Advertisement

ಕೃಷಿ ಕಲಿಕೆಯಲ್ಲಿ ತೊಡಗಿಕೊಂಡ ಕಾಲೇಜು ವಿದ್ಯಾರ್ಥಿಗಳು

03:45 AM Jul 18, 2017 | |

ಉಳ್ಳಾಲ: ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕೂಲಿ ಕಾರ್ಮಿಕರಿಲ್ಲದೆ ಕೃಷಿ ಸಂಸ್ಕೃತಿ ನಾಶವಾಗುತ್ತಿದೆ. ಕೂಲಿ ಕೊಟ್ಟು ಕೃಷಿ ನಡೆಸಲು ಸಾಧ್ಯವಿಲ್ಲದೆ ಕೃಷಿ ಭೂಮಿ ಹಡಿಲು ಬೀಳುತ್ತಿದೆ. ಕೃಷಿಕ ಕುಟುಂಬಗಳ ಯುವ ಜನರು ಕೆಲಸಕ್ಕಾಗಿ ನಗರದತ್ತ ಹೊರಟಿರುವ ಸಂದರ್ಭದಲ್ಲಿ ನಗರದ ವಿದ್ಯಾರ್ಥಿಗಳು ಕೃಷಿ ಸಂಸ್ಕೃತಿ ಕಲಿಕೆಗೆ ತೊಡಗಿದ್ದಾರೆ ಮಂಗಳೂರಿನ ಸಂತ ಆ್ಯಗ್ನೆಸ್‌ ಕಾಲೇಜಿನ ಪದವಿ ವಿದ್ಯಾರ್ಥಿಗಳು.

Advertisement

ಗರಿಗರಿಯಾಗಿ ಬಣ್ಣ ಬಣ್ಣದ ಬಟ್ಟೆ ತೊಟ್ಟು ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರು ಶನಿವಾರ ಬಂತೆಂದರೆ ಒಂದು ತಂಡ ಕೈಯಲ್ಲಿ ಕತ್ತಿ, ಹಾರೆ, ಪಿಕ್ಕಾಸು ಹಿಡಿದು ಶ್ರಮದಾನ ನಡೆಸಿದರೆ, ಇನ್ನೊಂದು ತಂಡ ಹಡಿಲು ಗದ್ದೆಗಿಳಿದು ತಲೆಯಲ್ಲಿ ಮುಟ್ಟಾಳೆ ಧರಿಸಿಕೊಂಡು ಕೆಸರು ನೀರಲ್ಲಿ ನೇಜಿ ನೆಡುವ ಮೂಲಕ ರೈತರಿಗೆ ಭತ್ತದ ಕೃಷಿಯಲ್ಲಿ ನಾವೇನು ಕಮ್ಮಿಯಿಲ್ಲ ಎನ್ನುವಂತೆ ಸಾಥ್‌ ಕೊಡುತ್ತಿದ್ದಾರೆ.

ಜಿಲ್ಲಾ ಪಂಚಾಯತ್‌ ಸದಸ್ಯೆ ನೇತೃತ್ವ ಸೋಮೇಶ್ವರ ಗ್ರಾಮ ಪಂಚಾಯತ್‌ನ ಸದಸ್ಯೆ ಧನಲಕ್ಷ್ಮಿ ಗಟ್ಟಿ ಅವರ ನೇತೃತ್ವದಲ್ಲಿ ಕಾಲೇಜಿನ ಸುಮಾರು  650 ವಿದ್ಯಾರ್ಥಿನಿಯರು ಸೋಮೇಶ್ವರ ಜಿಲ್ಲಾ ಪಂಚಾಯತ್‌ನ‌ ಅಂಬ್ಲಿಮೊಗರು, ಸೋಮೇಶ್ವರ, ಮುನ್ನೂರು ಮತ್ತು ಹರೇಕಳ ಗ್ರಾಮಗಳಲ್ಲಿ ಸಮುದಾಯ ಅಭಿವೃದ್ಧಿ ಕಾರ್ಯಕ್ಕಾಗಿ ವಾರದ ಒಂದು ದಿನ ತಮ್ಮ ಶ್ರಮವನ್ನು ವ್ಯಯಿಸಲಿದ್ದಾರೆ. ಜೂನ್‌ನಿಂದ ಶ್ರಮ ವಿನಿಯೋಗ ಕಾರ್ಯ ಪ್ರಾರಂಭಗೊಂಡಿದೆ.

ಈಗಾಗಲೇ ಸೋಮೇಶ್ವರ ಗ್ರಾಮದ ಪಿಲಾರ್‌, ಅಂಬ್ಲಿಮೊಗರು ಗ್ರಾಮದ ಭಂಡಾರಬೈಲಿನಲ್ಲಿ ನೇಜಿ ನಾಟಿ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಇದರೊಂದಿಗೆ ಕುತ್ತಾರು ಬಳಿ ಇಂಗುಗುಂಡಿ ರಚನೆ, ಶ್ರಮದಾನ ಅಂಗನವಾಡಿ ಸ್ವತ್ಛತೆ, ಆಶ್ರಯ ಕಾಲನಿಗಳಲ್ಲಿ ಸ್ವತ್ಛಕಾರ್ಯಕ್ರಮ ನಡೆಸಿದ್ದು, ಪ್ರತಿ ಶನಿವಾರ ವಿದ್ಯಾರ್ಥಿಗಳು ಈ ನಾಲ್ಕು ಗ್ರಾಮಗಳ ಸಮುದಾಯ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವರು.

ಅಂಬ್ಲಿಮೊಗರು ಖಂಡಿಗದಲ್ಲಿ ಭತ್ತದ ಕೃಷಿ 
ಈ ಶನಿವಾರ ವಿದ್ಯಾರ್ಥಿನಿಯರು ಅಂಬ್ಲಿಮೊಗರು ಗ್ರಾಮದ ಖಂಡಿಗದ ರಾಜೇಶ್‌ ಆಚಾರ್ಯ  ಹಾಗೂ ಪುತ್ತುಬಾವ ಅವರ ಹಡಿಲು ಕೃಷಿ ಭೂಮಿಯನ್ನು ಆಯ್ದುಕೊಂಡು ಸುಮಾರು 40ರಷ್ಟು ವಿದ್ಯಾರ್ಥಿನಿಯರು ಭತ್ತದ ನಾಟಿ ಕಾರ್ಯ ಮಾಡಿದರು.

Advertisement

ಪ್ರತೀ ವಾರ 150 ವಿದ್ಯಾರ್ಥಿನಿಯರು 
ಕಾಲೇಜಿನ ಅಂತಿಮ ಪದವಿಯ ಸುಮಾರು 600 ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಒಟ್ಟು 16 ತಂಡವನ್ನು ರಚಿಸಲಾಗಿದೆ. 

ಪ್ರತಿ ವಾರ 150 ಮಂದಿ ಗ್ರಾಮೀಣ ಅಭಿವೃದ್ಧಿ ಕಾರ್ಯದಲ್ಲಿ ಭಾಗವಹಿಸುತ್ತಿದ್ದಾರೆ. ಈಗಾಗಲೇ ನೇಜಿ ನಾಟಿ, ಅಂಗನವಾಡಿ ಸ್ವತ್ಛ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನುತ್ತಾರೆ ಕಾರ್ಯಕ್ರಮದ ಸಂಯೋಜಕಿ ಸೀಮಾ ಕೆ. 

ಉತ್ತಮ ಅನುಭವ
ಕಾಲೇಜಿನ ಬೆಂಬಲದೊಂದಿಗೆ ಸ್ಥಳೀಯರ ಪ್ರೋತ್ಸಾಹವೂ ಇರುವುದರಿಂದ ಕೃಷಿಯಲ್ಲಿ  ತೊಡಗಿಕೊಳ್ಳಲು ಸಾಧ್ಯವಾಯಿತು. ಇಂತಹ ಪಠ್ಯೇತರ ಚಟುವಟಿಕೆಗಳಿಂದ ಶರೀರಕ್ಕೆ ವ್ಯಾಯಾಮ ಸಿಕ್ಕಂತಾಗಿದೆ. ಮುಂದೆಯೂ ಇಂತಹ ಕಾರ್ಯಗಳಿದ್ದಲ್ಲಿ ಹುರುಪಿನೊಂದಿಗೆ ಭಾಗವಹಿಸುವೆವು. ಭತ್ತ ಕೃಷಿಯಲ್ಲಿ ಭಾಗವಹಿಸುತ್ತಿದ್ದು ಉತ್ತಮ ಅನುಭವ.

– ಸ್ವಾತಿ
ಅಂತಿಮ ವರ್ಷದ ವಿದ್ಯಾರ್ಥಿನಿ

ಉತ್ತಮ ಕಾರ್ಯ 
ಸೋಮೇಶ್ವರ ಜಿಲ್ಲಾ ಪಂಚಾಯತ್‌ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಎರಡು ತಿಂಗಳಿನಿಂದ ಉತ್ತಮ ಕಾರ್ಯ ನಡೆಸುತ್ತಿದ್ದು, ವಿದ್ಯಾರ್ಥಿಗಳು ಮತ್ತು ಕಾಲೇಜಿನ ಉಪನ್ಯಾಸಕರು ಗ್ರಾಮಸ್ಥರೊಂದಿಗೆ ಸಹಕರಿಸುತ್ತಿದ್ದಾರೆ.ಸ್ವತ್ಛತೆ  ಸಹಿತ ಗ್ರಾಮದ ಸಮಸ್ಯೆ ಕುರಿತು ಅಧ್ಯಯನ ನಡೆಸಲು ಇಂತಹ ಕಾರ್ಯಕ್ರಮ ಪೂರಕ.
– ಧನಲಕ್ಷ್ಮೀ ಗಟ್ಟಿ
ಜಿಲ್ಲಾ ಪಂಚಾಯತ್‌ ಸದಸ್ಯೆ

Advertisement

Udayavani is now on Telegram. Click here to join our channel and stay updated with the latest news.

Next