ಅಹ್ಮದಾಬಾದ್: ಗುಜರಾತ್ ರಾಜಧಾನಿ ಅಹ್ಮದಾಬಾದ್‌ನಲ್ಲಿ ನಡೆಯುತ್ತಿರುವ ಜಗನ್ನಾಥ ರಥಯಾತ್ರೆಯನ್ನು ಈ ಹಿಂದೆ ಆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಸತತವಾಗಿ ನಿಷೇಧಿಸುತ್ತಾ ಬಂದಿತ್ತೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರೋಪಿಸಿದ್ದಾರೆ.
ಗುಜರಾತ್‌ನ ಗಾಂಧಿನಗರ ಜಿಲ್ಲೆಯ ರೂಪಲ್ ಹಾಗೂ ವಾಸನ್ ಎಂಬ ಹಳ್ಳಿಗಳ ಕೆರೆಗಳ ಸೌಂದರ್ಯಾಭಿವೃದ್ಧಿ ಹಾಗೂ ಇನ್ನಿತರ ಯೋಜನೆಗಳಿಗೆ ಚಾಲನೆ ನೀಡಿದ ಅವರು, ಆನಂತರ ನಡೆದ ರ್‍ಯಾಲಿಯಲ್ಲಿ ಮಾತನಾಡಿದರು.
ಇಂದು ಗುಜರಾತ್‌ನ ಅಹ್ಮದಾಬಾದ್‌ನಲ್ಲಿ 145ನೇ ಜಗನ್ನಾಥ ರಥೋತ್ಸವ ನಡೆಯುತ್ತಿದೆ. ಆದರೆ, ಗುಜರಾತ್‌ನಲ್ಲಿ 1995ಕ್ಕೂ ಮುನ್ನಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ, ರಥೋತ್ಸವಕ್ಕೆ ಅಡ್ಡಿಯೊಡ್ಡಿತ್ತು.
ರಥಯಾತ್ರೆ ಸಾಗುವ ಕಡೆಯಲ್ಲಿಲ್ಲಾ ಕರ್ಫ್ಯೂ ಜಾರಿಗೊಳಿಸುವ ಮೂಲಕ ರಥೋತ್ಸವ ನಡೆಯದಂತೆ ನೋಡಿಕೊಳ್ಳುತ್ತಿತ್ತು. ಆದರೆ, ಗುಜರಾತ್ ಜನತೆ ಬಿಜೆಪಿಗೆ ಅಧಿಕಾರ ಕೊಟ್ಟಾಗಿನಿಂದ ಪರಿಸ್ಥಿತಿ ಬದಲಾಯಿತು. ಪ್ರತಿ ವರ್ಷ ರಥೋತ್ಸವ ನಡೆಯುತ್ತಲೇ ಇದೆ ಎಂದು ಅವರು ವಿವರಿಸಿದರು.