Advertisement

Congress ಸರಕಾರದ ದಾವೆ, ದಬ್ಬಾಳಿಕೆಗೆ ಬಗ್ಗಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

12:16 AM Sep 02, 2024 | Team Udayavani |

ಬೆಂಗಳೂರು: ಅತ್ಯಂತ ಕಡಿಮೆ ಅವಧಿಯಲ್ಲಿ ಕಾಂಗ್ರೆಸ್‌ ಸರಕಾರವು ರಾಜ್ಯದ ಜನರ ವಿಶ್ವಾಸ, ಜನಪ್ರಿಯತೆಯನ್ನು ಕಳೆದುಕೊಂಡಿದೆ. ಕಳೆದ 2 ತಿಂಗಳಿನಿಂದ ರಾಜ್ಯದಲ್ಲೊಂದು ಆಡಳಿತ ಪಕ್ಷ ಇದೆ ಎಂಬುದನ್ನೇ ಜನರು ಮರೆತು ಹೋಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ದೂರಿದರು.

Advertisement

ಪಕ್ಷದ ಕಚೇರಿಯಲ್ಲಿ ರವಿವಾರ ನಡೆದ ಬಿಜೆಪಿ ಕಾನೂನು ಪ್ರಕೋಷ್ಠದ ರಾಜ್ಯ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಒಂದು ಕಡೆ ಆಡಳಿತ ಸಂಪೂರ್ಣ ಕುಸಿದು ಬಿದ್ದಿದೆ. ಜತೆಗೆ ಹಗರಣಗಳೂ ನಡೆದಿವೆ. ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣ ಇವುಗಳಲ್ಲಿ ಪ್ರಮುಖವಾದವು ಎಂದರು.

ಇವುಗಳ ವಿರುದ್ಧ ಜವಾಬ್ದಾರಿಯುತ ವಿಪಕ್ಷವಾಗಿ ಹೊರಾಟ ನಡೆಸುತ್ತಿದ್ದೇವೆ. ಆದರೆ ನಮ್ಮ ವಿರುದ್ಧ ದಾವೆ ಹೂಡುವ ದಬ್ಬಾಳಿಕೆ ಮಾಡುತ್ತಿದೆ. ವಿಪಕ್ಷಗಳಿಗೆ ಗೊಡ್ಡು ಬೆದರಿಕೆ ಹಾಕುವ ಮೂಲಕ ನಮ್ಮ ಬಾಯಿ ಮುಚ್ಚಿಸಬಹುದು ಎಂಬ ಭ್ರಮೆ ಬಿಡಿ. ನಮ್ಮ ಹೋರಾಟ ಭ್ರಷ್ಟ ಕಾಂಗ್ರೆಸ್‌ ಸರಕಾರದ ವಿರುದ್ಧ ನಡೆದೇ ನಡೆಯುತ್ತದೆ. ನಿಮ್ಮ ಯಾವ ಷಡ್ಯಂತ್ರಕ್ಕೂ ಬಗ್ಗುವುದಿಲ್ಲ ಎಂದು ಎಚ್ಚರಿಸಿದರು.

ಕಳಚಿ ಬಿದ್ದ ಮುಖವಾಡ
ಶಿವಮೊಗ್ಗದಲ್ಲಿ ನಡೆದ ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರ್‌ ಅವರ ಆತ್ಮಹತ್ಯೆ ಬಳಿಕ ಈ ಸರ್ಕಾರದ ಹಗರಣಗಳು ಜನರನ್ನು ತಲುಪುತ್ತಿವೆ. ಏನೂ ನಡೆದಿಲ್ಲ ಎಂದಿದ್ದ ಸಿಎಂ, ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆದಿದ್ದಾರೆ. ಅದು 187 ಕೋಟಿ ಹಗರಣವಲ್ಲ, 87 ಕೋಟಿ ರೂ.ಗಳ ಅಕ್ರಮ ಎಂದು ಸದನದಲ್ಲೇ ಒಪ್ಪಿಕೊಂಡಿದ್ದಾರೆ.

ಕಾಂಗ್ರೆಸಿಗರು ಏನೇ ರಾಜ್ಯಪಾಲರ ಮೇಲೆ ದೂರು ಹೇಳಲಿ, ಸಿಎಂ ಎಷ್ಟೇ ನಿರಪರಾಧಿ ಎಂದು ಹೇಳಿಕೊಂಡರೂ, ಸಿದ್ದರಾಮಯ್ಯ ಅವರ ಮುಖವಾಡ ಕಳಚಿ ಬಿದ್ದಿದೆ. ವಾಲ್ಮೀಕಿ ನಿಗಮದಲ್ಲಿ ದಲಿತರ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣವನ್ನು ಲೂಟಿ ಮಾಡಿದ್ದಾರೆ. ವಾಲ್ಮೀಕಿ ನಿಗಮದ ಹಣ ನೆರೆ ರಾಜ್ಯದ ಚುನಾವಣೆ ಸಂದರ್ಭದಲ್ಲಿ ಹೆಂಡ ಖರೀದಿಗೆ ಬಳಕೆಯಾಗಿದೆ ಎಂಬುದನ್ನು ತನಿಖಾ ಸಂಸ್ಥೆಯೇ ತಿಳಿಸಿದೆ. ಇದಕ್ಕಿಂತ ಇನ್ನೇನು ಬೇಕು? ಎಂದು ಪ್ರಶ್ನಿಸಿದರು.

Advertisement

ಸಿದ್ದರಾಮಯ್ಯ ನಾಮಬಲದಲ್ಲೇ ಮುಡಾ ಹಗರಣ
ಪ್ರತಿ ಹಂತದಲ್ಲೂ ಸಿದ್ದರಾಮಯ್ಯನವರ ನಾಮಬಲದ ಮೇಲೆ ಮುಡಾದಲ್ಲಿ ಅಕ್ರಮಗಳು ನಡೆದಿವೆ. ಶೇ. 50:50 ಅನುಪಾತದಲ್ಲೇ  ತಮ್ಮ ಪತ್ನಿಗೆ ನಿವೇಶನಗಳು ಲಭಿಸಿವೆ. ಆದರೆ ಇದು ಬಿಜೆಪಿ ಸರ್ಕಾರದ ಅವಧಿಯಲ್ಲೇ ಅದು ಆಗಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ಸರಕಾರ ಇದ್ದಾಗ ಶೇ. 50:50 ಅನುಪಾತದಲ್ಲಿ ನಿವೇಶನ ನೀಡಲು ಒಪ್ಪಿಗೆ ಕೊಟ್ಟಿರಲಿಲ್ಲ. ಕೆಲವು ಅಧಿಕಾರಿಗಳು ಸಿದ್ದರಾಮಯ್ಯ ಅವರ ಕುಟುಂಬಕ್ಕೆ ಖುಷಿ ನೀಡಲು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಅಕ್ರಮಗಳನ್ನು ಎಸಗಿದ್ದಾರೆ. ಇದೆಲ್ಲವೂ ಸಿದ್ದರಾಮಯ್ಯ ಮೈಸೂರು ಉಸ್ತುವಾರಿ ಸಚಿವರ ಹಾಗೂ ಉಪಮುಖ್ಯಮಂತ್ರಿ ಇದ್ದಾಗ ಪ್ರಭಾವ ಬೀರಿ ಮಾಡಿಸಿದ್ದಾಗಿದೆ ಎಂದು ಆರೋಪಿಸಿದರು.

“ಯಾವುದೇ ಪಕ್ಷ ಅಧಿಕಾರಕ್ಕೆ ಬಂದ ಹೊಸತರಲ್ಲಿ ಒಂದು-ಒಂದೂವರೆ ವರ್ಷ ಕಾಲಾವಕಾಶ ಕೊಡಬೇಕಾಗುತ್ತದೆ. ಎಷ್ಟೇ ಅನುಭವವಿದ್ದರೂ, ಸರಿಯಾದ ದಾರಿಯಲ್ಲಿ ಹೋಗಲು ಸ್ವಲ್ಪ ಸಮಯಾವಕಾಶ ಬೇಕಾಗುತ್ತದೆ. ಹಾಗೆಂದು ಅದರರ್ಥ ಭ್ರಷ್ಟಾಚಾರದಲ್ಲಿ ಮುಳುಗಬೇಕು ಎಂದಲ್ಲ. ಆಡಳಿತ ಸಂಪೂರ್ಣ ಕುಸಿದು ಬಿದ್ದಿದೆ. ಮತ್ತೂಂದೆಡೆ ಹಗರಣಗಳು ಹೊರಬರುತ್ತಲೇ ಇವೆ. ಇಂತಹ ಸರಕಾರದ ವಿರುದ್ಧ ಜವಾಬ್ದಾರಿಯುತ ವಿಪಕ್ಷವಾಗಿ ಹೋರಾಡಲೇಬೇಕು.” – ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next