Advertisement

ಕುವೆಂಪು ಕನ್ನಡ ಸಂಸ್ಥೆಯ ಗತವೈಭವ ಮರಳಲಿ

07:42 PM Dec 09, 2019 | Team Udayavani |

ಮೈಸೂರು: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಬೋಧನೆ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಗುಣಮಟ್ಟ ಹೆಚ್ಚಿಸಿಕೊಂಡು ಮತ್ತೆ ಹಿಂದಿನ ವೈಭವ ಕಾಣುವಂತಾಗಬೇಕು ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್‌. ರಂಗಪ್ಪ ಸಲಹೆ ನೀಡಿದರು.

Advertisement

ಮೈಸೂರು ವಿಶ್ವವಿದ್ಯಾಲಯ ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ ಬಸವಣ್ಣನವರನ್ನು ಕುರಿತು ಆರು ಕಾದಂಬರಿಗಳ ಮೇಲೆ ರಾಜ್ಯ ಮಟ್ಟದ ವಿಚಾರ ಸಂಕಿರಣ ಮತ್ತು ಹಸ್ತಪ್ರತಿಮಾಲೆಯ ಮೂರು ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಜ್ಞರನ್ನು ನೇಮಿಸಿ: ರಾಷ್ಟ್ರಕವಿ ಕುವೆಂಪು ಸೇರಿದಂತೆ ಅನೇಕ ಪಂಡಿತರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಜೊತೆಗೆ ಮೈಸೂರು ವಿವಿಗೆ ಈ ಸಂಸ್ಥೆ ಕಳಶದಂತೆ. ಆದರೆ, ಇತ್ತೀಚೆಗೆ ಸಂಸ್ಥೆಯ ಶೈಕ್ಷಣಿಕ ಚಟುವಟಿಕೆಗಳ ಗುಣಮಟ್ಟ ಕುಸಿಯುತ್ತಿದೆ. ಸಂಶೋಧನೆಗಳು ಹೆಚ್ಚು ಹೆಚ್ಚು ನಡೆಯಬೇಕಿದೆ. ಒಂದು ವರ್ಗ, ಒಂದು ಚಿಂತನೆಗೆ ಸೀಮಿತ ಆಗಿರುವವರನ್ನು ದೂರವಿಟ್ಟು, ಆಮಿಷಕ್ಕೆ ಒಳಗಾಗದ ಸಾಹಿತಿ, ಪಂಡಿತರನ್ನು ಸಂಸ್ಥೆಗೆ ಕರೆತಂದು ಗುಣಮಟ್ಟ ಹೆಚ್ಚಿಸಿಕೊಳ್ಳಬೇಕು. ಸಂಸ್ಥೆಗೆ ಈ ಹಿಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದ್ದ ಹೆಸರು ಮತ್ತೆ ಬರುವಂತಾಗಬೇಕು. ಅದಕ್ಕೆ ಯೋಜನೆ ರೂಪಿಸಿ ಎಂದು ಸಲಹೆ ನೀಡಿದರು.

ವಚನ ಸಾಹಿತ್ಯ ಸಂಶೋಧನೆ: ನನ್ನ ಕುಲಪತಿ ಅಧಿಕಾರವಧಿಯಲ್ಲಿ ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಿ ಹಣ ಬಿಡುಗಡೆ ಮಾಡಿತು. ನಂತರ ಅದರ ಕೆಲಸ ಆರಂಭವಾಗಿದೆ. ಮುಂದೆ ಈ ಪೀಠವು ತನ್ನ ಕಾರ್ಯಚಟುವಟಿಕೆ ಆರಂಭಿಸುವ ಮೂಲಕ ವಚನ ಸಾಹಿತ್ಯದ ಬಗ್ಗೆ ಮತ್ತಷ್ಟು ಸಂಶೋಧನೆ ಕೈಗೊಳ್ಳಬೇಕು ಎಂದು ಹೇಳಿದರು.

ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಕನ್ನಡ ಭಾಷೆಗೆ ಸುದೀರ್ಘ‌ ಪರಂಪರೆ ಇದ್ದು, ಶ್ರೀಮಂತವಾಗಿದೆ. ಹಳೆಗನ್ನಡ, ನಡುಗನ್ನಡ ಹಾಗೂ ಹಸಗನ್ನಡ ಸೇರಿದಂತೆ ಎಲ್ಲಾ ಕಾಲದಲ್ಲಿಯೂ ವಿವಿಧ ಪ್ರಕಾರಗಳಲ್ಲಿ ಕೃತಿಗಳು ಹೊರಬಂದಿದೆ. ಆದರೆ ಇದರ ಜೊತೆಗೆ ಇನ್ನೂ ಪ್ರಕಟವಾಗದ ಸಾಹಿತ್ಯವೂ ಉಳಿದುಕೊಂಡಿದೆ. ಆ ಅಪ್ರಕಟಿತ ಸಾಹಿತ್ಯವನ್ನು ಪ್ರಕಟಿಸುವ ಮೂಲಕ ಶಾಶ್ವತವಾಗಿ ಉಳಿಯುವಂತೆ ಮಾಡಬೇಕಿದೆ ಎಂದರು.

Advertisement

ಸಮಾಜ ಸುಧಾರಣೆ: ಬಸವಣ್ಣನವರು ಅಧ್ಯಾತ್ಮಿಕ ಚಿಂತನೆ ಮೂಲಕ ಇಡೀ ವ್ಯವಸ್ಥೆಯಲ್ಲಿ ಬದಲಾವರಣೆ ತರಲು ಪ್ರಯತ್ನ ಮಾಡಿದರು. ವ್ಯಕ್ತಿಗತ ಸುಧಾರಣೆ ಮೂಲಕ ಸಮಾಜ ಸುಧಾರಣೆ ಸಾಧ್ಯ ಎಂದು ನಂಬಿದ್ದ ಅವರು, ವ್ಯಕ್ತಿ ಸುಧಾರಣೆಗೆ ಹೆಚ್ಚು ಒತ್ತುನೀಡಿದ್ದರು. ಬುದ್ಧನ ನಂತರ ಬಸವಣ್ಣನವರು ವೈಚಾರಿಕ ಚಿಂತನೆ ಮೂಲಕ ಸಮಸಮಾಜಕ್ಕೆ ಧ್ವನಿ ಎತ್ತಿದವರಾಗಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎನ್‌.ಎಂ. ತಳವಾರ್‌, ಬಸವೇಶ್ವರ ಸಾಮಾಜಿಕ ಪರಿಷ್ಕರಣೆ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ ಪ್ರೊ. ಚಂದ್ರಶೇಖರಯ್ಯ, ಪ್ರೊ. ನಂಜಯ್ಯ ಹೊಂಗನೂರು ಇದ್ದರು.

ಸಂಸ್ಥೆಗೆ ವಿದ್ವಾಂಸರ ನೇಮಕಾತಿಗೆ ಕ್ರಮ: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಇದ್ದ ಹಲವು ಹಿರಿಯ ವಿದ್ವಾಂಸರು ನಿವೃತ್ತಿಯಾಗಿದ್ದಾರೆ. ಈ ಸ್ಥಾನಕ್ಕೆ ಅರ್ಹ ವಿದ್ವಾಂಸರ ಮತ್ತು ಪಂಡಿತರ ಅಗತ್ಯ ಇದೆ. ಇದಕ್ಕೆ ವಿಶ್ವವಿದ್ಯಾಲಯ ಸೂಕ್ತ ಕ್ರಮವಹಿಸಲಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ ಕುಮಾರ್‌ ಭರವಸೆ ನೀಡಿದರು.

ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆರೆದುಕೊಳ್ಳಬೇಕು. ಶೇ.50ರಷ್ಟು ಸೀಟುಗಳನ್ನು ಅಂತಾರಾಜ್ಯ ವಿದ್ಯಾರ್ಥಿಗಳಿಗೆ ಮೀಸಲಿಡುವ ಮೂಲಕ ಮತ್ತಷ್ಟು ತೆರೆದುಕೊಳ್ಳಬೇಕು. ಪೀಠದಿಂದ ಸರ್ಟಿಫಿಕೇಟ್‌ ಕೋರ್ಸ್‌ ಆರಂಭಕ್ಕೆ ಸಂಬಂಧಿಸಿದಂತೆ ಶಿಕ್ಷಣ ಮಂಡಳಿ ಸಭೆಯ ಒಪ್ಪಿಗೆ ಪಡೆದು ಅನುಮತಿ ನೀಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next