Advertisement

ಕರಡಿನಲ್ಲೇ ಎಡವಿದ ಕಾಂಗ್ರೆಸ್‌

12:31 PM Jan 09, 2018 | |

ಬೆಂಗಳೂರು: ರಾಜಧಾನಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ರೂಪಿಸಿರುವ ಕಾಂಪ್ರಹೆನ್ಸಿವ್‌ ಡೆವಲಪ್‌ಮೆಂಟ್‌ ಪ್ಲಾನ್‌ (ಸಿಡಿಪಿ-2031) ಕರಡು ಕಾಂಗ್ರೆಸ್‌ ಡೆವಲಪ್‌ಮೆಂಟ್‌ ಪ್ಲಾನ್‌ ಆಗಿದೆ ಎಂದು ಬಿಜೆಪಿ ಆರೋಪಿಸಿದೆ.

Advertisement

ಸಿಡಿಪಿ ಸಿದ್ಧಪಡಿಸುವಾಗ ನಗರ ಯೋಜನೆಗಿಂತ ವ್ಯವಹಾರ, ಅವ್ಯವಹಾರಗಳಿಗೆ ಆದ್ಯತೆ ನೀಡಲಾಗಿದೆ. ಕಾಂಗ್ರೆಸ್‌ನವರು ಹಣ ಮಾಡಲು ಇದನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಬೆಂಗಳೂರನ್ನು ಕಾಡುತ್ತಿರುವ ಸಂಚಾರ ದಟ್ಟಣೆ, ತ್ಯಾಜ್ಯವಿಲೇವಾರಿ ಬಗ್ಗೆ ಪ್ರಸ್ತಾಪವೇ ಇಲ್ಲ.

ಕಾಂಗ್ರೆಸ್‌ನವರು ತಮಗೆ ಬೇಕಾದವರಿಗೆ ಅನುಕೂಲ ಮಾಡಿಕೊಡಲು ಹಳದಿ ವಲಯ (ವಸತಿ), ಕೆಂಪು ವಲಯ (ಕೈಗಾರಿಕೆ) ಸೃಷ್ಟಿಸಿದ್ದಾರೆ. ಇದರಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಅವರ ನೇರ ಕೈವಾಡವಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಅರವಿಂದ ಲಿಂಬಾವಳಿ ಆರೋಪಿಸಿದ್ದಾರೆ.

ಮಣಿದ ಕಾಂಗ್ರೆಸ್‌: ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿಪಿ-2031 ಕರಡಿನಲ್ಲಿ ಖಾಸಗಿ ಜಮೀನಿನ ಮೇಲೆ ಮನಸೋ ಇಚ್ಛೆ ಪಬ್ಲಿಕ್‌, ಸೆಮಿ ಪಬ್ಲಿಕ್‌ ಮತ್ತು ಪಾರ್ಕ್‌ಗಳನ್ನು ತೋರಿಸಿದ್ದಾರೆ. ವಸತಿ ಪ್ರದೇಶಗಳಲ್ಲಿ ಕೈಗಾರಿಕಾ ಪ್ರದೇಶಗಳನ್ನು ತೋರಿಸಲಾಗಿದೆ. ಬನ್ನೇರುಘಟ್ಟ ರಸ್ತೆಯಲ್ಲಿ ಕೃಷಿ ಮತ್ತು ಅರಣ್ಯ ಜಮೀನು ಹೆಚ್ಚಾಗಿದ್ದರೂ ಕೆಲವು ಪ್ರಭಾವಿ ವ್ಯಕ್ತಿಗಳಿಗೆ ಮಣಿದು ವಾಣಿಜ್ಯ ವ್ಯವಹಾರ ಪ್ರದೇಶ ನಿಗದಿಪಡಿಸಲಾಗಿದೆ ಎಂದು ದೂರಿದರು.

ಬಿಲ್ಡರ್‌ಗಳ ಒತ್ತಡ: ಕೆರೆ, ಮನೆಗಳ ಮೇಲೆ ರಸ್ತೆಗಳನ್ನು ತೋರಿಸಲಾಗಿದೆ. ಮನಬಂದಂತೆ ಬಫ‌ರ್‌ ಝೋನ್‌ ನಿಗದಿಪಡಿಸಿ ಜನರನ್ನು ಬೆದರಿಸಿ ಹಣ ಸುಲಿಯುವ ಕೆಲಸಕ್ಕೆ ಮುಂದಾಗಿದ್ದಾರೆ. ಬೆಂಗಳೂರು ಎಲಿವೇಟೆಡ್‌ ಕಾರಿಡಾರ್‌ ಬಗ್ಗೆ ಪ್ರಸ್ತಾಪಿಸಿಲ್ಲ. ಒಟ್ಟಿನಲ್ಲಿ ಬಿಲ್ಡರ್‌ಗಳ ಒತ್ತಡಕ್ಕೆ ಮಣಿದಿರುವುದು ಸ್ಪಷ್ಟವಾಗಿದೆ ಎಂದು ಆಪಾದಿಸಿದರು.

Advertisement

ರೈತರಿಗೆ ಅನ್ಯಾಯ: ಕೃಷಿ ಭೂಮಿ ಗುರುತಿಸುವ ವಿಚಾರದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಹಣ ಕೊಟ್ಟವರ ಕೃಷಿ ಭೂಮಿಯನ್ನು ಹಳದಿ ಝೋನ್‌ (ವಸತಿ) ಎಂದು ಗುರುತಿಸಿದರೆ, ಹಣ ಕೊಡದವರ ಕೃಷಿ ಭೂಮಿಯನ್ನು ಪಾರ್ಕ್‌ ಎಂದು ಗುರುತಿಸಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ, ಸಹ ವಕ್ತಾರರಾದ ಎಸ್‌.ಪ್ರಕಾಶ್‌, ಎ.ಎಚ್‌.ಆನಂದ್‌, ಮಾಧ್ಯಮ ಪ್ರಮುಖ್‌ ಶಾಂತಾರಾಂ ಇದ್ದರು.

ಕರಡು ಸಿಡಿಪಿ ಬಗ್ಗೆ ದೂರು ಸಲ್ಲಿಸಲು ಬಿಡಿಎ ಕೇಂದ್ರ ಕಚೇರಿಯಲ್ಲಿ ಅವಕಾಶ ಮಾಡಿಕೊಡುವ ಬದಲು ಬನಶಂಕರಿಯಲ್ಲಿ ದೂರು ಸಲ್ಲಿಸಲು ಅವಕಾಶ ಮಾಡಲಾಗಿದೆ. ಆದ್ದರಿಂದ ಕೂಡಲೇ ಇದನ್ನು ವಾಪಸ್‌ ಪಡೆಯಬೇಕು.
-ಅರವಿಂದ ಲಿಂಬಾವಳಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

ಕರಡು ಸಿಡಿಪಿ ಬಗ್ಗೆ ಇರುವ ಆರೋಪಗಳು
– ಬೆಂಗಳೂರು ಮಹಾನಗರ ಬೃಹದಾಕಾರವಾಗಿ ಬೆಳೆಯುತ್ತಿದ್ದರೂ ಸೂಕ್ತ ಪರ್ಯಾಯ ಸಂಚಾರಿ ವ್ಯವಸ್ಥೆಗಳನ್ನು ತೋರಿಸಿಲ್ಲ. ಯಥೇತ್ಛವಾಗಿ ರಸ್ತೆ ಮಾರ್ಗಗಳನ್ನು ತೋರಿಸಲಾಗಿದೆ. ಅದರಲ್ಲಿ ಬಹುತೇಕ ಕೆರೆ ಮತ್ತು ಕಟ್ಟಡಗಳಿರುವ ಪ್ರದೇಶವಾಗಿದೆ. 

– ಕೃಷಿ ಭೂಮಿಯನ್ನು ಪಾರ್ಕ್‌ ಝೋನ್‌ ಎಂದು ತೋರಿಸಿದ್ದಾರೆ. ಕೈಗಾರಿಕಾ ಚಟುವಟಿಕೆಗಳಿಗಾಗಿ ಹೊರವಲಯದಲ್ಲಿ ನಿರ್ದಿಷ್ಟ ಜಾಗ ಗುರುತಿಸದಿರುವುದರಿಂದ ಪರಿಸರ ಮಾಲಿನ್ಯ ಸಂಚಾರಿ ಸಮಸ್ಯೆ ಹೆಚ್ಚಲಿವೆ.

– ರಸ್ತೆಗಳನ್ನು ಜೋಡಣೆ ಮಾಡುವ ವಿಧದಲ್ಲಿ ಬಿಡಿಎ ಮತ್ತು ಬಿಎಂಆರ್‌ಡಿಎ ವಿರೋಧಾಭಾಸದ ರಸ್ತೆಗಳನ್ನು ಸೂಚಿಸಲಾಗಿದೆ. ಇದರಲ್ಲಿ ರಸ್ತೆಗಳೂ ಮುಖ್ಯರಸ್ತೆ ಸಂಪರ್ಕಿಸುವುದೇ ಇಲ್ಲ.

– ಸಂಪಂಗಿರಾಮನಗರದ ಕೆರೆ (ಕಂಠೀರವ ಕ್ರೀಡಾಂಗಣ) ಕೆಲವೇ ಪ್ರದೇಶಗಳಲ್ಲಿ ರಾಜಕಾಲುವೆ ತೋರಿಸಿ ಅಂತ್ಯಗೊಳಿಸಲಾಗಿದೆ ಇದರಲ್ಲಿ ಗೊಂದಲ ವ್ಯಕ್ತವಾಗಿದೆ. 

– ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶದಂತೆ ಬೆಂಗಳೂರು ನಗರ ಹಾಗೂ ಸುತ್ತಮುತ್ತ ಇರುವ ಕೆರೆ ಮತ್ತು ರಾಜಕಾಲುವೆಗಳ ಗಡಿ ಗುರುತಿಸುವಾಗ ಬಫ‌ರ್‌ ಝೋನ್‌ ಸೂಚಿಸಬೇಕು. ಕೆಲವಡೆ ರಸ್ತೆಗಳನ್ನೇ ಬಫ‌ರ್‌ ಝೋನ್‌ ಎಂದು ಗುರ್ತಿಸಿ ಎಡವಟ್ಟು ಮಾಡಿದ್ದಾರೆ.

– ಜಮೀನು ಸ್ವಾಧೀನಪಡಿಸಿಕೊಳ್ಳುವಾಗ ರೈತರ ಕೃಷಿ ಜಮೀನಿಗೆ ಕಡಿಮೆ ಟಿಡಿಆರ್‌ ನಿಗದಿಮಾಡಿ, ಇತರೆ ಭೂಮಿಗೆ ಹೆಚ್ಚು ಟಿಡಿಆರ್‌ ನಿಗದಿಮಾಡಲಾಗಿದೆ. ಇದರಿಂದ ಅನ್ನದಾತರಿಗೂ ಅನ್ಯಾಯ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next