Advertisement

Udupi: ತೋಟಗಾರಿಕೆ ಬೆಳೆಗಳಿಗೆ ಸಂಕಷ್ಟ ತಂದ ಹವಾಮಾನ ವೈಪರೀತ್ಯ

03:53 PM Sep 03, 2024 | Team Udayavani |

ಉಡುಪಿ: ಹವಾಮಾನ ವೈಪರೀತ್ಯದಿಂದ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳು ಸಂಕಷ್ಟದ ಪರಿಸ್ಥಿತಿಯಲ್ಲಿದೆ ಎಂಬುದು ಬಹುತೇಕ ಬೆಳೆಗಾರರು ಅಳಲು.

Advertisement

ಅಡಿಕೆ, ತೆಂಗು, ಕಾಳುಮೆಣಸು ಬೆಳೆಗಳಿಗೆ ನಾನಾ ರೀತಿಯ ಸಮಸ್ಯೆಗಳು ಕಾಡತೊಡಗಿದೆ. ಇದೇ ರೀತಿ ಬಾಳೆ, ಮಾವು ಇಳುವರಿಯಲ್ಲಿಯೂ ಸಾಕಷ್ಟು ವ್ಯತ್ಯಾಸ ಸಂಭವಿಸಬಹುದು ಎಂದು ರೈತರು ಕಳವಳ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಅತೀಯಾದ ಗಾಳಿಮಳೆ, ಬಿರು ಬಿಸಿಲು ವಾತಾವರಣದಂತಹ ಪರಿಸ್ಥಿತಿಯಲ್ಲಿ ತೋಟಗಾರಿಕೆ ಬೆಳೆ ಏರಿಳಿತವಾಗುತ್ತಿದೆ. ಕಾರ್ಕಳ, ಕುಂದಾಪುರ ಭಾಗದಲ್ಲಿ ಹೆಚ್ಚಿರುವ ತೆಂಗು, ಅಡಿಕೆ, ಕಾಳು ಮೆಣಸು ಬೆಳೆಗಳಿಗೆ ವಿವಿಧ ಬಾಧೆಗಳು ಕಾಣಿಸಿಕೊಳ್ಳುತ್ತಿವೆ.

4 ವರ್ಷಗಳ ಅನಂತರ ಅಡಿಕೆಗೆ ಹೆಚ್ಚಿನ ಪ್ರಮಾಣದಲ್ಲಿ ಕೊಳೆ ರೋಗ ಕಾಣಿಸಿಕೊಳ್ಳುವ ಭೀತಿ ಎದುರಾಗಿದೆ. ಈಗಾಗಲೇ ಅಡಿಕೆ ಶೇ.25 ಬೆಳೆ ನಷ್ಟ ಸಂಭವಿಸಿದೆ. ಕಾಳು ಮೆಣಸಿಗೆ ಸೊರಗು ರೋಗ ಕಾಣಿಸಿಕೊಂಡಿದ್ದು, ಬಳ್ಳಿಗಳು ಬಳಲಿ ಇಳುವರಿ ಕುಂಠಿತವಾಗಲಿದೆ. ತೆಂಗಿನ ಮರದಿಂದ ಕಾಯಿ ಬಲಿತಗೊಳ್ಳುವ ಮೊದಲೇ ನೆಲಕ್ಕೆ ಉದುರುತ್ತಿವೆ. ಬಾಳೆ ಬೆಳೆಗೂ ಹವಾಮಾನ ವೈಪರೀತ್ಯ ಹೊಡೆತ ನೀಡಿದೆ. ಇದು ಹೀಗೆ ಮುಂದುವರಿದಲ್ಲಿ ತೋಟಗಾರಿಕೆ ಬೆಳೆ ಹೆಚ್ಚು ನಷ್ಟ ಸಂಭವಿಸುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ ಭಾರತೀಯ ಕಿಸಾನ್‌ ಸಂಘದ ಪ್ರ. ಕಾರ್ಯದರ್ಶಿ ಸತ್ಯನಾರಾಯಣ ಉಡುಪ.
ಕೃಷಿ ವಿಜ್ಞಾನಿಗಳು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕ್ಷೇತ್ರ ಭೇಟಿ ಮಾಡಿ ಈ ಬಗ್ಗೆ ಸರಕಾರಕ್ಕೆ ಸಮಗ್ರ ವರದಿ ನೀಡಿ ಬೆಳೆಗಾರರಿಗೆ ವಿಪತ್ತು ಪರಿಹಾರ ವಿಶೇಷ ಪ್ಯಾಕೇಜ್‌ ಘೋಷಿಸಲು ಜಿಲ್ಲೆಯ ಬೆಳೆಗಾರರು ಸರಕಾರಕ್ಕೆ ಆಗ್ರಹಿಸಿದ್ದಾರೆ.

ಗಾಳಿ ಹೊಡೆತಕ್ಕೆ ತೋಟ ನಾಶ
ಈ ಬಾರಿ ಮಳೆಯ ಜತೆಗೆ ಅತ್ಯಂತ ವೇಗದಲ್ಲಿ ಬೀಸುತ್ತಿರುವ ಗಾಳಿಯಿಂದ ಹಲವು ತೋಟಗಾರಿಕೆ ಬೆಳೆಗಳಿಗೆ ಹಾನಿ ಸಂಭವಿಸಿದೆ. ಕುಂದಾಪುರ, ಕಾರ್ಕಳ, ಹೆಬ್ರಿ, ಬ್ರಹ್ಮಾವರ ಭಾಗದಲ್ಲಿ ಗಾಳಿಯಿಂದ ಬಹುತೇಕ ಅಡಿಕೆ ಮರಗಳು ನೆಲಕ್ಕುರುಳಿವೆ. ಸಾಕಷ್ಟು ವರ್ಷ ಸಸಿ ನೆಟ್ಟು, ಬೆಳೆಸಿ, ಪೋಷಿಸಿದ ಮರಗಳು ನೆಲಕ್ಕೆ ಉರುಳುತ್ತಿರುವುದನ್ನು ಕಂಡು ಬೆಳೆಗಾರರು ಮರುಗುತ್ತಿದ್ದಾರೆ. ಮರದಿಂದ ಮರಕ್ಕೆ ಬಾಳೆ ಗಿಡದ ಮಾದರಿಯಲ್ಲಿ ಹಗ್ಗವನ್ನು ಕಟ್ಟಿ ಗಿಡಗಳನ್ನು ಉಳಿಸಲು ಮುಂದಾಗಿದ್ದಾರೆ.

ಕ್ಷೇತ್ರ ತಪಾಸಣೆ
ಜಿಲ್ಲೆಯಲ್ಲಿ ಗಾಳಿ, ಬಿರುಸಿನ ಮಳೆ, ಬಿಸಿಲು ಹವಾಮಾನ ವೈಪರೀತ್ಯ ಪರಿಣಾಮ ತೋಟಗಾರಿಕೆ ಬೆಳೆಗಳ ಮೇಲೆ ಆಗುತ್ತಿರುವ ಪ್ರತಿಕೂಲ ಪರಿಣಾಮಗಳ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿ, ತಜ್ಞರು ಕ್ಷೇತ್ರ ತಪಾಸಣೆ ಕೈಗೊಂಡಿದ್ದಾರೆ. ಈ ಬಗ್ಗೆ ಜಂಟಿ ತಪಾಸಣೆ ನಡೆಸಿ ಸೂಕ್ತ ವರದಿ ನೀಡುವಂತೆ ವಲಯ ಕೃಷಿ ಮತ್ತು ಸಂಶೋಧನ ಕೇಂದ್ರಕ್ಕೂ ಪತ್ರ ಬರೆಯಲಾಗಿದೆ.
– ಭುವನೇಶ್ವರಿ, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ. ಉಡುಪಿ ಜಿಲ್ಲೆ

Advertisement

ಬೆಳೆ ವಿಮೆ ಮಾಡಿಸಿದರೆ ಸಕಾಲದಲ್ಲಿ ಪರಿಹಾರ
ಎಪ್ರಿಲ್‌ ಮೇ ಬೇಸಗೆ ಬಿಸಿಲಿನಲ್ಲಿ ಅಡಿಕೆ ಕೃಷಿಗೆ ಕೀಟದ ಹಾವಳಿ ಹೆಚ್ಚಿತ್ತು. ಮತ್ತು ಅಡಿಕೆ ಗಿಡಗಳಿಗೆ ಔಷಧ ಹೊಡೆಯದಿದ್ದ ಕೆಲವರು ರೈತರು ಇದೀಗ ಕೊಳೆ ರೋಗ ಭೀತಿ ಎದುರಿಸುತ್ತಿದ್ದಾರೆ. ಅಲ್ಲದೆ ಮಳೆ ಹೆಚ್ಚಾಗಿ ಕಡಿಮೆಯಾಗಿ ಬಿಸಿಲು ಹೆಚ್ಚಿರುವುದರಿಂದ ಎಲೆಚುಕ್ಕಿ ರೋಗದ ಬಾಧೆ ಹೆಚ್ಚಾಗುವ ಭೀತಿ ಇದೆ. ಬೆಳೆಯ ಉತ್ಪಾದನೆ ಗುಣಮಟ್ಟದಲ್ಲಿ ಇಳಿಕೆ ಕಂಡು ಬರುವ ಸಾಧ್ಯತೆ ಇದೆ. ಸದ್ಯಕ್ಕೆ ರೈತರು ಬೆಳೆ ವಿಮೆ ಯೋಜನೆ ಪರಿಹಾರವನ್ನು ಸಕಾಲದಲ್ಲಿ ಮಾಡಿಸಿಕೊಂಡಲ್ಲಿ ಬೆಳೆ ನಷ್ಟಕ್ಕೆ ಪರಿಹಾರ ಪಡೆಯಲು ಅನುಕೂಲವಾಗಲಿದೆ ಎಂದು ಇಲಾಖೆ ಅಧಿಕಾರಿಗಳ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next