Advertisement

ತಿಂಗಳೊಳಗೆ ಡ್ಯಾಂ ಕಾಮಗಾರಿ ಮುಗಿಸಿ

02:55 PM May 03, 2020 | Suhan S |

ಬೆಳಗಾವಿ: ಬೆಳಗಾವಿ ಗ್ರಾಮೀಣ ಭಾಗಕ್ಕೆ ನೀರು ಕೊಡುವ ಉದ್ದೇಶದಿಂದ ನಿರ್ಮಾಣ ಮಾಡುತ್ತಿರುವ ಕಿಣಯೇ ಡ್ಯಾಂ ಕಾಮಗಾರಿಯನ್ನು ಇನ್ನು ಒಂದು ತಿಂಗಳ ಕಾಲಮಿತಿಯೊಳಗೆ ಮುಕ್ತಾಯಗೊಳಿಸಬೇಕು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಕಿಣಯೇ ಗ್ರಾಮದ ಬಳಿ ನಿರ್ಮಾಣವಾಗುತ್ತಿರುವ ಜಲಾಶಯ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದ ಸಚಿವರು ಅಲ್ಲಿಯೇ ಪ್ರಗತಿ ಪರಿಶೀಲನಾ ಸಭೆ ನಡೆಸಿ ಬರುವ ಮಳೆಗಾಲದೊಳಗೆ ಜಲಾಶಯದ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ನೀರಾವರಿ ನಿಗಮದ ಮುಖ್ಯ ಅಭಿಯಂತರರಿಗೆ ಸೂಚಿಸಿದರು.

ಕರ್ನಾಟಕ ನೀರಾವರಿ ನಿಗಮದ ಮೂಲಕ ಈ ಜಲಾಶಯದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ, ಜಲಾಶಯದ ವ್ಯಾಪ್ತಿಯಲ್ಲಿ ಎರಡು ಕಾಲುವೆಗಳನ್ನು ನಿರ್ಮಿಸಲಾಗುತ್ತಿದ್ದು ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ನಿರ್ಮಾಣ ಮತ್ತು ಭೂಸ್ವಾದೀನಕ್ಕೆ 78 ಕೋಟಿ ರೂಪಾಯಿಗಳ ಅನುದಾನ ನೀಡಲಾಗಿದೆ ಎಂದರು.

ಕಿಣಯೇ ಡ್ಯಾಂ ವ್ಯಾಪ್ತಿಯಲ್ಲಿ 10 ಕಿ.ಮೀ ಉದ್ದದ ಎರಡು ಕಾಲುವೆ ನಿರ್ಮಿಸಲಾಗುತ್ತಿದೆ. ಬಲದಂಡೆಯ ಕಾಲುವೆ 6 ಕಿ.ಮೀ ವ್ಯಾಪ್ತಿ ಹೊಂದಿದ್ದು, ಕಿಣಯೇ, ರಣಕುಂಡೆ, ಸಂತಿಬಸ್ತವಾಡ, ವಾಘವಾಡೆ ಗ್ರಾಮಗಳ 2300  ಎಕರೆ ಭೂಮಿ ನೀರಾವರಿಗೆ ಒಳಪಡಲಿದೆ. ಎಡದಂಡೆ ಕಾಲುವೆ 4 ಕಿ.ಮೀ ವ್ಯಾಪ್ತಿ ಹೊಂದಿದ್ದು, ಕಿಣಯೇ ಮತ್ತು ಬಾದರವಾಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ 700 ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಲಿದೆ ಎಂದು ಸಚಿವರು ತಿಳಿಸಿದರು.

ಒಂದು ಕಾಲುವೆ ವಾಘವಾಡೆ ಗ್ರಾಮದ ಕೆರೆಗೆ ಮುಕ್ತಾಯವಾಗಲಿದ್ದು, ಇನ್ನೊಂದು ಕಾಲುವೆ ಬಾದರವಾಡಿ ಗ್ರಾಮದ ಕೆರೆ ಪ್ರದೇಶ ಮುಟ್ಟಲಿದೆ. ಈ ವ್ಯಾಪ್ತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ತ್ವರಿತಗತಿಯಲ್ಲಿ ನಡೆಯಬೇಕು ಎಂದು ಹೇಳಿದ ಸಚಿವರು, ಭೂ ಸ್ವಾಧೀನಕ್ಕೆ ಅನುದಾನದ ಅಡಚಣೆ ಇಲ್ಲ. ರೈತರ ಮನವಿಯಂತೆ ಅಗತ್ಯವಿರುವ ಕಡೆ ರಸ್ತೆಗಳನ್ನು ನಿರ್ಮಾಣಮಾಡಬೇಕು ಎಂದರು.

Advertisement

ಹೊಸ ಕಾಮಗಾರಿ ವರದಿಗೆ ಸೂಚನೆ: ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಪರಿಶೀಲಿಸಿದ ಸಚಿವರು ಜಿಲ್ಲೆಯಲ್ಲಿ ಹೊಸದಾಗಿ ಕೈಗೊಳ್ಳಬೇಕಿರುವ ಯೋಜನೆಗಳ ಕುರಿತು ವಿಸ್ತೃತ ಯೋಜನಾ ವರದಿ(ಡಿಪಿಆರ್‌) ಸಿದ್ಧಪಡಿಸುವಂತೆ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೋವಿಡ್‌ 19 ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಬಹುತೇಕ ಕಾಮಗಾರಿಗಳು ಸ್ಥಗಿತಗೊಂಡಿವೆ. ಕಾರಣ ಮುಂಬರುವ ದಿನಗಳಲ್ಲಿ ಇನ್ನಷ್ಟು ವೇಗದಿಂದ ಕೆಲಸ ನಿರ್ವಹಿಸುವಂತೆ ನಿರ್ದೇಶನ ನೀಡಿದರು. ಮಾಜಿ ಶಾಸಕ ಸಂಜಯ ಪಾಟೀಲ, ನೀರಾವರಿ ನಿಗಮದ ಉತ್ತರ ವಲಯದ ಮುಖ್ಯ ಎಂಜಿನಿಯರ್‌ ಅರವಿಂದ್‌ ಕಣಗಿಲ್‌ ಹಿರಿಯ ಅಧಿಕಾರಿಗಳು, ರೈತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next