ಹೊಸದಿಲ್ಲಿ : ಕಾಂಗ್ರೆಸ್ ನೇತೃತ್ವದ ಹಿಂದಿನ ಯುಪಿಎ ಸರಕಾರ ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಕೇಸಿನಲ್ಲಿ ಅಮಿತ್ ಶಾ ಅವರನ್ನು ಸಿಲುಕಿಸಲು ಸಿಬಿಐ ಅನ್ನು ದುರ್ಬಳಕೆ ಮಾಡಿತ್ತು ಎಂದು ಆರೋಪಿಸುವ ಮೂಲಕ ಬಿಜೆಪಿ, ಕಾಂಗ್ರೆಸ್ ವಿರುದ್ಧ ಕಟುವಾದ ವಾಕ್ ದಾಳಿ ನಡೆಸಿದೆ.
ಈಗ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿರುವ ಅಮಿತ್ ಶಾ ಅವರ ರಾಜಕೀಯ ಬಾಳ್ವೆಯನ್ನು ನಾಶಪಡಿಸುವ ಉದ್ದೇಶದಲ್ಲಿ ಸೊಹ್ರಾಬುದ್ದೀನ್ ಎನ್‌ಕೌಂಟರ್ ಕೇಸಿನಲ್ಲಿ ಶಾ ಅವರನ್ನು ಸಿಲುಕಿಸಲು ಸಿಬಿಐ ಅನ್ನು ದುರ್ಬಳಕೆ ಮಾಡುವ ಮೂಲಕ ಕಾಂಗ್ರೆಸ್ ಸರಕಾರ ಮತ್ತು ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಿತೂರಿ ನಡೆಸಿದ್ದರು ಎಂದು ಇಂದು ರಾಷ್ಟ್ರ ರಾಜಧಾನಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಜವುಳಿ ಖಾತೆ ಸಚಿವೆ ಸ್ಮ್ರತಿ ಇರಾನಿ ಹೇಳಿದರು.
ಸೊಹ್ರಾಬುದ್ದೀನ್ ಕೇಸ್ ರಾಜಕೀಯ ಪ್ರೇರಿತ ಕೇಸ್ ಆಗಿತ್ತು ಎಂದು ಇರಾನಿ ಆರೋಪಿಸಿದರು.
‘ಇಡಿಯ ಪ್ರಕರಣದ ತನಿಖೆಯು ನಿರ್ದಿಷ್ಟ ಗುರಿಯನ್ನು ಸಾಧಿಸಲು ಸಿದ್ಧಪಡಿಸಲಾಗಿದ್ದ ಪಠ್ಯದ ಪ್ರಕಾರ ನಡೆದಿತ್ತು. ಆದರೆ ಅಂತಿಮವಾಗಿ ಸತ್ಯವೇ ಜಯಿಸಿತು; ಈ ಕೇಸಿನಲ್ಲಿ ಕಾಂಗ್ರೆಸ್ ಪಿತೂರಿ ಅಲ್ಲದೇ ಬೇರೇನೂ ಇರಲಿಲ್ಲ ಎಂದು ಸಾಬೀತಾಯಿತು’ ಎಂದು ಸಚಿವೆ ಇರಾನಿ ಹೇಳಿದರು.
2010ರಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷದ ಒತ್ತಡಕ್ಕೆ ಮಣಿದು ಸಿಬಿಐ ಇಲ್ಲದ ಸಾಕ್ಷ್ಯಗಳನ್ನು ಸೃಷ್ಟಿಸಿ ತಥಾಕಥಿತ ತನಿಖೆ ನಡೆಸಿತು ಎಂದು ಇರಾನಿ ಹೇಳಿದರು.