ರಾಂಚಿ: ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ(ನ10) ಜಾರ್ಖಂಡ್ನ ರಾಜಧಾನಿ ರಾಂಚಿಯಲ್ಲಿ 3-ಕಿಮೀ ಬೃಹತ್ ರೋಡ್ಶೋ ನಡೆಸಿದರು. ಸಾವಿರಾರು ಜನರು ರಸ್ತೆಯ ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಂತು ಜೈಕಾರ ಹಾಕಿದರು.
ಕೇಸರಿ ಬಣ್ಣದ ತೆರೆದ ವಾಹನದ ಮೇಲೆ ನಿಂತಿದ್ದ ಪ್ರಧಾನಿ ಮೋದಿ, ಜಿಂದಾಬಾದ್ ಎಂದು ಘೋಷಣೆಗಳನ್ನು ಕೂಗುತ್ತಿದ ಜನಸಮೂಹದತ್ತ ಕೈಬೀಸಿದರು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಜನರು ತಮ್ಮ ಮೊಬೈಲ್ನಲ್ಲಿ ರೋಡ್ಶೋ ಕ್ಷಣಗಳನ್ನು ಸೆರೆಹಿಡಿಯುವ ಮೂಲಕ ತಮ್ಮ ಉತ್ಸಾಹ ತೋರಿದರು. ಕಳೆದ ಆರು ತಿಂಗಳಲ್ಲಿ ಪ್ರಧಾನಿ ಮೋದಿ ಅವರು ರಾಂಚಿಯಲ್ಲಿ ನಡೆಸಿದ ಎರಡನೇ ರೋಡ್ಶೋ ಇದಾಗಿದೆ.
ರೋಡ್ಶೋ ಒಟಿಸಿ ಮೈದಾನದಲ್ಲಿ ಬಿಗಿ ಭದ್ರತೆ ಮತ್ತು ಭಾರೀ ಪೊಲೀಸ್ ನಿಯೋಜನೆಯ ನಡುವೆ ಪ್ರಾರಂಭವಾಯಿತು ಮತ್ತು ನ್ಯೂ ಮಾರ್ಕೆಟ್ ಚೌಕ್ನಲ್ಲಿ ಮುಕ್ತಾಯವಾಯಿತು.
81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಗೆ ಎರಡು ಹಂತಗಳಲ್ಲಿ ನವೆಂಬರ್ 13 ಮತ್ತು ನವೆಂಬರ್ 20 ರಂದು ಮತದಾನ ನಡೆಯಲಿದ್ದು, ನವೆಂಬರ್ 23 ರಂದು ಮತಗಳ ಎಣಿಕೆ ನಡೆಯಲಿದೆ.