Advertisement

Mangaluru: ಕಡಲತಡಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಸಕಲ ಸಿದ್ಧತೆ

03:15 AM Dec 17, 2024 | Team Udayavani |

ಮಂಗಳೂರು: ಕಡಲನಗರಿಯ ತಣ್ಣೀರು ಬಾವಿ ಕಡಲ ತೀರದಲ್ಲಿ ಜ.18 ಮತ್ತು 19 ರಂದು ಮತ್ತೆ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಸಲು ಸಿದ್ಧತೆ ಆರಂಭವಾಗಿದೆ. ಅನುದಾನ ಕೊರತೆ ಮತ್ತು ಕೋವಿಡ್‌ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಈ ಉತ್ಸವ 2023 ರಲ್ಲಿ ನಡೆದು ಜನಾಕರ್ಷಣೆ ಪಡೆದಿತ್ತು. ಈ ವರ್ಷವೂ ಆಯೋಜಿಸಲಾಗುತ್ತಿದೆ.

Advertisement

10ಕ್ಕೂ ಅಧಿಕ ದೇಶ ಭಾಗಿ ಸಾಧ್ಯತೆ
ಟೀಂ ಮಂಗಳೂರು ತಂಡದ ಸಹಭಾಗಿತ್ವದಲ್ಲಿ ಉತ್ಸವ ನಡೆಯಲಿದ್ದು,ಭಾರತ ಸೇರಿದಂತೆ ಸುಮಾರು 10ಕ್ಕೂ ಅಧಿಕ ದೇಶಗಳ ಪ್ರತಿನಿಧಿಗಳು ಉತ್ಸವದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಮಲೇಷ್ಯಾ, ಇಂಡೋನೇಶ್ಯ, ಗ್ರೀಸ್‌, ಸ್ಪೀಡನ್‌, ಉಕ್ರೇನ್‌, ಥಾಯ್ಲೆಂಡ್‌, ವಿಯೇಟ್ನಾಂ, ಇಸ್ಟೋನಿಯ, ಯು.ಕೆ. ಸೇರಿದಂತೆ ವಿವಿಧ ದೇಶಗಳ ಪ್ರತಿನಿಧಿಗಳು ಭಾಗವಹಿಸುವ ಸಾಧ್ಯತೆ ಇದೆ.

ಕಳೆದ ವರ್ಷದ ಉತ್ಸವಕ್ಕೆ 8 ದೇಶಗಳ 13 ಮಂದಿ ಪ್ರತಿನಿಧಿಗಳು ಭಾಗಿಯಾಗಿದ್ದರು. ಮಹಾರಾಷ್ಟ್ರ, ಗುಜರಾತ್‌, ತೆಲಂಗಾಣ, ಬರೋಡ, ಕೇರಳದ ಸುಮಾರು 20 ಮಂದಿ ಪ್ರತಿನಿಧಿಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ.

ಗುಜರಾತ್‌ನಿಂದ ಮಂಗಳೂರಿಗೆ ಜನವರಿಯಲ್ಲಿ ಗುಜರಾತ್‌ನಲ್ಲಿ ಸುಮಾರು 10 ದಿನಗಳ ಕಾಲ ಅಂತಾರಾಷ್ಟ್ರೀಯ ಮಟ್ಟದ ಗಾಳಿಪಟ ಉತ್ಸವ ನಡೆಯುತ್ತದೆ. ಈ ಉತ್ಸವಕ್ಕೆ ಆಗಮಿಸುವ ವಿದೇಶಿ ಪ್ರತಿನಿಧಿಗಳಲ್ಲಿ ಕೆಲವರು ಮಂಗಳೂರಿಗೂ ಆಗಮಿಸುವ ನಿರೀಕ್ಷೆ ಇದೆ.

ಸ್ಟಂಟ್‌ ಕೈಟ್‌, ರೆವಲ್ಯೂಷನ್‌ ಕೈಟ್‌ ಆಕರ್ಷಣೆ
ಒಂದು ಗಾಳಿಪಟವನ್ನು ಎರಡು ಹಗ್ಗಗಳ ಮೂಲಕ ಹಾರಿಸಿ ಜನಾಕರ್ಷಣೆ ಪಡೆದ “ಸ್ಟಂಟ್‌ ಕೈಟ್‌’ ಈ ಬಾರಿಯ ಉತ್ಸವದಲ್ಲಿ ಮತ್ತೆ ಗಮನ ಸೆಳೆಯಲಿದೆ. ಯು.ಕೆ., ಫ್ರಾನ್ಸ್‌, ಥಾಯ್ಲೆಂಡ್‌ ಮುಂತಾದೆಡೆ ಜನಪ್ರಿಯವಾಗಿರುವ ಸ್ಟಂಟ್‌ ಕೈಟ್‌ ಇಲ್ಲಿಯೂ ಪ್ರದರ್ಶಿ ಸಲು ಸಂಬಂಧಪಟ್ಟ ತಂಡಗಳ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಲಾಗುತ್ತಿದೆ. ಅದೇ ರೀತಿ, “ರೆವಲ್ಯೂಷನ್‌ ಕೈಟ್‌’ ತಂಡವನ್ನು ಕರೆಸಲೂ ಚಿಂತನೆ ನಡೆಸಲಾಗುತ್ತಿದೆ. ಇದನ್ನು ನಾಲ್ಕು ದಾರದಲ್ಲಿ ಹಾರಿಸಿ, ಕಸರತ್ತು ಮಾಡಬಹುದು ಎನ್ನುತ್ತಾರೆ ಆಯೋಜಕರು.

Advertisement

‘ಈ ಬಾರಿಯ ಉತ್ಸವವನ್ನು ಜ. 18 ಮತ್ತು 19ರಂದು ತಣ್ಣೀರುಬಾವಿ ಬೀಚ್‌ನಲ್ಲಿ ಆಯೋಜಿಸಲು ಸಿದ್ಧತೆ ನಡೆದಿದೆ. ವಿವಿಧ ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.’
– ಸರ್ವೇಶ್‌ ರಾವ್‌, ಟೀಂ ಮಂಗಳೂರು ಸ್ಥಾಪಕರು

Advertisement

Udayavani is now on Telegram. Click here to join our channel and stay updated with the latest news.

Next