Advertisement

Karnataka: ಈ ತಿಂಗಳಲ್ಲಿ ವಾಡಿಕೆಗಿಂತ ಶೇ. 66 ಹೆಚ್ಚು ಮಳೆ

11:26 PM Oct 23, 2024 | Team Udayavani |

ಬೆಂಗಳೂರು: ಕರ್ನಾಟಕದಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ವಾಡಿಕೆಗಿಂತ ಹೆಚ್ಚುವರಿಯಾಗಿ ಶೇ. 11ರಷ್ಟು ಮಳೆ ಸುರಿದಿತ್ತು. ಆದರೆ ಅಕ್ಟೋಬರ್‌ನ 23 ದಿನಗಳಲ್ಲೇ ಇದರ ಪ್ರಮಾಣ ಶೇ. 66ಕ್ಕೆ ಏರಿಕೆಯಾಗಿರುವುದು ಹುಬ್ಬೇರಿಸುವಂತೆ ಮಾಡಿದೆ.

Advertisement

ಕರ್ನಾಟಕದಲ್ಲಿ ಜೂನ್‌ 1ರಿಂದ ಸೆಪ್ಟೆಂಬರ್‌ 30ರ ವರೆಗೆ 926.8 ಮಿ.ಮೀ. ಮಳೆಯಾಗಿತ್ತು. ಈ ಅವಧಿಯಲ್ಲಿ 831.8 ಮಿ.ಮೀ. ವಾಡಿಕೆ ಮಳೆಯ ಪ್ರಮಾಣವಾಗಿದೆ. ವಾಡಿಕೆಗಿಂತ ಶೇ.11ರಷ್ಟು ಹೆಚ್ಚುವರಿ ಮಳೆಯಾಗಿತ್ತು. ಆದರೆ ಅಕ್ಟೋಬರ್‌ನಲ್ಲಿ 23 ದಿನಗಳಲ್ಲಿ ಶೇ.66ರಷ್ಟು ಮಳೆಯಾಗಿದೆ. ಅಕ್ಟೋಬರ್‌ 1ರಿಂದ 23ರ ವರೆಗೆ 175.3 ಮಿ.ಮೀ. ಮಳೆ ಸುರಿದಿದೆ. 105.3 ಮಿ.ಮೀ. ವಾಡಿಕೆ ಮಳೆಯಾಗಿದೆ ಎಂದು ಐಎಂಡಿ ತಿಳಿಸಿದೆ.

ಚಿತ್ರದುರ್ಗದಲ್ಲಿ ರಾಜ್ಯದಲ್ಲೇ ಅತ್ಯಧಿಕ 329.8 ಮಿ.ಮೀ. ಮಳೆಯಾಗಿದೆ. ವಾಡಿಕೆಯಂತೆ 88.5 ಮಿ.ಮೀ. ಮಳೆ ಸುರಿಯಬೇಕಿತ್ತು. ಇದು ಶೇ. 273ರಷ್ಟು ಪ್ರಮಾಣದ ಹೆಚ್ಚುವರಿ ಮಳೆಯಾಗಿದೆ. ಹಾವೇರಿಯಲ್ಲಿ ವಾಡಿಕೆಗಿಂತ ಶೇ.250ರಷ್ಟು ಹೆಚ್ಚುವರಿ ಮಳೆಯಾಗಿದೆ. ಇನ್ನು ಬೆಂಗಳೂರಿನಲ್ಲಿ ಶೇ.92, ದಾವಣಗೆರೆ ಶೇ.172, ವಿಜಯನಗರ ಶೇ.134, ತುಮಕೂರು ಶೇ.111, ಚಿಕ್ಕಬಳ್ಳಾಪುರ ಶೇ.103, ಶಿವಮೊಗ್ಗ ಶೇ.110, ರಾಮನಗರ ಶೇ.126, ಧಾರವಾಡ ಶೇ.123, ಉಡುಪಿ ಶೇ.55, ಉತ್ತರ ಕನ್ನಡದಲ್ಲಿ ಶೇ.75ರಷ್ಟು ಹೆಚ್ಚುವರಿ ಮಳೆಯಾಗಿದೆ.

5 ಜಿಲ್ಲೆಗಳಲ್ಲಿ ಮಳೆ ಕೊರತೆ
ಕರಾವಳಿಯ ದಕ್ಷಿಣ ಕನ್ನಡದಲ್ಲಿ ಶೇ. 16ರಷ್ಟು ಮಳೆ ಕೊರತೆಯಾಗಿದೆ. ಕಲಬುರಗಿ ಶೇ.29, ರಾಯಚೂರು ಶೇ.35, ವಿಜಯಪುರ ಶೇ.26, ಕೊಡಗಿನಲ್ಲಿ ಶೇ. 11ರಷ್ಟು ಮಳೆ ಕೊರತೆ ಎದುರಾಗಿದೆ. ಬೆಂಗಳೂರು ಹಾಗೂ ಇತರ ಜಿಲ್ಲೆಗಳಿಗಿಂತ ಈ ಭಾಗಗಳಲ್ಲಿ ಹೆಚ್ಚಿನ ಮಳೆಯಾದರೂ, ಈ ಜಿಲ್ಲೆಗಳಲ್ಲಿ ಸುರಿಯಬೇಕಿದ್ದ ವಾಡಿಕೆಯಷ್ಟು ಪ್ರಮಾಣದಲ್ಲಿ ಮಳೆ ಸುರಿದಿರಲಿಲ್ಲ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.

12 ಜಿಲ್ಲೆಗಳಲ್ಲಿ ಗುರುವಾರವೂ ಭಾರೀ ಮಳೆ
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಅ. 27ರ ವರೆಗೆ ಮಳೆಯ ಆರ್ಭಟ ಮುಂದುವರಿಯಲಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ 12 ಜಿಲ್ಲೆಗಳಿಗೆ ಗುರುವಾರವೂ ಹಳದಿ ಅಲರ್ಟ್‌ ಘೋಷಿಸಲಾಗಿದೆ. ಕನ್ಯಾಕುಮಾರಿಯಲ್ಲಿ ಸಕ್ಯುìಲೇಶನ್‌ 5.8 ಕಿ.ಮೀ ಎತ್ತರದವರೆಗೆ ಇದೆ. ಇದರ ಪ್ರಭಾವದಿಂದ ದಕ್ಷಿಣ ಒಳನಾಡಿನಲ್ಲಿ ವ್ಯಾಪಕವಾಗಿ ಮಳೆಯಾಗಲಿದೆ. ಅ. 24 ರಿಂದ ಅ. 27ರ ವರೆಗೆ ದಕ್ಷಿಣ ಒಳನಾಡಿನ ಕೆಲವು ಕಡೆ ಮಳೆಯಾಗಲಿವೆ.

Advertisement

ಉತ್ತರ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಅ. 24ರಂದು ಅಲ್ಲಲ್ಲಿ ಮಳೆಯಾಗಲಿವೆ. ಅ. 24ರಂದು ಹಗುರವಾಗಿ ಮಳೆಯಾಗುವ ಹೆಚ್ಚಿನ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ನಿರ್ದೇಶಕ ಸಿ.ಎಸ್‌. ಪಾಟೀಲ್‌ ತಿಳಿಸಿದ್ದಾರೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಗುರುವಾರವೂ ಭಾರೀ ಮಳೆಯಾಗುವ ಸಾಧ್ಯತೆಗಳಿದ್ದು, ಇದರಿಂದ ಈ ಜಿಲ್ಲೆಗಳಿಗೆ ಹಳದಿ ಅಲರ್ಟ್‌ ಘೋಷಣೆ ಮಾಡಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next