Advertisement

Karnataka ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿಗೆ JDS ಕಾರಣ; ಆಯೋಗದ ಅಂಕಿಅಂಶದಲ್ಲೇನಿದೆ?

01:23 PM Sep 07, 2023 | Team Udayavani |

2023ರಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಭರ್ಜರಿ ಜಯಗಳಿಸಿ ಅಧಿಕಾರದ ಗದ್ದುಗೆ ಏರಿದೆ. ಏತನ್ಮಧ್ಯೆ ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್‌ ದೊಡ್ಡ ಪ್ರಮಾಣದ ಗೆಲುವು ಪಡೆಯಲು ಎಚ್.ಡಿ.ದೇವೇಗೌಡರ ನೇತೃತ್ವದ ಜೆಡಿಎಸ್‌ ಪಕ್ಷದ ಕಳಪೆ ಸಾಧನೆಯೇ ಕಾರಣ ಎಂಬ ಅಂಶ ಚುನಾವಣಾ ಆಯೋಗದ ವಿಶ್ಲೇಷಣಾ ವರದಿಯಿಂದ ಬಹಿರಂಗವಾಗಿದೆ.

Advertisement

139 ಸ್ಥಾನಗಳಲ್ಲಿ ಜೆಡಿಎಸ್ ಠೇವಣಿ ಕಳೆದುಕೊಂಡಿದೆ:

ಜನತಾದಳ (ಜಾತ್ಯತೀತ) ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 3/2ರಷ್ಟು ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡಿದ್ದು, ಇದರ ಪರಿಣಾಮವಾಗಿ ಕಾಂಗ್ರೆಸ್‌ ರಾಜ್ಯದಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿರುವುದಾಗಿ ತಿಳಿಸಿದೆ.

ವಿಧಾನಸಭಾ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಪ್ರಾಬಲ್ಯ ಹೊಂದಿದ್ದ ಜೆಡಿಎಸ್‌ ಮತಗಳಿಸುವಲ್ಲಿ ತೀವ್ರ ಹಿನ್ನಡೆ ಅನುಭವಿಸಿರುವುದು ಕಾಂಗ್ರೆಸ್‌ ಗೆಲುವಿಗೆ ಕಾರಣವಾಗಿದೆ. ಈ ಭಾಗದಲ್ಲಿ ಕಾಂಗ್ರೆಸ್‌ ನ ಒಕ್ಕಲಿಗ ಮುಖಂಡ ಡಿಕೆ ಶಿವಕುಮಾರ್‌ ಅವರ ಮೇಲೆ ಜೆಡಿಎಸ್‌ ನ ಒಕ್ಕಲಿಗ ಮತದಾರರು ವಿಶ್ವಾಸ ಹೊಂದಿರುವುದು ಜೆಡಿಎಸ್‌ ಗೆ ದೊಡ್ಡ ಹೊಡೆತ ನೀಡಿರುವುದಾಗಿ ವರದಿ ವಿವರಿಸಿದೆ.

ಚುನಾವಣಾ ಆಯೋಗದ ಅಂಕಿಅಂಶಗಳ ವಿಶ್ಲೇಷಣೆಯ ಪ್ರಕಾರ, 2023ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 209 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಜೆಡಿಎಸ್‌ ಬರೋಬ್ಬರಿ 139 ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡಿದೆ. ಅಂದರೆ ಜೆಡಿಎಸ್‌ ಸ್ಪರ್ಧಿಸಿದ್ದ ಸ್ಥಾನಗಳಲ್ಲಿ ಶೇ.66ರಷ್ಟು ಮತಗಳನ್ನು ಕಳೆದುಕೊಂಡಿದೆ. ಎಚ್.ಡಿ.ದೇವೇಗೌಡರ ಪಕ್ಷ 2018ಕ್ಕೆ ಹೋಲಿಸಿದರೆ ಸುಮಾರು 15 ಲಕ್ಷ ಮತಗಳನ್ನು ಕಳೆದುಕೊಂಡಿದ್ದು, ಕೇವಲ 19 ಸ್ಥಾನಗಳಲ್ಲಷ್ಟೇ ಜಯಗಳಿಸುವಂತಾಗಿದೆ.  2018ರಲ್ಲಿ ಜೆಡಿಎಸ್‌ 38 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.

Advertisement

ಅಂಕಿಅಂಶದ ಪ್ರಕಾರ, ರಾಜ್ಯದಲ್ಲಿ ಜೆಡಿಎಸ್‌ ಸೋಲು ನೇರವಾಗಿ ಕಾಂಗ್ರೆಸ್‌ ಗೆ ಲಾಭವಾಗಿದೆ. 2018ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ, 2023ರಲ್ಲಿ ಕಾಂಗ್ರೆಸ್‌ 23 ಲಕ್ಷ ಮತಗಳನ್ನು ಹೆಚ್ಚುವರಿಯಾಗಿ ಗಳಿಸಿದ್ದು, ಭಾರತೀಯ ಜನತಾ ಪಕ್ಷ 9 ಲಕ್ಷ ಮತ ಗಳಿಸಿದೆ. ಈ ಚುನಾವಣೆಯಲ್ಲಿ ಅತೀ ಹೆಚ್ಚು ನಷ್ಟ ಅನುಭವಿಸಿರುವುದು ಜೆಡಿಎಸ್.‌ ಚುನಾವಣೆಯಲ್ಲಿ ಜೆಡಿಎಸ್‌ ಮತದಾರರು ಕಾಂಗ್ರೆಸ್‌ ನತ್ತ ವಾಲಿದ್ದು, ಇದು ಜೆಡಿಎಸ್‌ ಪಕ್ಷಕ್ಕೆ ಭಾರೀ ಹೊಡೆತ ನೀಡಿದಂತಾಗಿದೆ ಎಂದು ವರದಿ ತಿಳಿಸಿದೆ.

ಲೋಕಸಭೆ ಚುನಾವಣೆ ಅಗ್ನಿಪರೀಕ್ಷೆ:

ಜೆಡಿಎಸ್‌ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಇತ್ತೀಚೆಗೆ ಲಘು ಹೃದಯಾಘಾತವಾಗಿದ್ದು, ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಡಿಸ್‌ ಚಾರ್ಜ್‌ ಆಗಿದ್ದು, ಇದು ತನಗೆ ಸಿಕ್ಕ ಮೂರನೇ ಜನ್ಮ ಎಂದು ಪತ್ರಿಕಾಗೋಷ್ಠಿಯಲ್ಲಿ ಭಾವುಕರಾಗಿ ಹೇಳಿದ್ದರು. ಏತನ್ಮಧ್ಯೆ ಜೆಡಿಎಸ್‌ ಪಕ್ಷ 2024ರ ಲೋಕಸಭಾ ಚುನಾವಣೆಯಲ್ಲಿ ಮತಗಳಿಸುವ ಬಗ್ಗೆ ವಿಶ್ವಾಸ ಇರಿಸಿಕೊಂಡಿದೆ. ಆದರೆ ಚುನಾವಣಾ ವಿಶ್ಲೇಷಕರ ಪ್ರಕಾರ, ಪ್ರಾದೇಶಿಕ ಪಕ್ಷಗಳು ಎಷ್ಟು ಪ್ರಾಮುಖ್ಯತೆ ವಹಿಸಲಿವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ 28 ಸ್ಥಾನಗಳಲ್ಲಿ ಕನಿಷ್ಠ 6 ಕ್ಷೇತ್ರಗಳನ್ನಾದರೂ ಗೆಲ್ಲಬೇಕೆಂದು ಜೆಡಿಎಸ್‌ ವರಿಷ್ಠ ಎಚ್‌ ಡಿ ದೇವೇಗೌಡರು ಮಾರ್ಗಸೂಚಿಯನ್ನು ರೂಪಿಸಿದ್ದಾರೆನ್ನಲಾಗಿದೆ. ಈ ಎಲ್ಲಾ ಲೆಕ್ಕಾಚಾರಗಳ ನಡುವೆ ಸಾರ್ವತ್ರಿಕ ಚುನಾವಣೆಗೂ ಮುನ್ನವೇ ಜೆಡಿಎಸ್‌ ಶಾಸಕರನ್ನು ಸೆಳೆಯಲು ಕಾಂಗ್ರೆಸ್‌ ರಣತಂತ್ರ ರೂಪಿಸುತ್ತಿದೆ.  ಜೆಡಿಎಸ್‌ ನ 19 ಶಾಸಕರ ಪೈಕಿ 13 ಶಾಸಕರಿಗೆ ರಾಜೀನಾಮೆ ಕೊಡಿಸಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ಯಾಕೆಂದರೆ ಪಕ್ಷಾಂತರ ನಿಗ್ರಹ ಕಾಯ್ದೆಯಡಿ ಅನರ್ಹತೆಯಿಂದ ಬಚಾವಾಗಲು ಕಾಂಗ್ರೆಸ್‌ ಈ ತಂತ್ರಗಾರಿಕೆ ರೂಪಿಸುತ್ತಿದೆ ಎಂದು ವರದಿ ವಿವರಿಸಿದೆ.

ಕಾಂಗ್ರೆಸ್‌ ನ ಆಪರೇಷನ್‌ ಜೆಡಿಎಸ್‌ ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿಟಿ ದೇವೇಗೌಡ ನೇತೃತ್ವದಲ್ಲಿ 21 ಜನರ ಕೇಂದ್ರ ಸಮಿತಿಯನ್ನು ರಚಿಸಿ, ಪಕ್ಷದ ಶಾಸಕರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ವರದಿ ಹೇಳಿದೆ.

ಮತ್ತೊಂದೆಡೆ ರಾಜ್ಯದಲ್ಲಿ ತನ್ನ ಸಾಂಪ್ರದಾಯಿಕ ಹಾಗೂ ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಮತ ಹೆಚ್ಚಿಸಿಕೊಳ್ಳಲು ರಾಜಕೀಯ ತಂತ್ರಜ್ಞ ಪ್ರಶಾಂತ್‌ ಕಿಶೋರ್‌ ಅವರೊಂದಿಗೆ ಜೆಡಿಎಸ್‌ ಸಮಾಲೋಚನೆ ನಡೆಸಿದೆ. ಇದರೊಂದಿಗೆ 2024ರ ಲೋಕಸಭಾ ಚುನಾವಣೆ ಜೆಡಿಎಸ್‌ ಗೆ ಮಾಡು ಇಲ್ಲವೇ ಮಡಿ ಎಂಬ ಅಗ್ನಿಪರೀಕ್ಷೆಯ ಅಖಾಡವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next