ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಆಮಿತ್ ಶಾ ನಗರದಲ್ಲಿ ರೋಡ್ ಶೋ ಮೂಲಕ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಇಡೀ ದಿನ ಪಕ್ಷದ ನಾಯಕರು ಹಾಗೂ ಸ್ಥಳೀಯ ಅಭ್ಯರ್ಥಿಗಳ ಜತೆಗೂಡಿ ರೋಡ್ ಶೋ ನಡೆಸಿದ ಅಮಿತ್ ಶಾ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬದಲಿಸಿ ಬಿಜೆಪಿ ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಸರ್ವಜ್ಞನಗರ ಕ್ಷೇತ್ರದ ಕಮ್ಮನಹಳ್ಳಿಯಲ್ಲಿ ಎಂ.ಎನ್.ರೆಡ್ಡಿ ಪರ, ಶಿವಾಜಿನಗರ ಸಂಪಂಗಿರಾಮ ನಗರದಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪರ, ಶಾಂತಿನಗರದ ಜೋಗುಪಾಳ್ಯದಲ್ಲಿ ವಾಸುದೇವ ಮೂರ್ತಿ ಪರ ಮತಯಾಚನೆ ಮಾಡಿದರು. ನಂತರ ಮಹದೇವಪುರ ಕ್ಷೇತ್ರದಲ್ಲಿ ಅರವಿಂದ ಲಿಂಬಾವಳಿ ಪರ ಪ್ರಚಾರ ಕೈಗೊಂಡರು. ಸಂಸದ ಪಿ.ಸಿ.ಮೋಹನ್ ಉಪಸ್ಥಿತರಿದ್ದರು.
ರೋಡ್ ಶೋ ವೇಳೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿದ್ದು ಬಿಜೆಪಿ ಗೆಲ್ಲಿಸುವ ಮೂಲಕ ಅಭಿವೃದ್ಧಿಗೆ ಸಹಕರಿಸಿ. ಕೇಂದ್ರದಲ್ಲಿ ನರೇಂದ್ರಮೋದಿ ಅವರ ನೇತೃತ್ವದ ಸರ್ಕಾರ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿದ್ದು, ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬಂದರೆ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರ ದುರುಪಯೋಗ ಹಾಗೂ ಅಕ್ರಮಗಳ ಮೂಲಕ ಚುನಾವಣೆ ಗೆಲ್ಲಲು ಮುಂದಾಗಿದೆ. ಇದಕ್ಕೆ ತಕ್ಕ ಪಾಠ ಸಿಗಲಿದೆ. ರಾಜ್ಯದ ಮತದಾರರು ಬುದ್ಧಿವಂತರಾಗಿದ್ದು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ತಿಳಿಸಿದರು.
ಸರ್ವಜ್ಞನಗರದಲ್ಲಿ ರೋಡ್ ಶೋ ವೇಳೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪೊರಕೆ ಹಿಡಿದು ತಮ್ಮ ಅಭ್ಯರ್ಥಿ ಪರ ಘೋಷಣೆ ಹಾಕಿದರು. ಅಮಿತ್ ಶಾ ನಗುತ್ತಲೇ ಮುಂದೆ ಸಾಗಿದರು. ಆದರೆ, ರೋಡ್ ಶೋ ನಲ್ಲಿದ್ದ ಬಿಜೆಪಿ ಕಾರ್ಯಕರ್ತನೊಬ್ಬ ಎಎಪಿ ಕಾರ್ಯಕರ್ತರಿಗೆ ಚಪ್ಪಲಿ ತೋರಿದ ತಕ್ಷಣವೇ ನಾಯಕರು ಆತನನ್ನು ಸುಮ್ಮನಾಗಿಸಿದರು.