Advertisement

ಕಾರ್ಯಕರ್ತರ ಸೇರ್ಪಡೆ: ಕೈ-ದಳ ಕಸರತ್ತು

03:02 PM Apr 11, 2023 | Team Udayavani |

ಶ್ರೀನಿವಾಸಪುರ: ರಾಜಕೀಯ ಎದುರಾಳಿಗಳಾದ ಕಳೆದ 45 ವರ್ಷಗಳ ರಾಜಕಾರಣ ಮಾಡಿದ ಕೆ.ಆರ್‌.ರಮೇಶ್‌ಕುಮಾರ್‌ ಹಾಗೂ ಜಿ.ಕೆ.ವೆಂಕಟ ಶಿವಾರೆಡ್ಡಿರವರು ಚುನಾವಣೆ ಮತದಾನಕ್ಕೆ ದಿನಗಳು ಹತ್ತಿರವಾಗುತ್ತಿದ್ದಂತೆ ಸೇರ್ಪಡೆಗಳ ಭರಾಟೆಯಲ್ಲಿ ಆರೋಪ, ನಿಂದನೆ, ಪರಸ್ಪರ ಟೀಕೆಗಳಲ್ಲಿ ತೊಡಗಿಸಿ ಕೊಂಡಿರುವುದು ಹಲವು ವೇದಿಕೆಗಳು ಸಾಕ್ಷಿಯಾಗುತ್ತಿವೆ.

Advertisement

ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಇತಿಹಾಸ ಪುಟಗಳಲ್ಲಿ ಉಳಿಯುವಂತಹ ಇಬ್ಬರು ನಾಯಕರು ದೀರ್ಘ‌ಕಾಲ ಪರಸ್ಪರ 9 ಚುನಾವಣೆ ಎದುರಿಸಿದ್ದಾರೆ. ಈಗ ಮತ್ತೂಂದು ಚುನಾವಣೆಗೆ ಸಜ್ಜಾಗಿ ಮತದಾರರನ್ನು ಸೆಳೆಯುವ ತಂತ್ರದಲ್ಲಿ ಹಗಲಿರಳು ಕ್ಷೇತ್ರ ಪ್ರವಾಸ ಮಾಡುತ್ತಿದ್ದಾರೆ. ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಬಸ್‌ಗಳನ್ನು ಓಡಿಸುವವರಾಗಿದ್ದಾರೆ ಅವರಿಗೇನು ಗೊತ್ತು, ಅವರು ಯಾವ ಕೆಲಸ ಮಾಡಿದ್ದಾರೆ, ತಾನು ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂಬುದು ರಮೇಶ್‌ ಕುಮಾರ್‌ ದೂರಿದರೆ, ರಮೇಶ್‌ ಕುಮಾರ್‌ ಆಕ್ರವಾಗಿ ಜಮೀನು ಮಾಡಿ ಕೊಂಡಿದ್ದಾರೆ, ಕೆ.ಸಿ. ವ್ಯಾಲಿ ಯೋಜನೆ ಯಲ್ಲಿ ಕಮಿಷನ್‌ ಹೊಡೆದಿದ್ದಾರೆ. ಅಭಿವೃದ್ಧಿ ಕೆಲಸಗಳು ಶೂನ್ಯವೆಂದು ಜಿ.ಕೆ. ವೆಂಕಟಶಿವಾರೆಡ್ಡಿ ಆರೋಪಿಸುತ್ತಿದ್ದಾರೆ .

ಕಾರ್ಯಕರ್ತರ ಸೇರ್ಪಡೆಯಲ್ಲಿ ಕಸರತ್ತು: ಇಲ್ಲಿ ಜೆಡಿಎಸ್‌- ಕಾಂಗ್ರೆಸ್‌ ಪ್ರಬಲವಾಗಿದ್ದು, ಕೆಲವರು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದರೆ. ಮತ್ತೆ ಕೆಲವರು ಕಾಂಗ್ರೆಸ್‌ ಬಿಟ್ಟು ಜೆಡಿಎಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ. ಸೇರ್ಪಡೆಗಳ ವಿಚಾರದಲ್ಲಿ ತಮ್ಮ ತಮ್ಮ ಪಕ್ಷದ ನಾಯಕರು ತೆರೆಮರೆಯಲ್ಲಿ ಸೇರ್ಪಡೆಗೆ ಕಸರತ್ತು ನಡೆಸುತ್ತಿದ್ದಾರೆ.

ಎಲ್ಲಿ ಸೇರಿದರು ಇತ್ತ ಬಾವಿ, ಅತ್ತ ಕೆರೆ: ಇದರಿಂದ ಪ್ರತಿದಿನ ಒಂದಲ್ಲಾ ಒಂದು ರೀತಿಯಲ್ಲಿ ಸೇರ್ಪಡೆಗಳ ಭರಾಟೆ ನಡೆಯುತ್ತಿದೆ. ಸೇರ್ಪಡೆಯಾದವರು ಇಂದು ಇಲ್ಲಿ, ನಾಳೆ ಎಲ್ಲೋ ಎನ್ನುವಂತಾದರೂ, ಕಾರ್ಯಕರ್ತರನ್ನು ಪಕ್ಷದಲ್ಲಿ ಬಿಗಿದಿಟ್ಟುಕೊಳ್ಳವ ಪ್ರಯತ್ನಗಳು ನಡೆಯುತ್ತಿದೆ. ಯಾವ ಪಕ್ಷಕ್ಕೆ ಸೇರ್ಪಡೆಯಾದರೂ ಇತ್ತ ಬಾವಿ, ಅತ್ತ ಕೆರೆ ಎನ್ನುವಂತೆ ಸೇರ್ಪಡೆಯಾದವರು ಇನ್ನೊಂದು ಪಕ್ಷದ ಕೆಂಗೆಣ್ಣಿಗೆ ಗುರಿಯಾಗಬೇಕಿದೆ. ಪಕ್ಷಗಳಲ್ಲಿ ಜಾತಿಗಳ ಲೆಕ್ಕಾಚಾರವು ನಡೆಯುತ್ತಿದ್ದು, ಸಮುದಾಯಗಳಲ್ಲಿ ಪ್ರಬಲ ನಾಯಕರು ನೇತೃತ್ವ ವಹಿಸುವುದು ಬಂದವರನ್ನು ಹೂಮಾಲೆ ಹಾಕಿ ಸೇರ್ಪಡೆ ಮಾಡಿಕೊಳ್ಳುವುದು ನಡೆಯುತ್ತಿದೆ.ಪ್ರತಿ ಜಾತಿ ಸಮುದಾಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಈ ಎರಡು ಪಕ್ಷದ ಕಡೆ ವಾಲಿದ್ದಾರೆನ್ನುವುದು ಕಾಣುತ್ತಿದೆ.

ಕ್ಷೇತ್ರದಲ್ಲಿ ಇನ್ನೊಬ್ಬರಿಗಿಲ್ಲ ಅವಕಾಶ: ಕ್ಷೇತ್ರದಲ್ಲಿ ಕೆ. ಆರ್‌.ರಮೇಶ್‌ಕುಮಾರ್‌ ಹಾಗೂ ಜಿ.ಕೆ.ವೆಂಕಟಶಿವಾರೆಡ್ಡಿ ಎಷ್ಟು ಪ್ರಬಲ ನಾಯಕರಾಗಿದ್ದಾರೆಂದರೆ ನಡೆದ ಎಲ್ಲಾ ಚುನಾವಣೆಗಳಲ್ಲಿ ಇವರ ವಯುಕ್ತಿಕ ವರ್ಚಸ್ಸಿನಿಂದ ಮಾತ್ರ ಗೆಲವು ಕಂಡಿದ್ದಾರೆ. ಪಕ್ಷಗಳ ಬದಲಾವಣೆಯಾದರೂ ಇಲ್ಲಿ ವೈಯಕ್ತಿಕವಾಗಿ ಇಬ್ಬರನ್ನು ಬೆಂಬಲಿಸುವುದು ಸಂಪ್ರದಾಯವಾಗಿದೆ. ಇವರಿಬ್ಬರೂ ಪರಸ್ಪರ ಚುನಾವಣೆಯಲ್ಲಿ ಇರುವವರಿಗೂ, ಇನ್ನೊಬ್ಬರಿಗೆ ಅವಕಾಶವಿಲ್ಲ ಎಂಬುದು ಕ್ಷೇತ್ರದ ಜನರ ಮಾತಾಗಿದೆ. ಇಬ್ಬರೂ ನಾಯಕರು ಪಕ್ಷಗಳ ಮತದಾರರನ್ನು ಸೆಳೆಯುವ ಮೂಲಕ ಸೇರ್ಪಡೆಗೆ ವೇದಿಕೆ ಸಿದ್ಧತೆ ಮಾಡಿಕೊಂಡಿರುವುದು ಕ್ಷೇತ್ರದಾದ್ಯಂತ ನಡೆಯುತ್ತಿದೆ.

Advertisement

ಕ್ಷೇತ್ರದಲ್ಲಿರುವ ಬಹಳಷ್ಟು ದಲಿತರ ಕಾಲೋನಿಗಳಲ್ಲಿ ಮೂಲ ಸೌಲಭ್ಯಗಳು ವಂಚನೆಯಾಗಿವೆ. ಚುನಾ ವಣೆ ಸಮಯಕ್ಕೆ ಭರವಸೆ ಗಳ ಮಹಾಪೂರ ಹರಿದು ಬಿಡುತ್ತಾರೆ. ಎಲ್ಲಿಲ್ಲದ ಪ್ರೀತಿ ತೋರಿಸುವುದು ಕಂಡರೂ, ಯಾವ ಕಾಲೋನಿಗಳಲ್ಲಿ ಎಷ್ಟರ ಮಟ್ಟಿಗೆ ಸೌಲಭ್ಯ ಒದಗಿಸಲಾಗಿದೆ ಎಂಬುದು ಚುನಾವಣೆಯಲ್ಲಿ ಗೆದ್ದವರು, ಸ್ಪರ್ಧೆಗೆ ನಿಲ್ಲುವವರು ಹೇಳಬೇಕಾಗಿದೆ. ● ಅಡವಿಚಂಬಕೂರು ಸದಾಶಿವ,ದಲಿತ ಮುಖಂಡ

ಚುನಾವಣಾ ಸಮಯಕ್ಕೆ ಸೇರ್ಪಡೆಗಳು ಸಹಜ. ಆದರೆ, ಈ ಸಮಯದಲ್ಲಿ ಸಾಕಷ್ಟು ಭರವಸೆಗಳು ನೀಡುತ್ತಾರೆ. ಗೆದ್ದ ನಂತರ ಈಡೇರಿಸುತ್ತಾರೆಯೇ? ಚುನಾವಣೆ ನಡೆಯುವ ಹಿಂದಿನ ವರ್ಷಗಳಲ್ಲಿ ಮತದಾರರಿಗೆ ಯಾವ ಭರವಸೆ ನೀಡುವುದಿಲ್ಲ. ಚುನಾವಣೆ ಬಂದಿದ್ದೇ ಭರವಸೆ ನೀಡುವ ಮೂಲಕ ಮತದಾರರನ್ನು ಯಾಮಾರಿಸುವ ಕೆಲಸ ಮಾತ್ರ ನಡೆಯುತ್ತದೆ. ● ಎನ್‌.ನಾಗಭೂಷಣ್‌, ತಾಲೂಕು ಕಾರ್ಮಿಕ ಮುಖಂಡರು ರೋಜರನಹಳ್ಳಿ

– ಕೆ.ವಿ.ನಾಗರಾಜ್‌

Advertisement

Udayavani is now on Telegram. Click here to join our channel and stay updated with the latest news.

Next