ನವದೆಹಲಿ: ಇತ್ತೀಚೆಗಷ್ಟೇ ಝಾರ್ಖಂಡ್ ನ ಕಾಂಗ್ರೆಸ್ ರಾಜ್ಯಸಭಾ ಸದಸ್ಯ, ಉದ್ಯಮಿ ಧೀರಜ್ ಪ್ರಸಾದ್ ಸಾಹೂ ನಿವಾಸದಲ್ಲಿ ಪತ್ತೆಯಾದ 353 ಕೋಟಿ ರೂಪಾಯಿ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕ್ರಿಯೆಗೆ ಸಂಬಂಧಿಸಿದಂತೆ ಬಿಜೆಪಿ ಮಂಗಳವಾರ (ಡಿ.12) ಜನಪ್ರಿಯ ಕ್ರೈಂ ಸೀರೀಸ್ “ಮನಿ ಹೀಸ್ಟ್” (Money Heist)ನ ಎಡಿಟೆಡ್ ವಿಡಿಯೋ ತುಣುಕನ್ನು ಎಕ್ಸ್ ನಲ್ಲಿ ಶೇರ್ ಮಾಡುವ ಮೂಲಕ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದೆ.
ಬಿಜೆಪಿ ಎಕ್ಸ್ ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ಝಾರ್ಖಂಡ್ ರಾಜ್ಯಸಭಾ ಸದಸ್ಯ ಸಾಹೂ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ವಶಪಡಿಸಿಕೊಂಡಿರುವ ಹಣದ ರಾಶಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮತ್ತು ರಾಹುಲ್ ಗಾಂಧಿ ಜತೆ ಸಾಹೂ ಹೂಗುಚ್ಛ ನೀಡಿ ನಿಂತಿರುವ ಫೋಟೊಗಳು ಇದ್ದು, ಕೊನೆಯಲ್ಲಿ ರಾಹುಲ್ ಗಾಂಧಿ ಹಣದ ರಾಶಿಯ ಮೇಲೆ ಹೊರಳಾಡುವ ಅಣಕು ದೃಶ್ಯವಿದೆ.
“ಭಾರತದಲ್ಲಿ ಹಣ ಕೊಳ್ಳೆ ಹೊಡೆಯುವ ಕಾಲ್ಪನಿಕ ಕಥೆ ಯಾರಿಗೆ ಬೇಕಾಗಿದೆ… ಕಳೆದ 70 ವರ್ಷಗಳಿಂದ ಕಾಂಗ್ರೆಸ್ ಹಣ ದೋಚುತ್ತಲೇ ಇದ್ದು, ಅದು ಇನ್ನೂ ಎಣಿಕೆಯಲ್ಲಿಯೇ ಇದೆ” ಎಂದು ಪ್ರಧಾನಿ ನರೇಂದ್ರ ಮೋದಿ ತೀಕ್ಷ್ಣವಾಗಿ ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿದ್ದರು.
ಇದಕ್ಕೆ ಪೂರಕವಾಗಿ ಭಾರತೀಯ ಜನತಾ ಪಕ್ಷ Money Heistನ ಎಡಿಟೆಡ್ ವಿಡಿಯೋವನ್ನು ಎಕ್ಸ್ ನಲ್ಲಿ ಶೇರ್ ಮಾಡಿ ವ್ಯಂಗ್ಯವಾಡಿದೆ. “ ಹಣದ ಲೂಟಿ…ಕಾಂಗ್ರೆಸ್ ಪ್ರಸ್ತುತಪಡಿಸುತ್ತಿದೆ ಎಂಬ ಕ್ಯಾಪ್ಶನ್ ನೀಡಿ ಬಿಜೆಪಿ ಮನಿ ಹೀಸ್ಸ್ ನ ಎಡಿಟೆಡ್ ವಿಡಿಯೋವನ್ನು ಶೇರ್ ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.