Advertisement

ಕುಷ್ಟಗಿ: ಬಿಳಿ ಜೋಳಕ್ಕೂ ಲಗ್ಗೆಯಿಟ್ಟ ಲದ್ದಿ ಹುಳು

05:22 PM Nov 11, 2024 | Team Udayavani |

ಉದಯವಾಣಿ ಸಮಾಚಾರ
ಕುಷ್ಟಗಿ: ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಬೆಳೆಗಾರರನ್ನು ಪೀಡಿಸಿದ್ದ ಲದ್ದಿ ಹುಳು ಇದೀಗ ಹಿಂಗಾರು ಹಂಗಾಮಿನ ಬಿಳಿ ಜೋಳಕ್ಕೂ ದಾಳಿಯಿಟ್ಟಿದೆ. ಇದರಿಂದ ರೈತಾಪಿ ವರ್ಗ ತೀವ್ರ ಕಂಗಾಲಾಗಿದೆ.

Advertisement

ಈ ಬಾರಿ ಮುಂಗಾರು ಹಂಗಾಮಿನಲ್ಲಿ ರೈತರು ಏಕ ಬೆಳೆಯಾಗಿ ತೊಗರೆ ಬೆಳೆ ಬೆಳೆಯಲು ಒಲವು ತೋರಿಸಿದ್ದರಿಂದ ಹಿಂಗಾರು ಹಂಗಾಮಿನಲ್ಲಿ ಬಿಳಿ ಜೋಳ, ಕಡಲೆ ಕ್ಷೇತ್ರ ಕಡಿಮೆಯಾಗಿದೆ. ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ 12 ಸಾವಿರ ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ 4,836 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕಡಲೆ 8,420 ಹೆಕ್ಟೇರ್‌ ನಲ್ಲಿ ಬಿತ್ತನೆಯಾಗಿದೆ. ಪ್ರಸ್ತುತ ಹಿಂಗಾರು ಹಂಗಾಮಿನಲ್ಲಿ ಬಿಳಿ ಜೋಳದ ಕ್ಷೇತ್ರ ಕಡಿಮೆಯಾಗಿದ್ದರೂ, ಈ ಕೀಟ ಬಾಧೆ ಇಳುವರಿ ಕಡಿಮೆ ಮಾಡುತ್ತಿರುವುದು ರೈತರ ಕಳವಳ ಹೆಚ್ಚಿಸಿದೆ.

ಕೆಲ ವರ್ಷಗಳಿಂದ ಬಿಳಿಜೋಳಕ್ಕೆ ಈ ಕೀಟ ಬಾಧೆ ಬರುವುದು ಖಾತ್ರಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಬಿತ್ತನೆ ಪೂರ್ವ ಹಾಗೂ ಬಿತ್ತನೆ ನಂತರ ಮುಂಜಾಗ್ರತ ಕ್ರಮದ ಮೂಲಕ ಈ ಕೀಟ ಬಾರದಂತೆ ಅಗತ್ಯ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಏಕೆಂದರೆ ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಎನ್ನುವಂತೆ ಈ ಕೀಟ ಬಾಧೆ ಒಕ್ಕರಿಸಿದಾಗಲೇ ಇದನ್ನು ನಿಯಂತ್ರಿಸಲು
ಮುಂದಾಗುವುದು ಎಷ್ಟು ಸರಿ ಎನ್ನುವ ಪ್ರಶ್ನೆ ವ್ಯಕ್ತವಾಗಿದೆ.

ಹಿಂಗಾರು ಹಂಗಾಮಿನಲ್ಲಿ ತಕ್ಕಮಟ್ಟಿಗೆ ಉತ್ತಮ ಮಳೆಯಾಗಿದ್ದರಿಂದ ಬಿಳಿ ಜೋಳ ಬೆಳೆಯಲಾಗಿದ್ದು, ಉತ್ತಮ ಬೆಳವಣಿಗೆ ಹಂತದಲ್ಲಿ ಸುಳಿಯಲ್ಲಿ ಈ ಲದ್ದಿಹುಳು ಕಾಣಿಸಿಕೊಂಡಿದೆ. ಈ ಲದ್ದಿಹುಳು ತೆನೆ ಬಿಡುವ ಜೋಳದ ಮುಖ್ಯಭಾಗವನ್ನು ತುಂಡರಿಸಿದ ಪರಿಣಾಮ, ತುಂಡರಿಸಿದ ಸೊಪ್ಪೆಯಿಂದ ಇದರ ತೀವ್ರತೆ ಗುರುತಿಸಬಹುದಾಗಿದೆ. ಈ ಕೀಟ ಸುಳಿಯ ಭಾಗದಲ್ಲಿ ತಿಂದು ಹಾಕುವುದಲ್ಲದೇ ಅಲ್ಲಿಯೇ ಲದ್ದಿ ಹಾಕುವುದರಿಂದ ಇದನ್ನು ಲದ್ದಿ ಹುಳು ಎಂದು ಕುಖ್ಯಾತಿಯಾಗಿದೆ. ಬಿಳಿ ಜೋಳದ ಬೆಳೆಗೆ ಯಾವುದೇ ರೋಗ ರುಜಿನ ಇಲ್ಲದ ಬೆಳೆಯಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಈ ಬೆಳೆಗೂ ಲದ್ದಿ ಹುಳು ಮಾರಕವಾಗುತ್ತಿದೆ. ಇಂತಹ ಶುದ್ಧ ಬೆಳೆ ಎಂದು ಹೆಸರಾದ ಈ ಬೆಳೆಗೂ ವಿಷ ಉಣಿಸಲಾಗುತ್ತಿದೆ. ತಾಲೂಕಿನಲ್ಲಿ ಅಲ್ಲಲ್ಲಿ ಈ ಕೀಟ ಭಾದೆ ಕಾಣಿಸಿಕೊಂಡಿದ್ದು, ರೈತರು ಕೃಷಿ ಇಲಾಖೆಯ ಸಲಹೆ ಮೇರೆಗೆ ಸಿಂಪರಣೆ ಕ್ರಮಕ್ಕೆ ಮುಂದಾಗಿದ್ದಾರೆ. ಈ ರೋಗ ನಿಯಂತ್ರಣಕ್ಕೆ ಎಮಾಮೆಕ್ಟಿನ್‌ ಬೆಂಜೋಯೇಟ್‌ ಶೇ.5 ಎಸ್‌.ಜಿ. 2 ಗ್ರಾಂ ಅಥವಾ ಕ್ಲೋರಾಂಟೆಲಿಪೊಲ್‌ 0.3 ಎಂ.ಎಲ್‌. ಪ್ರತಿ ಲೀಟರ್‌ ನೀರಿಗೆ ಬೆರೆಸಿ ಸಿಂಪರಣೆ ಈ ಕ್ರಮದಿಂದ ಮೊಟ್ಟೆ ಲದ್ದಿಹುಳು ನಾಶಪಡಿಸುವುದರಿಂದ ಈ ಕೀಟ ಬಾಧೆ ನಿಯಂತ್ರಿಸಬಹುದಾಗಿದೆ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕರು.

Advertisement

ಹುಳುವಿಗೆ “ಪಾಷಾಣ ಪಾಕ’ ತಯಾರಿ ವಿಧಾನ
ರೈತರು ಮೋನೊಕ್ರೊಟೋಫಾಸ್‌ ವಿಷ ಪಾಷಾಣವನ್ನು ತಯಾರಿಸಿ ಜೋಳದ ಸುಳಿಗೆ ಹಾಕಬೇಕು. ವಿಷ ಪಾಷಾಣವನ್ನು ತಯಾರಿಸಲು 2 ಕೆ.ಜಿ. ಬೆಲ್ಲವನ್ನು ಪುಡಿ ಮಾಡಿ 4 ಲೀಟರ್‌ ನೀರಿನಲ್ಲಿ ಕರಗಿಸಿ 250 ಮಿ.ಲೀ. ಮೋನೊ ಕ್ರೊಟೋಫಾಸ್‌ 36 ಎಸ್‌.ಎಲ್‌. ಕೀಟನಾಶಕವನ್ನು ಸೇರಿಸಿದ ಮೇಲೆ ಈ ಮಿಶ್ರಣವನ್ನು 20 ಕೆ.ಜಿ. ಭತ್ತ ಇಲ್ಲವೇ ಗೋಧಿ ತೌಡಿನಲ್ಲಿ ಬೆರೆಸಿ ಚೆನ್ನಾಗಿ ಕಲಸಿ ಗಾಳಿಯಾಡದಂತೆ 48 ಗಂಟೆಗಳ ಕಾಲ ಗೊಬ್ಬರದ ಚೀಲ ಅಥವಾ ಪ್ಲಾಸ್ಟಿಕ್‌ ಡ್ರಮ್ಮಿನಲ್ಲಿ ಮುಚ್ಚಿಟ್ಟು ಕಳಿಯಲು ಬಿಡಬೇಕು. ಈ ರೀತಿ ತಯಾರಿಸಿ ಪಾಷಾಣವನ್ನು ಜೋಳದ ಸುಳಿಯಲ್ಲಿ ಹಾಕಬೇಕು ಎನ್ನುತ್ತಾರೆ ಅಜ್ಮಿರ್‌ ಅಲಿ ಬೆಟಗೇರಿ ಸಹಾಯಕ ಕೃಷಿ ನಿರ್ದೇಶಕ ಕೃಷಿ ಇಲಾಖೆ ಕುಷ್ಟಗಿ

3 ಎಕರೆಯ 25 ದಿನಗಳ ಬಿಳಿ ಜೋಳದ ಬೆಳೆಗೆ ಲದ್ದಿಹುಳು ಕಾಣಿಸಿಕೊಂಡಿದೆ. ಈ ಕೀಟ ಬಾಧೆ ಬಾರದಂತೆ ಮುಂಜಾಗ್ರತ ಕ್ರಮವಾಗಿದೆ. 15 ದಿನದ ಬೆಳೆಗೆ ರೋಗ ಕೀಟ ನಾಶ ಸಿಪಡಿಸಿದರೂ ಈ ರೋಗ ಕಾಣಿಸಿಕೊಂಡಿದೆ. ಈ ಕೀಟವು ಜೋಳದ ಮುಖ್ಯ ದಂಟಿನ ಭಾಗ ತಿಂದು ಹಾಕಿದ ಪರಿಣಾಮ ಕುಳೆ ಬೆಳೆ ಬೆಳವಣಿಗೆ ಇದೆ. ಇದರಿಂದ ತೆನೆ ಗಾತ್ರದಲ್ಲಿ ಕಡಿಮೆಯಾಗಲಿದೆ.
ನಿಂಗಪ್ಪ ಜೀಗೇರಿ ಕಡೇಕೊಪ್ಪ, ರೈತ

*ಮಂಜುನಾಥ ಮಹಾಲಿಂಗಪುರ

Advertisement

Udayavani is now on Telegram. Click here to join our channel and stay updated with the latest news.

Next