Advertisement

Mangaluru: ಬೆಳೆ ವಿಮೆ ಯೋಜನೆ: ದ.ಕ.ಕ್ಕೆ 349 ಕೋ. ರೂ.

12:11 AM Sep 26, 2024 | Team Udayavani |

ಮಂಗಳೂರು: ಬೆಳೆವಿಮೆ ಯೋಜನೆ ಜಿಲ್ಲೆಯಲ್ಲಿ ಕೃಷಿಕರ ವಿಶ್ವಾಸ ಗಳಿಸುತ್ತಿದೆ. ಅದಕ್ಕೆ ಸೂಚಕವಾಗಿ ಇದುವರೆಗಿನ ಗರಿಷ್ಠ ಮಟ್ಟದ ಪೇಔಟ್‌ ಆಗಿ ಜಿಲ್ಲೆಗೆ 349 ಕೋ. ರೂ. ತೋಟಗಾರಿಕೆ ಬೆಳೆಗಳಿಗೆ ವಿತರಿಸಲಾಗಿದೆ. ಈ ಮೂಲಕ ವಿಮೆ ಮೊತ್ತ ಪಡೆಯುವಲ್ಲಿ ರಾಜ್ಯದಲ್ಲೇ ನಂ.1 ಜಿಲ್ಲೆಯಾಗಿ ಗುರುತಿಸಿಕೊಂಡಿದೆ.

Advertisement

ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಪೇಔಟ್‌ ಮೊತ್ತ ವಿತರಣೆಯಾಗುತ್ತಾ ಬಂದಿರುವ ಹಿನ್ನೆಲೆ ಹಾಗೂ ಈ ಬಾರಿ ಹೆಚ್ಚಿದ ಮಳೆಯ ಕಾರಣದಿಂದಾಗಿ ಮತ್ತೆ ದಾಖಲೆ ಮಟ್ಟದಲ್ಲಿ ವಿಮಾ ಮೊತ್ತ ವಿತರಣೆಯಾಗುವ ನಿರೀಕ್ಷೆಯೂ ಇದೆ.

ಹವಾಮಾನ ಆಧರಿತ ಬೆಳೆವಿಮೆ ಪ್ರೀಮಿಯಂ ಪಾವತಿ ಕುರಿತಂತೆ ಪ್ರತಿ ವರ್ಷವೂ ಹುಟ್ಟಿಕೊಳ್ಳುವ ಹಲವು ಗೊಂದಲಗಳ ಹೊರತಾಗಿಯೂ ನಿರಂತರವಾಗಿ ಕರಾವಳಿ ಜಿಲ್ಲೆಯಲ್ಲಿ ಬೆಳೆವಿಮೆಗೆ ರೈತರು ಆಸಕ್ತಿ ತೋರುತ್ತಿದ್ದಾರೆ ಎನ್ನುವುದು ತೋಟಗಾರಿಕೆ ಇಲಾಖೆ ನೀಡುವ ಮಾಹಿತಿ.

2022- 23ರಲ್ಲಿ ಸುಳ್ಯ(90.34 ಕೋ. ರೂ.) ಪುತ್ತೂರು (85.58 ಕೋ. ರೂ.), ಕಡಬ (65.97 ಕೋ. ರೂ.), ಬೆಳ್ತಂಗಡಿ ( 50.57 ಕೋ. ರೂ.), ಬಂಟ್ವಾಳ (49.28 ಕೋ. ರೂ.) ತಾಲೂಕುಗಳು ದೊಡ್ಡ ಪ್ರಮಾಣದಲ್ಲಿ ಯೋಜನೆಯ ಪ್ರಯೋಜನ ಪಡೆದುಕೊಂಡಿವೆ. ಸುಮಾರು 500ರಷ್ಟು ಅರ್ಜಿಗಳ ವಿಲೇವಾರಿ ಬಾಕಿ ಇದೆ. ಆಧಾರ್‌ ಜೋಡಣೆ ಸರಿಯಾಗದಿರುವುದು, ಬೆಳೆ ಸಮೀಕ್ಷೆ ಹೊಂದಾಣಿಕೆ ಆಗದಿರುವುದು ಮುಂತಾದ ಕಾರಣಗಳಿಂದ ವಿಮೆ ಮೊತ್ತ ಬಿಡುಗಡೆ ಬಾಕಿ ಇದ್ದು, ತಪ್ಪು ಸರಿಪಡಿಸಿದ ಬಳಿಕ ಪಾವತಿಯಾಗುವ ನಿರೀಕ್ಷೆ ಇದೆ.

ವರ್ಷದಿಂದ ವರ್ಷಕ್ಕೆ ಏರಿಕೆ
2016-17ರಲ್ಲಿ ಆರಂಭದ ವರ್ಷದಲ್ಲಿ 7.35 ಕೋ.ರೂ., 2017-18ರಲ್ಲಿ 3.52 ಕೋ. ರೂ., 2018-19ರಲ್ಲಿ 39.87 ಕೋ.ರೂ., 2019-20ರಲ್ಲಿ 88.43 ಕೋ.ರೂ., 2020-21ರಲ್ಲಿ 99.38 ಕೋ. ರೂ., 2021-22ರಲ್ಲಿ 150.14 ಕೋ. ರೂ. ವಿಮೆ ಮೊತ್ತ ವಿತರಿಸಲಾಗಿದೆ.

Advertisement

ಹವಾಮಾನ ಆಧರಿತ ವಿಮೆ ಎನ್ನುವುದು ವ್ಯವಸ್ಥಿತ, ವೈಜ್ಞಾನಿಕ ಪದ್ಧತಿ. ಇದರಲ್ಲಿ ಮಳೆಯ ತೀವ್ರತೆ, ಅಕಾಲಿಕ ಮಳೆ ಹಾಗೂ ತಾಪಮಾನ ಎಂಬ ಮೂರು ವಿಭಾಗಗಳಡಿ ನಷ್ಟವನ್ನು ಅಂದಾಜಿಸಲಾಗುತ್ತದೆ.

ಮಳೆ ಪ್ರಮಾಣ ದಿನಕ್ಕೆ 100 ಮಿ.ಮೀ.ಗಿಂತ ಹೆಚ್ಚಾದರೆ ಜಿಲ್ಲೆಯಲ್ಲಿ ನಷ್ಟ ಲೆಕ್ಕಾಚಾರ ಆರಂಭವಾಗುತ್ತದೆ. ಹೆಚ್ಚಾದಷ್ಟೂ ನಷ್ಟದ ಪ್ರಮಾಣವನ್ನು ಹೆಚ್ಚು ಎಂದು ಪರಿಗಣಿಸಲಾಗುತ್ತದೆ. ಅಕಾಲಿಕವಾಗಿ ಮಳೆ ಸುರಿದಾಗಲೂ ರೋಗ ಬಾಧೆ ಪೂರಕ‌ ಪರಿಸ್ಥಿತಿ (ಕಂಜೀನಿಯಲ್‌ ಕಂಡಿಷನ್ಸ್‌) ಉಂಟಾಗುತ್ತದೆ. ಮೂರನೇ ಮಾನದಂಡ ವೆಂದರೆ ತಾಪಮಾನ. ಮುಖ್ಯವಾಗಿ ಎಪ್ರಿಲ್‌ – ಮೇ ತಿಂಗಳಲ್ಲಿ ಅಧಿಕ ತಾಪಮಾನದಿಂದಾಗಿ ಎಳೆಯ ಅಡಿಕೆ ಬಾಡಿ ಬೀಳುತ್ತದೆ.

ಹವಾಮಾನ ಆಧರಿತ ಬೆಳೆವಿಮೆಗೆ ಗ್ರಾ.ಪಂ ಒಂದು ಘಟಕವಾಗಿರುತ್ತದೆ. ಎಲ್ಲ ಮಾಹಿತಿ ಸಂಗ್ರಹಿಸಿಕೊಂಡು ಕೇಂದ್ರ ಸರಕಾರದ ಇ-ಆಫೀಸ್‌ನಲ್ಲಿ ಆಯಾ ರೈತರಿಗೆ ಎಷ್ಟು ವಿಮೆ ಕೊಡಬೇಕು ಎನ್ನುವುದನ್ನು ನಿಗದಿಪಡಿಸಿ ಖಾತೆಗೆ ನೇರವಾಗಿ ಪಾವತಿಸಲಾಗುತ್ತದೆ.

ಈ ಬಾರಿ 1,32,019 ಅರ್ಜಿ
ಆರಂಭದಲ್ಲಿ ಯೋಜನೆ ಬಗ್ಗೆ ಸಂಶಯಗಳಿದ್ದರೂ ಬಳಿಕ ವರ್ಷದಿಂದ ವರ್ಷಕ್ಕೆ ರೈತರಿಗೆ ಇದರಲ್ಲಿರುವ ಅನುಕೂಲತೆಗಳು ಕೈ ಹಿಡಿದಿವೆ. ಹಾಗಾಗಿ ಪ್ರಸ್ತುತ ದ.ಕ.ದಲ್ಲಿ ಈ ವರ್ಷಕ್ಕೆ ಕಾಳುಮೆಣಸು ಹಾಗೂ ಅಡಿಕೆ ಸಹಿತ 1,32,019 ಅರ್ಜಿಗಳು ಸ್ವೀಕೃತಗೊಂಡಿವೆ. ಅತ್ಯಧಿಕ ಅರ್ಜಿಗಳು ಸುಳ್ಯದಿಂದ (32,291) ಸ್ವೀಕೃತಗೊಂಡಿವೆ. ಕಡಬ 28,623, ಪುತ್ತೂರು 25,729, ಬೆಳ್ತಂಗಡಿ 24,352, ಬಂಟ್ವಾಳ 17,562, ಮೂಡುಬಿದಿರೆ 1,778, ಮಂಗಳೂರು 599, ಉಳ್ಳಾಲ 1,013 ಹಾಗೂ ಮೂಲ್ಕಿ 72 ಅರ್ಜಿಗಳು ಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next