ನಡೆದಿಲ್ಲ ಎಂದು ಸಮರ್ಥಿಸಿಕೊಂಡರು.

ಸಮಗ್ರ ತನಿಖೆ ನಡೆಯುತ್ತದೆ: ಶಾಸಕ ಸುಧಾಕರ್‌, ಈ ಬಗ್ಗೆ ಸಮಗ್ರ ತನಿಖೆಗೆ ಒಳಪಡಿಸಲಾಗುವುದು. ಲೋಕಾಯುಕ್ತ ಅಥವಾ ಎಸಿಬಿಯಿಂದಲೂ ತನಿಖೆ ಆಗಬಹುದು ಎಂದು ಎಚ್ಚರಿಸಿದರು. ಕೃಷಿ, ತೋಟಗಾರಿಕೆ ಇಲಾಖೆ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಈ ಎರಡು ಇಲಾಖೆಗಳನ್ನು ಅತಿ ಸೂಕ್ಷ್ಮ ಯಂತ್ರವನ್ನು ಹಿಡಿದು ನೋಡಿದರೂ ಏನು ಗೊತ್ತಾಗುವುದಿಲ್ಲ. ರೈತರಿಗೆ ನೇರವಾಗಿ ಸೌಲಭ್ಯ ಮುಟ್ಟುವ ಎರಡು ಇಲಾಖೆಗಳ ಸರಿ ಹೋಗಬೇಕು. ಕಳೆದ ನಾಲ್ಕೈದು ವರ್ಷಗಳಲ್ಲಿ ಇಲಾಖೆಗಳಲ್ಲಿ ರೈತರಿಗೆ ನೀಡಿರುವ ಸೌಲಭ್ಯ, ಫ‌ಲಾನುಭವಿಗಳ ಪಟ್ಟಿ ಸೇರಿದಂತೆ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ಹಾಗೂ ವಿತರಣೆಯ ಸಮಗ್ರ ಮಾಹಿತಿ ನೀಡಬೇಕು. ತಾಲೂಕಿನ ಬಹುತೇಕ ರಸಗೊಬ್ಬರ ಅಂಗಡಿಗಳಲ್ಲಿ ರೈತರಿಗೆ ಅರಿವು ಮೂಡಿಸುವ ಧರಪಟ್ಟಿಗಳನ್ನು ಹಾಕಿಸಬೇಕು. ಕಾಲಕಾಲಕ್ಕೆ ತೆರಳಿ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.

Advertisement

ಸ್ಮಶಾನದಲ್ಲಿ ಮಲಗುವ ವಾತಾವರಣ ನಿರ್ಮಿಸಿ: ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ಇಂದಿಗೂ ಸ್ಮಶಾನ ಇಲ್ಲ. ಇರುವ ಸ್ಮಶಾನಗಳನ್ನು ಒತ್ತುವರಿ ಮಾಡಲಾಗಿದೆ. ಕಂದಾಯ ಅಧಿಕಾರಿಗಳಿಗೆ ಹಲವು ಬಾರಿ ಸೂಚಿಸಿದರೂ ಒತ್ತುವರಿ ತೆರವುಗೊಳಿಸಿಲ್ಲ. ಇರುವ ಸ್ಮಶಾನಗಳನ್ನು ನೋಡಿ ಭಯ ಪಡುವ ವಾತಾವರಣ ನಿರ್ಮಿಸಬೇಡಿ. ವಿದೇಶಗಳಲ್ಲಿ ಸ್ಮಶಾನ ನೋಡಿದರೆ ಅಲ್ಲಿಯೇ ಮಲಗಬೇಕು ಅನಿಸುತ್ತದೆ. ಆ ರೀತಿಯಲ್ಲಿ ನೀಡುವ ಸ್ಮಶಾನಗಳನ್ನು ಅಭಿವೃದ್ಧಿಗೊಳಿಸಬೇಕು.

ನರೇಗಾದಡಿ ಸ್ಮಶಾನಗಳ ಅಭಿವೃದ್ಧಿಗೆ ಅವಕಾಶವಿದೆ. ಅಧಿಕಾರಿಗಳು ಈ ಬಗ್ಗೆ ಗಮನ ನೀಡಿ ಸ್ಮಶಾನಗಳನ್ನು ಅಭಿವೃದ್ಧಿಪಡಿಸಬೇಕು ಎಂದು ತಹಶೀಲ್ದಾರ್‌ ಹಾಗೂ ತಾಪಂ ಇಒಗೆ ಸೂಚಿಸಿದರು.

ತಾಲೂಕಿನಲ್ಲಿ ಗುಂಡು ತೋಪು, ಕೆರೆ, ಕುಂಟೆ ರಾಜ ಕಾಲುವೆಗಳ ಒತ್ತುವರಿಯನ್ನು ತೆರವುಗೊಳಿಸಬೇಕು. ಗುಂಡು ತೋಪುಗಳನ್ನು ಅಭಿವೃದ್ಧಿಪಡಿಸುವ ಹೊಣೆ ತಾಪಂ ಆಗಿದ್ದು, ಒತ್ತುವರಿ ತೆರವುಗೊಳಿಸಿ ಸಾಮಾಜಿಕ ಅರಣ್ಯ ಇಲಾಖೆ ನೆರವಿನೊಂದಿಗೆ ಗಿಡ, ಮರ ಬೆಳೆಸಬೇಕು ಎಂದು ತಿಳಿಸಿದರು.
 
ಕುಡಿಯುವ ನೀರಿನ ಎಚ್ಚರ ಇರಲಿ: ರಾಜ್ಯ ಸರ್ಕಾರ ತಾಲೂಕನ್ನು ಸಂಪೂರ್ಣ ಬರಪೀಡಿತ ತಾಲೂಕು ಎಂದು ಘೋಷಿಸಿದೆ. ಅಧಿಕಾರಿಗಳು ಕುಡಿಯುವ ನೀರಿನ ಬಗ್ಗೆ ಎಚ್ಚರ ವಹಿಸಬೇಕು. ತಾಲೂಕಿನಲ್ಲಿ ಒಟ್ಟು 45 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಕುಡಿಯುವ ನೀರಿನ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು. ತಿಪ್ಪೇನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಜಕ್ಕಲಮಡಗು ಡ್ಯಾಂನಿಂದ ನೀರು ಪೂರೈಸುವ ಕಾಮಗಾರಿಗೆ ಪೂಜೆ ಸಲ್ಲಿಸಿ ತಿಂಗಳಾದರೂ ಕಾಮಗಾರಿ ಕೈಗೆತ್ತಿಕೊಳ್ಳದ ಗ್ರಾಮೀಣ ಕುಡಿ
ಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಅಧಿಕಾರಿಗಳನ್ನು ಶಾಸಕ ಡಾ. ಕೆ. ಸುಧಾಕರ್‌ ತರಾಟೆಗೆ ತೆಗೆದುಕೊಂಡರು.

ಇಲಾಖೆಗಳ ಮೇಲೆ ಚರ್ಚೆ: ಉಳಿದಂತೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲ ಸೌಕರ್ಯ, ವೈದ್ಯರ ಭರ್ತಿ, ಆರೋಗ್ಯ ಕರ್ನಾಟಕ ಯೋಜನೆ ಅನುಷ್ಠಾನ, ಸಾಂಕ್ರಾಮಿಕ ರೋಗಳ ಕುರಿತು, ಬೆಸ್ಕಾಂ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಕಾರ್ಯಕ್ರಮಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಹಲವು ಸಲಹೆ, ಸೂಚನೆಗಳನ್ನು ನೀಡಿದರು. ಸಭೆಗೆ ಬಂದಿದ್ದ ಜಿಲ್ಲಾಸ್ಪತ್ರೆಯ ಸರ್ಜನ್‌ ಡಾ.ವಿಜಯಕುಮಾರ್‌ರನ್ನು ಕುರಿತು ಮಾತನಾಡಿ, ಆಸ್ಪತ್ರೆಯಲ್ಲಿ ಸಾಕಷ್ಟು ಸಮಸ್ಯೆಗಳು ಇವೆ. ಈ ಸಭೆಯಲ್ಲಿ ಚರ್ಚೆ ಮಾಡುವುದು ಬೇಡ. ಆಸ್ಪತ್ರೆಯಲ್ಲಿ ತಿಂಗಳಗೊಮ್ಮೆ ಸಭೆ ನಡೆಸಿ ಚರ್ಚೆ ಮಾಡೋಣ ಎಂದು ಶಾಸಕರು ಸಭೆಯಿಂದ ಅವರನ್ನು ಹೊರ ಕಳಿಸಿದರು.

ಸಭೆಯಲ್ಲಿ ತಾಪಂ ಅಧ್ಯಕ್ಷ ಬಿ.ಎಂ.ರಾಮುಸ್ವಾಮಿ, ಉಪಾಧ್ಯಕ್ಷೆ ಇಂದ್ರಮ್ಮ ಅಣ್ಣಯ್ಯಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ತಿರುಮಳಪ್ಪ, ತಹಶೀಲ್ದಾರ್‌ ಕೆ.ನರಸಿಂಹಮೂರ್ತಿ, ತಾಪಂ ಇಒ ಕೆ.ಪಿ.ಸಂಜೀವಪ್ಪ, ನಗರಸಭೆ ಆಯುಕ್ತ ಉಮಾಕಾಂತ್‌, ಜಿಲ್ಲಾಸ್ಪತ್ರೆಯ ಸರ್ಜನ್‌ ಡಾ.ವಿಜಯಕುಮಾರ್‌, ತಾಲೂಕು ಆರೋಗ್ಯಾಧಿಕಾರಿ ಡಾ.ಮಿತ್ರಣ್ಣ ಉಪಸ್ಥಿತರಿದ್ದರು. 

ಬಿಲ್‌ ಪಾವತಿಸಬೇಡಿ ಎತ್ತಿನಹೊಳೆ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳ ಆಮೆಗತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಡಾ.ಕೆ. ಸುಧಾಕರ್‌, ಬಹಳಷ್ಟು ಕಡೆ ಕಾಮಗಾರಿಗಳು ಕಳಪೆಯಿಂದ ಕೂಡಿವೆ. ಕಾಮಗಾರಿಗಳ ಪರಿಶೀಲನೆ ಮಾಡುವವರೆಗೂ ಯಾರಿಗೂ ಬಿಲ್‌ ಪಾವತಿಸಬೇಡಿ ಎಂದು ಎತ್ತಿನಹೊಳೆ ಯೋಜನೆ ಕಾಮಗಾರಿ ಉಸ್ತುವಾರಿ ಎಇಇಗೆ ತಾಕೀತು ಮಾಡಿದರು. ಈ ನಡುವೆ ಎತ್ತಿನಹೊಳೆ ಯೋಜನೆಯಡಿ ಎಸ್‌ಸಿ, ಎಸ್‌ಟಿ ಮೀಸಲು ಕಾಮಗಾರಿಗಳ ವಿಳಂಬದ ಬಗ್ಗೆ ಚರ್ಚೆ ನಡೆಸಿದ
ಶಾಸಕರು, ಗುತ್ತಿಗೆದಾರರಿಗೆ ಇಎಂಡಿ ಹಣ ಇಲ್ಲದ ಕಾರಣ ಕಾಮಗಾರಿ ಪಡೆದು ಸುಮ್ಮನಾಗಿದ್ದಾರೆ. ಇದರಿಂದ ಕಾಮಗಾರಿಗಳು ವಿಳಂಬವಾಗುತ್ತಿವೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಆಗಾ ಶಾಸಕರು ಕಾಮಗಾರಿ ಗುತ್ತಿಗೆ ಪಡೆದು ಕೆಲಸ ಮಾಡದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಆದೇಶಿಸಿದರು. ನಮಗೆ ಶಿಸ್ತು ಕ್ರಮಕ್ಕಿಂತ ಕೆಲಸ ಮುಖ್ಯ. ಇದನ್ನು ಅರಿತು ಅಧಿಕಾರಿಗಳು ವೇಗವಾಗಿ ಕೆಲಸ ಮಾಡಬೇಕು ಎಂದರು.

ಅಧಿಕಾರಿ ಅಮಾನತಿಗೆ ಶಾಸಕರು ಸೂಚನೆ ಸಭೆಯಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ದೂರುಗಳು ಕೇಳಿ ಬರುತ್ತಿದೆ. ಅಧಿಕಾರಿಗಳಿಗೆ ಹಣ ಕೊಡದೇ ಫ‌ಲಾನುಭವಿಗಳ ಕೆಲಸ ಆಗುತ್ತಿಲ್ಲ ಎಂದು ಶಾಸಕ ಡಾ.ಕೆ.ಸುಧಾಕರ್‌ ಆಕ್ರೋಶ ವ್ಯಕ್ತಪಡಿಸಿ, ನಿಗಮದ ತಾಲೂಕಿನ ಕ್ಷೇತ್ರ ಅಧಿಕಾರಿ ರಾಜಶೇಖರ್‌ ವಿರುದ್ಧ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಅಮಾನತ್ತುಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಕೊಳವೆ ಬಾವಿ, ವಿದ್ಯುತ್‌
ಸಂಪರ್ಕ ಸೇರಿದಂತೆ ನಿಗಮದಡಿ ಫ‌ಲಾನುಭವಿಗಳಿಗೆ ಕಾಲಮಿತಿಯಲ್ಲಿ ಸೌಲಭ್ಯಗಳು ದೊರೆಯದ ಬಗ್ಗೆ ಸಭೆಯಲ್ಲಿ ಶಾಸಕರು ಬೇಸರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next