ಬೆಂಗಳೂರು: ರಾಷ್ಟ್ರೋತ್ಥಾನ ಸಾಹಿತ್ಯ ಪರಿಷತ್ತು ಈ ಬಾರಿ “ಕನ್ನಡ ಪುಸ್ತಕ ಹಬ್ಬ’ದ 4ನೇ ಆವೃತ್ತಿಯನ್ನು ಅ.26 ರಿಂದ ಡಿ.1ರವರೆಗೆ ಒಟ್ಟು 37 ದಿನಗಳ ಕಾಲ ಕೇಶವಶಿಲ್ಪ ಸಭಾಂಗಣದಲ್ಲಿ ಹಮ್ಮಿಕೊಂಡಿದೆ. ಕನ್ನಡದ ಪ್ರಮುಖ ಪ್ರಕಾಶಕರ ಪುಸ್ತಕಗಳೂ ಪ್ರದರ್ಶನಗೊಳ್ಳಲಿದ್ದು, ಶೇ.10ರಿಂದ ಶೇ. 50ರ ವರೆಗೂ ರಿಯಾಯಿತಿ ಇರಲಿದೆ ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ.ದಿನೇಶ್ ಹೆಗ್ಡೆ ತಿಳಿಸಿದ್ದಾರೆ.
ಚಾಮರಾಜಪೇಟೆಯ ರಾಷ್ಟ್ರೊàತ್ಥಾನ ಪರಿಷತ್ತಿನಲ್ಲಿ ಬುಧವಾರ ಸುದ್ದಿಗೊಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅ.26ರಂದು ಬೆಳಗ್ಗೆ 11 ಗಂಟೆಗೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ “ಪುಸ್ತಕ ಹಬ್ಬ’ವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಾಡೋಜ ಡಾ. ಚಂದ್ರಶೇಖರ ಕಂಬಾರ, ನಾಡೋಜ ಡಾ. ಮಹೇಶ್ ಜೋಶಿ ಭಾಗವಹಿಸಲಿದ್ದಾರೆ. ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕುಮಾರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ 10 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ರಾಷ್ಟ್ರೋತ್ಥಾನ ಪರಿಷತ್ತಿನ ವರೆಗೆ ತಾಯಿ ಭುವನೇಶ್ವರಿಯ ಭವ್ಯ ಶೋಭಾಯಾತ್ರೆ ನಡೆಯಲಿದೆ ಎಂದು ತಿಳಿಸಿದರು.
ಪುಸ್ತಕ ಹಬ್ಬದ ವೈಶಿಷ್ಟ್ಯಗಳು: ರಾಷ್ಟ್ರೋತ್ಥಾನ ಸಾಹಿತ್ಯದ ಸಂಪಾದಕ ವಿಶ್ವೇಶ್ವರ ಭಟ್ ಮಾತನಾಡಿ, 37 ದಿನವೂ ಪ್ರತಿದಿನ ಬೆಳಗ್ಗೆ 10 ರಿಂದ ರಾತ್ರಿ 9ರವರೆಗೆ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟ ಇರುತ್ತದೆ. ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಗೀತ, ನೃತ್ಯ, ಜಾನಪದ, ಏಕವ್ಯಕ್ತಿ ತಾಳಮದ್ದಲೆ, ಯಕ್ಷಗಾನ, ಹಾಸ್ಯ, ಮ್ಯಾಜಿಕ್, ವಿವಿಧ ವಾದ್ಯಗೋಷ್ಠಿಗಳು, ಹರಿಕಥೆ, ಗಮಕ, ಬೊಂಬೆಯಾಟ, ಅಷ್ಟಾವಧಾನ, ತಾಳವಾದ್ಯ ಕಛೇರಿ ಹೀಗೆ ನಾಡಿನ ನುರಿತ ಹೆಸರಾಂತ ಕಲಾವಿದರು ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಮತ್ತು ಚರ್ಚಾಸ್ಪರ್ಧೆ, ಶಾಲಾ ವಿದ್ಯಾರ್ಥಿಗಳಿಗಾಗಿ ಪುಸ್ತಕ ಪರಿಚಯ ಮತ್ತು ಲೇಖನ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಗಳ ಅಂತಿಮ ಹಂತ ನ.17ರಂದು ನಡೆಯಲಿದ್ದು, ಅಂದೇ ಬಹುಮಾನ ವಿತರಿಸಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿನ ಉತ್ಸಾಹಿಗಳಿಗಾಗಿ ಕನ್ನಡ ನಾಡು-ನುಡಿ-ಸಂಸ್ಕೃತಿಗೆ ಸಂಬಂಧಿಸಿದಂತೆ ವಿಡಿಯೋ ಮಾಡಿ, ಬಹುಮಾನ ಗೆಲ್ಲಿ ಎಂಬ ವಿಶಿಷ್ಟ ಸ್ಪರ್ಧೆಯನ್ನು ಈಗಾಗಲೇ ಘೋಷಿಸಲಾಗಿದೆ ಎಂದರು.
ಪರಿಸರಸ್ನೇಹಿ ಹಣತೆ ತಯಾರಿಸುವ ಕಾರ್ಯಾಗಾರ: ಈ ಬಾರಿ ಕನ್ನಡ ಪುಸ್ತಕ ಹಬ್ಬದ ದಿನಗಳಲ್ಲೇ ದೀಪಾವಳಿ ಹಬ್ಬವೂ ಬರುವುದರಿಂದ ಅ.27ರಂದು ಮಕ್ಕಳಿಗಾಗಿ ಪರಿಸರಸ್ನೇಹಿ ಹಣತೆ ತಯಾರಿಸುವ ಕಾರ್ಯಾಗಾರ ನಡೆಯಲಿದೆ. ದೀಪಾವಳಿ ಹಬ್ಬದ ದಿನಗಳಲ್ಲಿ ಮಕ್ಕಳಿಗಾಗಿ ಕೃಷ್ಣನ ಕಥೆ ಹೇಳುವ ಸ್ಪರ್ಧೆ, ಚಿತ್ರ ಬಿಡಿಸುವ ಸ್ಪರ್ಧೆ, ಮಂಕುತಿಮ್ಮನ ಕಗ್ಗ ಹೇಳುವ ಸ್ಪರ್ಧೆ ಹಾಗೂ ಆಶುಭಾಷಣ ಸ್ಪರ್ಧೆಗಳು ನಡೆಯಲಿವೆ. ಇವುಗಳಿಗೆ ಉಚಿತ ಪ್ರವೇಶ ಇರುತ್ತದೆ. ದೀಪಾವಳಿ ಹಬ್ಬದ ದಿನಗಳಲ್ಲಿ ಅ.31ರಿಂದ ನ.3ರ ವರೆಗೆ ದೇಸೀ ಗೋ ತಳಿಗಳ ದರ್ಶನಕ್ಕೆ-ಪೂಜೆಗೆ ಅವಕಾಶ ಕಲ್ಪಿಸಲಾಗಿದೆ. ಪುಸ್ತಕ ಹಬ್ಬದ 37 ದಿನಗಳೂ ಪ್ರತಿದಿನ ಸಂಜೆ 4ರಿಂದ 8 ಗಂಟೆಯವರೆಗೆ, ಉಚಿತ ಆಯುರ್ವೇದ ವೈದ್ಯಕೀಯ ಚಿಕಿತ್ಸಾಕೇಂದ್ರ ಕಾರ್ಯ ನಿರ್ವಹಿಸಲಿದೆ. ಸಾರ್ವಜನಿಕರು ಉಚಿತವಾಗಿ ವೈದ್ಯಕೀಯ ಸಲಹೆ ಪಡೆಯಬಹುದು. ಆಸಕ್ತರು ಸ್ಥಳದಲ್ಲೇ ರಕ್ತದಾನ ಮಾಡಲೂ ಅವಕಾಶ ಇರುತ್ತದೆ ಎಂದು ವಿವರಿಸಿದರು.
“ನಾಡು ನುಡಿ ಬಗ್ಗೆ ವಿಡಿಯೋ ಮಾಡಿ ಬಹುಮಾನ ಗೆಲ್ಲಿ’ ಪುಸ್ತಕ ಹಬ್ಬ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿನ ಉತ್ಸಾಹಿಗಳಿಗಾಗಿ ಕನ್ನಡ ನಾಡು-ನುಡಿ-ಸಂಸ್ಕೃತಿಗೆ ಸಂಬಂಧಿಸಿದಂತೆ ವಿಡಿಯೋ ಮಾಡಿ, ಬಹುಮಾನ ಗೆಲ್ಲಿ ಎಂಬ ವಿಶಿಷ್ಟ ಸ್ಪರ್ಧೆಯನ್ನು ನಡೆಸಲಾಗುವುದು ಎಂದು ರಾಷ್ಟ್ರೋತ್ಥಾನ ಸಾಹಿತ್ಯದ ಸಂಪಾದಕ ವಿಶ್ವೇಶ್ವರ ಭಟ್ ತಿಳಿಸಿದರು.