Advertisement

ಉಪ ಸಮಿತಿ ರಚನೆಗೆ ತೀರ್ಮಾನ

12:37 PM Sep 05, 2020 | Suhan S |

ಬೆಂಗಳೂರು: ಬಿಬಿಎಂಪಿಗೆ ನೂತನ ಕಾಯ್ದೆ ಜಾರಿಗೆ ತರುವ ಕುರಿತಂತೆ ವಿಧಾನ ಮಂಡಲದ ಜಂಟಿ ಸದನ ಸಮಿತಿ ಹೆಚ್ಚಿನ ವಿಷಯಗಳ ಮಾಹಿತಿ ಸಂಗ್ರಹಕ್ಕೆ ಉಪ ಸಮಿತಿ ರಚನೆಗೆ ನಿರ್ಧರಿಸಲಾಗಿದೆ.

Advertisement

ಶಾಸಕ ಎಸ್‌.ರಘು ಅಧ್ಯಕ್ಷತೆಯ ಸಮಿತಿ ಶುಕ್ರವಾರ ಸಭೆ ಸೇರಿ ಚರ್ಚೆ ನಡೆಸಿದ್ದು, ನೂತನ ಕಾಯ್ದೆ ರಚನೆ ಕುರಿತಂತೆ ವಿಸ್ತೃತವಾಗಿ ಅಧ್ಯಯನ ಮಾಡಬೇಕಿದೆ. ಅಲ್ಲದೇ ಪ್ರತಿ ವಾರವೂ ಎಲ್ಲರೂ ಸೇರಿ ಚರ್ಚಿಸುವ ಬದಲು ಸಕ್ರೀಯರಾಗಿ ಕಾರ್ಯ ನಿರ್ವಹಿಸುವ ಮೂರು ಪಕ್ಷಗಳ ಶಾಸಕರನ್ನು ಒಳಗೊಂಡ ಉಪ ಸಮಿತಿ ರಚಿಸಲು ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ತಿಳಿದು ಬಂದಿದೆ.

ಉಪ ಸಮಿತಿಗೆ ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಕುರಿತು ಇನ್ನೂ ನಿರ್ಧಾರವಾಗಿಲ್ಲ ಎಂದು ತಿಳಿದು ಬಂದಿದ್ದು, ಬಿಜೆಪಿಯ ಇಬ್ಬರು ಕಾಂಗ್ರೆಸ್‌ನ ಇಬ್ಬರು ಹಾಗೂ ಜೆಡಿಎಸ್‌ನ ಒಬ್ಬರು ಶಾಸಕರನ್ನೊಳಗೊಂಡ ಉಪ ಸಮಿತಿ ರಚಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಸಭೆಯಲ್ಲಿ ಬಿಜೆಪಿ ಸದಸ್ಯರು ಬಿಬಿಎಂಪಿಯನ್ನು ಹಲವು ವಲಯಗಳಾಗಿ ವಿಂಗಡಿಸಿ ವಲಯಗಳಿಗೆ ಹೆಚ್ಚಿನ ಅಧಿಕಾರ ನೀಡುವ ಬಗ್ಗೆ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದ್ದು, ಕಾಂಗ್ರೆಸ್‌ ಸದಸ್ಯರು ವಲಯಗಳ ರಚನೆಯ ಬದಲು ಪ್ರತ್ಯೇಕ ಪಾಲಿಕೆಗಳನ್ನೇ ಮಾಡುವುದು ಉತ್ತಮ ಎಂಬ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್‌.ಪಾಟೀಲ್‌ ಅಧ್ಯಕ್ಷತೆಯ ಸಮಿತಿಯ ವರದಿಯೂ ಪ್ರತ್ಯೇಕ ಪಾಲಿಕೆಗಳನ್ನು ಮಾಡುವ ಶಿಫಾರಸ್ಸು ಮಾಡಿತ್ತು ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದ್ದು, ಬಿ.ಎಸ್‌.ಪಾಟೀಲ್‌ ವರದಿಯನ್ನು ಸುದೀರ್ಘ‌ ಅಧ್ಯಯನ ನಡೆಸಿ, ಅದರಲ್ಲಿನ ಶಿಫಾರಸುಗಳನ್ನು ಪರಿಗಣಿಸಲು ಸಭೆಯಲ್ಲಿ ಸಹಮತ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.

ವಾರ್ಡ್‌ ಸಂಖ್ಯೆ ಹೆಚ್ಚಳ ಅನಿವಾರ್ಯ: ಬಿಬಿಎಂಪಿಯನ್ನು 225 ವಾರ್ಡ್‌ಗಳಿಗೆ ಹೆಚ್ಚಿಸುವ ಕುರಿತು ಚರ್ಚೆ ನಡೆಸಿದ್ದೇವೆ. ಕಾಲಕಾಲಕ್ಕೆ ವಾರ್ಡ್‌ಗಳ ಸಂಖ್ಯೆ ಹೆಚ್ಚಳ ಮಾಡುವುದು ಅನಿವಾರ್ಯವಾಗಲಿದೆ. ಮೊದಲು 100 ವಾರ್ಡ್‌ಗಳಿದ್ದವರು. ಹೊರ ವಲಯಗಳನ್ನು ಸೇರಿಸಿ 198 ವಾರ್ಡ್‌ಗಳಿಗೆ ಹೆಚ್ಚಿಸಲಾಗಿದೆ. ಈಗ ಜನಸಂಖ್ಯೆ ಹೆಚ್ಚಿದೆ. ಹೀಗಾಗಿ ಜನಸಂಖ್ಯೆ ಆಧಾರದಲ್ಲಿ ವಾರ್ಡ್‌ಗಳ ಸಂಖ್ಯೆ ಹೆಚ್ಚಳ ಮಾಡುವ ಬಗ್ಗೆ ಚರ್ಚೆ ಮಾಡಿದ್ದೇವೆ ಸಮಿತಿ ಅಧ್ಯಕ್ಷ ಎಸ್‌.ರಘು ಹೇಳಿದರು.

ಈ ಕಾಯ್ದೆ ರಚನೆ ಮಾಡಲು ಸುಮಾರು 90 ದಿನಗಳ ಅವಧಿ ಬೇಕಾಗುತ್ತದೆ. ನವೆಂಬರ್‌ ಅಂತ್ಯದವರೆಗೂ ನೂತನ ಕಾಯ್ದೆಯನ್ನು ಜಾರಿಗೆ ತರಲು ಪ್ರಯತ್ನ ನಡೆಸಿದ್ದೇವೆ. ಕೇವಲ ಚುನಾವಣೆ ಮುಂದೂಡಲು ಈ ಸಮಿತಿ ರಚನೆ ಮಾಡಿಲ್ಲ.

Advertisement

4 ವಲಯದಲ್ಲಿ ಹೆಚ್ಚು ವಾರ್ಡ್‌ಗಳ ರಚನೆಗೆ ಮನವಿ : ಬೆಂಗಳೂರು: ಬಿಬಿಎಂಪಿ ಕಾಯ್ದೆ ರಚನೆ ಜಂಟಿ ಸಲಹಾ ಸಮಿತಿಯಲ್ಲಿ ಬಿಬಿಎಂಪಿಗೆ ಪ್ರತ್ಯೇಕ ಕಾಯ್ದೆ ಮಾಡುವ ಸಂಬಂಧ ಸರ್ಕಾರದ ಮಟ್ಟದಲ್ಲಿ ಶುಕ್ರವಾರ ಸಭೆ ನಡೆದಿದ್ದು, ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‌ ಗಳನ್ನು 225ಕ್ಕೆ ಏರಿಕೆ ಮಾಡುವ ಸಂಬಂಧ ಚರ್ಚೆ ನಡೆದಿದೆ.  ಹೊಸದಾಗಿ ರಚನೆಗೆ ಉದ್ದೇಶಿಸಿರುವ 27 ವಾರ್ಡ್‌ಗಳನ್ನು

ಬೆಂಗಳೂರಿನ ನಾಲ್ಕು ವಲಯಗಳಿಗೆ ನೀಡಬೇಕು.

ಈ ವಲಯದಲ್ಲಿ ಹೆಚ್ಚು ವಾರ್ಡ್‌ಗಳನ್ನು ಸೃಷ್ಟಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಮಹದೇವಪುರ, ದಾಸರಹಳ್ಳಿ, ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರ ವಲಯಗಳಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದು, ಇದು ವಿಸ್ತೀರ್ಣದಿಂದಲೂ ಅಧಿಕವಾಗಿದೆ. ಇಲ್ಲಿಗೆ ಬಂದು ನೆಲೆಸುವವರೂ ಹೆಚ್ಚಿದ್ದಾರೆ. ಹೀಗಾಗಿ, ಹೆಚ್ಚು ವಾರ್ಡ್‌ಗಳು ಸೃಷ್ಟಿ ಯಾಗಬೇಕು ಎಂದು ಚರ್ಚೆ ಆಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next