Advertisement

Puttur: ಕುಂಜಾಡಿ; ಸೇತುವೆ ಕಾಮಗಾರಿ ಪುನರಾರಂಭ

01:01 PM Nov 28, 2024 | Team Udayavani |

ಪುತ್ತೂರು: ಪುತ್ತೂರು ಲೋಕೋಪಯೋಗಿ ಉಪವಿಭಾಗದ ವ್ಯಾಪ್ತಿಗೆ ಒಳಪಟ್ಟ, ಧರ್ಮಸ್ಥಳ ಕ್ಷೇತ್ರ ಸಂಪರ್ಕಿಸುವ ಸವಣೂರು-ಪೆರುವಾಜೆ-ಬೆಳ್ಳಾರೆ ರಸ್ತೆಯ ಕುಂಜಾಡಿ ಬಳಿ ಸೇತುವೆ ಕಾಮಗಾರಿಯು ಪುನಾರರಂಭಗೊಂಡಿದೆ.

Advertisement

ಕಾಮಗಾರಿ ಕುಂಟುತ್ತಾ ಸಾಗಿ ಸಂಚಾರಕ್ಕೆ ತೊಂದರೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಉದಯವಾಣಿ ಸುದಿನ ನ.11ರಂದು ‘ರಸ್ತೆ ಅಗೆದು ಹಾಕಿದವರು ನಾಪತ್ತೆ’ ಎಂಬ ಶೀರ್ಷಿಕೆಯಡಿಯಲ್ಲಿ ವರದಿ ಪ್ರಕಟಿಸಿತ್ತು. ವರದಿ ಬೆನ್ನಲ್ಲೇ ಕಾಮಗಾರಿ ಪ್ರಾರಂಭ ಗೊಂಡಿದ್ದು ಕೆಲಸ ಭರದಿಂದ ಸಾಗುತ್ತಿದೆ.

2.5 ಕೋ.ರೂ. ವೆಚ್ಚದ ಸೇತುವೆ ಹಾಗೂ ಸಂಪರ್ಕ ರಸ್ತೆ ನಿರ್ಮಾಣದ ಕಾಮಗಾರಿ ಇದಾಗಿದೆ. ಹಳೆ ಸೇತುವೆ ತೆಗೆದು ಹೊಸ ಸೇತುವೆಯ 2 ದಿಕ್ಕಿನ ಸಂಪರ್ಕ ರಸ್ತೆಯನ್ನು ಎತ್ತರಿಸಿ ಮರು ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ವರ್ಷದ ಹಿಂದೆ ಮಳೆಗಾಲದಲ್ಲಿ ಪರ್ಯಾಯ ವ್ಯವಸ್ಥೆ ಇಲ್ಲದೆ‌ ಅರ್ಧ ಕಾಮಗಾರಿ ಆಗಿದ್ದ ಹೊಸ ಸೇತುವೆ ಯಲ್ಲಿಯೇ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಎರಡೂ ದಿಕ್ಕಿನ ಸಂಪರ್ಕ ರಸ್ತೆ ಅಗೆದು ಹಾಕಿ ಜಲ್ಲಿ ತುಂಬಲಾಗಿತ್ತು. ಇದರಿಂದ ವಾಹನ ಸಂಚಾರವೇ ದುಸ್ತರ ವಾಗಿತ್ತು. ಸೇತುವೆಯ ಒಂದು ಭಾಗದಲ್ಲಿ ತಡೆಗೋಡೆ ಅಪೂರ್ಣ ಸ್ಥಿತಿಯಲ್ಲಿ ಇದ್ದು ಅಪಾಯಕ್ಕೆ ಕಾರಣವೆನಿಸಿತ್ತು. ಇದೇ ಸೇತುವೆ ಬಳಿಯಿಂದ ಕಾನಾವು, ತೋಟದಮೂಲೆ ಭಾಗಕ್ಕೆ ರಸ್ತೆಯೊಂದು ಕವಲೊಡೆದು ಸಾಗಿದ್ದು ಆ ಭಾಗದಿಂದ ಬರುವವರಿಗೂ ವಾಹನ ತಿರುಗಿಸಲು ಪರದಾಡುವ ಸ್ಥಿತಿ ಇತ್ತು.

ಕಾಮಗಾರಿ ಪ್ರಾರಂಭ
ಎರಡೂ ದಿಕ್ಕಿನ ಸಂಪರ್ಕ ರಸ್ತೆಯಲ್ಲಿನ ಜಲ್ಲಿಯನ್ನು ಸಮತ್ತಟ್ಟು ಮಾಡಲಾಗುತ್ತಿದ್ದು, ರಸ್ತೆ ವಿಸ್ತರಣೆ ಕಾಮಗಾರಿಯು ನಡೆಯುತ್ತಿದೆ. ಆಳೆತ್ತರದ ಗುಡ್ಡದ ಒಂದು ಬದಿಯಲ್ಲಿ ರಸ್ತೆ ನಿರ್ಮಾಣ ಕೆಲಸ ನಡೆಯುತ್ತಿದೆ. ತಡೆಗೋಡೆ ಅಪೂರ್ಣ ಸ್ಥಿತಿಯಲ್ಲಿದ್ದ ಸೇತುವೆಯ ಇಕ್ಕೆಲೆಗಳಲ್ಲಿ ಮಣ್ಣು ತುಂಬಿ ತಡೆಗೋಡೆಯ ಹೊಂಡ ಮುಚ್ಚಲಾಗುತ್ತಿದೆ.

ರಸ್ತೆ ಕಾಮಗಾರಿಗೆ ವೇಗ ನೀಡಿ
ಇದೇ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮುಕ್ಕೂರಿನಿಂದ ಕಾಪುಕಾಡು ತನಕ ರಸ್ತೆ ನಿರ್ಮಾಣ ಕಾಮಗಾರಿ ಅರ್ಧದಲ್ಲೇ ಇದೆ. ಕುಂಜಾಡಿ ಸೇತುವೆ ಹಾಗೂ ಮುಕ್ಕೂರು-ಕಾಪುಕಾಡು ರಸ್ತೆ ಕಾಮಗಾರಿ ಬೇರೆಬೇರೆ ಸಂಸ್ಥೆಗಳು ನಿರ್ವಹಿಸುತ್ತಿದ್ದು ಕಾಮಗಾರಿ ತತ್‌ಕ್ಷಣ ಪ್ರಾರಂಭಿಸಬೇಕಿದೆ. ಏಕೆಂದರೆ ಕನ್ನರ್ತ್‌ಮಜಲು, ಬೋಳಕುಮೇರು ಕ್ರಾಸ್‌, ಚಾಮುಂಡಿಮೂಲೆ, ಕಾಪು ಬಳಿ ಕಾಮಗಾರಿಗಾಗಿ ರಸ್ತೆ ಅಗೆದಿದ್ದು ಈ ಸ್ಥಳಗಳು ಅಪಘಾತದ ವಲಯವಾಗಿ ಬದಲಾಗುತ್ತಿದೆ.

Advertisement

ಕುಂಜಾಡಿ ಬಳಿ ಸೇತುವೆ ಕಾಮಗಾರಿ ಪ್ರಾರಂಭ ಗೊಂಡಿದೆ. ಮುಕ್ಕೂರು- ಕಾಪು ಕಾಡು ತನಕ ರಸ್ತೆ ವಿಸ್ತರಣೆ ಕಾಮ ಗಾರಿ ತತ್‌ಕ್ಷಣ ಆರಂಭಿಸಲು ಗುತ್ತಿಗೆ ಸಂಸ್ಥೆಗೆ ಸೂಚನೆ ನೀಡಲಾಗಿದೆ.
-ಲಿನ್ಸೆ ಕ್ವಾಲ್ವಿನ್‌ ಸ್ವೀಕೆರಾ,ಕಿರಿಯ ಎಂಜಿನಿಯರ್‌ಲೋಕೋಪಯೋಗಿ ಇಲಾಖೆ ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next