ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಭಿವೃದ್ಧಿ/ಏಳ್ಗೆಗಾಗಿ ವಿದ್ಯಾರ್ಥಿ ರಿಯಾಯಿತಿ ಬಸ್ ಪಾಸ್ ಬಾಕಿ ಮೊತ್ತ 485.82 ಕೋಟಿ ರೂ. ಹಾಗೂ ಸಂಸ್ಥೆಯು ಸರಕಾರಕ್ಕೆ ಪಾವತಿಸಬೇಕಾಗಿರುವ ಮೋಟಾರು ವಾಹನ ತೆರಿಗೆ ವಿನಾಯಿತಿ ಸೌಲಭ್ಯವನ್ನು ಮುಂದಿನ 5 ವರ್ಷಗಳ ಅವಧಿಗೆ ಮುಂದುವರಿಸುವಂತೆ ಸಂಸ್ಥೆಯ ಅಧ್ಯಕ್ಷರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಣಿಬೆನ್ನೂರಿಗೆ ತೆರಳುವ ಮುನ್ನ ರವಿವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಅವರನ್ನು ಭೇಟಿ ಮಾಡಿದ ಸಂಸ್ಥೆಯ ಅಧ್ಯಕ್ಷ ಸದಾನಂದ ಡಂಗನವರ, ಸಂಸ್ಥೆಯ ಅಭಿವೃದ್ಧಿಗಾಗಿ 2014- 15, 2015-16 ಹಾಗೂ 2016-1ನೇ ಸಾಲಿಗೆ ಸಂಬಂಧಿಸಿದಂತೆ ವಿದ್ಯಾರ್ಥಿ ರಿಯಾಯಿತಿ ಬಸ್‌ಪಾಸ್ ಬಾಕಿ ಪಾವತಿಸಬೇಕು
ಹಾಗೂ ಸಂಸ್ಥೆಯು ಸರಕಾರಕ್ಕೆ ಪಾವತಿಸಬೇಕಾಗಿರುವ ಮೋಟಾರು ವಾಹನ ತೆರಿಗೆ ವಿನಾಯಿತಿ ಸೌಲಭ್ಯವನ್ನು 2022ರ ವರೆಗೆ ಮುಂದುವರಿಸಬೇಕೆಂದು ಒತ್ತಾಯಿಸಿದರು. ಸಂಸ್ಥೆಯು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದು, 2016-17ನೇ ಸಾಲಿನಲ್ಲಿ ಸಂಸ್ಥೆಯ ಪ್ರತಿ ದಿನದ ಸರಾಸರಿ ಆದಾಯ 4.73 ಕೋಟಿ ರೂ. ಮಾತ್ರ ಬರುತ್ತಿದ್ದು,
ಪ್ರತಿದಿನ ಸರಾಸರಿ ವೆಚ್ಚ ಸುಮಾರು 5.11 ಕೋಟಿ ರೂ.ಗಿಂತ ಹೆಚ್ಚಿದೆ. ಸರಾಸರಿ ಪ್ರತಿದಿನ ಸುಮಾರು 0.38 ಕೋಟಿ ರೂ. ಕೊರತೆ ಉಂಟಾಗುತ್ತಿದೆ. ಇದು ಸಂಸ್ಥೆಯ ಆರ್ಥಿಕ ಪರಿಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತಿದೆ. ನೌಕರರಿಗೆ ಪ್ರತಿ ತಿಂಗಳು ಪಾವತಿಸಬೇಕಾಗಿರುವ ವೇತನವನ್ನು ನಿಗದಿತ ಸಮಯದಲ್ಲಿ ಪಾವತಿಸಲು ಸಾಧ್ಯವಾಗುತ್ತಿಲ್ಲ.
ಅದಲ್ಲದೆ ಭವಿಷ್ಯ ನಿಧಿ ನ್ಯಾಸ್ ಮಂಡಳಿಗೆ, ಭಾರತೀಯ ಜೀವ ವಿಮಾ ನಿಗಮ, ಸಹಕಾರಿ ಸಂಘಗಳಿಗೆ, ಹಾಲಿ ಹಾಗೂ ನಿವೃತ್ತ ನೌಕರರಿಗೆ ಪಾವತಿಸಬೇಕಾಗಿರುವ ಆರ್ಥಿಕ ಸೌಲಭ್ಯಗಳಾದ ರಜೆ ನಗದೀಕರಣ, ಉಪದಾನ, ತುಟ್ಟಿಭತ್ಯೆ ಬಾಕಿ
ಹಾಗೂ ವೇತನ ಪರಿಷ್ಕರಣೆ ಬಾಕಿ ಮೊತ್ತವನ್ನು ಪಾವತಿಸಲು ಸಾಧ್ಯವಾಗುತ್ತಿಲ್ಲ. ವಾಕರಸಾ ಸಂಸ್ಥೆ ಹಣಕಾಸಿನ ಮುಗ್ಗಟ್ಟಿನಿಂದ ಚೇತರಿಸಿಕೊಳ್ಳಲು ಮೋಟಾರು ವಾಹನ ತೆರಿಗೆ ವಿನಾಯಿತಿ ಸೌಲಭ್ಯವನ್ನು ಮುಂದುವರಿಸಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.