Advertisement

ಕಾಂಗ್ರೆಸ್‌, ಬಿಜೆಪಿ ಟಿಕೆಟ್‌ ವಂಚಿತರು ಜೆಡಿಎಸ್‌ಗೆ

12:13 PM Apr 18, 2018 | |

ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಧಾನಿ ಬೆಂಗಳೂರಿನಲ್ಲಿ ಜೆಡಿಎಸ್‌ಗೆ ಬಂಪರ್‌ ಲಭಿಸಿದೆ. ಕಾಂಗ್ರೆಸ್‌ ಟಿಕೆಟ್‌ ವಂಚಿತ ಸಿ.ವಿ.ರಾಮನ್‌ನಗರ ಕ್ಷೇತ್ರದ ಪಿ. ರಮೇಶ್‌, ಬಿಜೆಪಿ ಟಿಕೆಟ್‌ ಸಿಗದೆ ಅಸಮಾಧಾನಗೊಂಡಿರುವ ಚಿಕ್ಕಪೇಟೆ ಕ್ಷೇತ್ರದ ಹೇಮಚಂದ್ರ ಸಾಗರ್‌, ರಾಜರಾಜೇಶ್ವರಿನಗರ ಕ್ಷೇತ್ರದ ಎಂ.ರಾಮಚಂದ್ರ ಜೆಡಿಎಸ್‌ ಸೇರಿದ್ದಾರೆ.

Advertisement

ಇವರೊಂದಿಗೆ ರಾಮಚಂದ್ರ ಅವರ ಸೊಸೆ, ನಟಿ ಅಮೂಲ್ಯ, ರಾಜರಾಜೇಶ್ವರಿನಗರದ ಕಾಂಗ್ರೆಸ್‌ ಮುಖಂಡ ಹನುಮಂತರಾಯಪ್ಪ ಕೂಡ ಜೆಡಿಎಸ್‌ ಸೇರ್ಪಡೆಗೊಂಡಿದ್ದಾರೆ. ಜೆಡಿಎಸ್‌ ಕಚೇರಿ ಜೆ.ಪಿ.ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ದೇವೇಗೌಡರು ಪಕ್ಷದ ಧ್ವಜ ನೀಡುವ ಮೂಲಕ ಈ ಮುಖಂಡರನ್ನು ಬರಮಾಡಿಕೊಂಡರು.

ನಂತರ ಮಾತನಾಡಿದ ದೇವೇಗೌಡರು, ಇದು ನನಗೆ ಅತ್ಯಂತ ಸಂತೋಷದ ದಿನ. ಹಲವು ಪ್ರಭಾವಿ ನಾಯಕರು ಜೆಡಿಎಸ್‌ ಸೇರಿದ್ದಾರೆ. ದಿನೇ ದಿನೇ ಪಕ್ಷ ಬಲಿಷ್ಠವಾಗುತ್ತಿದ್ದು, ಬೆಂಗಳೂರು ನಗರದಲ್ಲಿ ಕನಿಷ್ಟ 12ರಿಂದ 15 ಕ್ಷೇತ್ರಗಳಲ್ಲಿ ನಾವು ಗೆಲ್ಲುವ ವಿಶ್ವಾಸವಿದೆ ಎಂದರು.

ಅನ್ಯ ಪಕ್ಷಗಳ ಪ್ರಭಾವಿ ನಾಯಕರು ಜೆಡಿಎಸ್‌ ಸೇರುತ್ತಿರುವುದು ತಮ್ಮ ವಿಶ್ವಾಸಕ್ಕೆ ಕಾರಣವಾಗಿದೆ. ಆದರೆ, ಅನ್ಯ ಪಕ್ಷಗಳಿಂದ ಸೇರ್ಪಡೆಯಾಗುತ್ತಿರುವ ಕಾರಣಕ್ಕಾಗಿ ಪಕ್ಷದಲ್ಲಿ ಎಲ್ಲಿಯೂ ಒಡಕು ಬರದಂತೆ ನೋಡಿಕೊಳ್ಳಬೇಕು ಎಂದು ಮುಖಂಡರು ಮತ್ತು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ಪ್ರಸನ್ನ ಕುಮಾರ್‌ ಇಂದು ಜೆಡಿಎಸ್‌ ಸೇರ್ಪಡೆ
ಬೆಂಗಳೂರು:
ನಗರದ ಪುಲಿಕೇಶಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಸಿಗದೆ ಅಸಮಾಧಾನಗೊಂಡಿರುವ ಪ್ರಸನ್ನ ಕುಮಾರ್‌ ಜೆಡಿಎಸ್‌ ಸೇರಲು ನಿರ್ಧರಿಸಿದ್ದು, ಮಂಗಳವಾರ ರಾತ್ರಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

Advertisement

ಪ್ರಸನ್ನ ಕುಮಾರ್‌ಗೆ ಪುಲಿಕೇಶಿನಗರದಿಂದ ಟಿಕೆಟ್‌ ನೀಡಲು ಜೆಡಿಎಸ್‌ ಕೂಡ ಒಪ್ಪಿಗೆ ನೀಡಿದೆ. ಹೀಗಾಗಿ ಬುಧವಾರ ಅವರು ಅಧಿಕೃತವಾಗಿ ಜೆಡಿಎಸ್‌ ಸೇರಲಿದ್ದಾರೆ. 2008ರಲ್ಲಿ ಪುಲಿಕೇಶಿನಗರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ಪ್ರಸನ್ನ ಕುಮಾರ್‌ 2013ರಲ್ಲಿ ಜೆಡಿಎಸ್‌ ಅಭ್ಯರ್ಥಿ ಅಖಂಡ ಶ್ರೀನಿವಾಸಮೂರ್ತಿ ವಿರುದ್ಧ ಸೋಲು ಕಂಡಿದ್ದರು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅಖಂಡ ಶ್ರೀನಿವಾಸಮೂರ್ತಿ ಕಾಂಗ್ರೆಸ್‌ ಸೇರಿದ್ದು, ಅವರಿಗೆ ಪುಲಿಕೇಶಿನಗರದ ಟಿಕೆಟ್‌ ಘೋಷಿಸಲಾಗಿದೆ. ಇದರಿಂದ ಅಸಮಾಧಾನಗೊಂಡ ಪ್ರಸನ್ನ ಕುಮಾರ್‌ ಜೆಡಿಎಸ್‌ ಸೇರಿ ಅಖಂಡ ಶ್ರೀನಿವಾಸಮೂರ್ತಿ ವಿರುದ್ಧ ಸ್ಪರ್ಧಿಸಲು ಮುಂದಾಗಿದ್ದಾರೆ.

ನನಗೆ ರಾಜಕೀಯ ಅಷ್ಟು ಗೊತ್ತಿಲ್ಲ. ಮಾವನವರಿಗೆ (ಎಂ.ರಾಮಚಂದ್ರ) ಬೆಂಬಲವಾಗಿ ನಿಲ್ಲುತ್ತೇನೆ. ಸದ್ಯ ರಾಜರಾಜೇಶ್ವರಿನಗರದಲ್ಲಿ ಮಾತ್ರ ಮಾವನವರ ಪರ ಪ್ರಚಾರ ಮಾಡುತ್ತೇನೆ. ರಾಜ್ಯಾದ್ಯಂತ ಪಕ್ಷದ ಪರ ಪ್ರಚಾರ ಮಾಡುವ ಬಗ್ಗೆ ಯೋಚನೆ ಮಾಡಿಲ್ಲ.
-ಅಮೂಲ್ಯ, ಚಿತ್ರನಟಿ

Advertisement

Udayavani is now on Telegram. Click here to join our channel and stay updated with the latest news.

Next