Advertisement

Minister Sudhakar: ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ

12:20 AM Nov 09, 2024 | Team Udayavani |

ಬೆಂಗಳೂರು: ರಾಜ್ಯದ ವಿವಿಧ ಎಂಜಿನಿಯರಿಂಗ್‌ ಕೋರ್ಸ್‌ಗಳ “ಸೀಟ್‌ ಬ್ಲಾಕಿಂಗ್‌’ ಪ್ರಕರಣದ ಹಿಂದೆ ವ್ಯವಸ್ಥಿತ ಜಾಲ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಉನ್ನತ ಶಿಕ್ಷಣ ಇಲಾಖೆಯು, ಅದರ ಪತ್ತೆಗಾಗಿ ವಿದ್ಯಾರ್ಥಿಗಳು ಕೋರ್ಸ್‌ಗಳ ಆಯ್ಕೆ ಸಂದರ್ಭದಲ್ಲಿ ಬಳಸಿದ ಕಂಪ್ಯೂಟರ್‌ನ ಐಪಿ ವಿಳಾಸವನ್ನು ಜಾಲಾಡುತ್ತಿದೆ. ಈ ನಿಟ್ಟಿನಲ್ಲಿ ಐಪಿ ಅಡ್ರೆಸ್‌ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ನಿರ್ಧರಿಸಲಾಗಿದೆ.

Advertisement

ಕಂಪ್ಯೂಟರ್‌ ಸೈನ್ಸ್‌, ಕೃತಕ ಬುದ್ಧಿಮತ್ತೆ, ಸೈಬರ್‌ ಸೆಕ್ಯುರಿಟಿಯಂತಹ ಅತೀ ಹೆಚ್ಚು ಬೇಡಿಕೆ ಇರುವ ಎಂಜಿನಿಯರಿಂಗ್‌ ಕೋರ್ಸ್‌ಗಳು ಪ್ರತಿಷ್ಠಿತ ಕಾಲೇಜು ಗಳಲ್ಲೇ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಂಚಿಕೆಯಾಗಿವೆ. ಹೀಗೆ ಹಂಚಿಕೆಯಾದ ಸೀಟುಗಳಿಗೆ ಪ್ರವೇಶ ಕಡ್ಡಾಯ ವಾಗಿದ್ದರೂ ಆಯಾ ಕಾಲೇಜುಗಳಿಗೆ ಪ್ರವೇಶ ಪಡೆದಿಲ್ಲ.

ಒಂದೇ ಐಪಿ ವಿಳಾಸದಿಂದ ಹತ್ತಕ್ಕೂ ಹೆಚ್ಚು ಸೀಟ್‌ ಬ್ಲಾಕಿಂಗ್‌ ಪ್ರಕ್ರಿಯೆ ನಡೆದಿದೆ. ಇದೆಲ್ಲವೂ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ವ್ಯವಸ್ಥಿತ ಜಾಲ ಇದರ ಹಿಂದಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಐಪಿ ವಿಳಾಸಗಳ ವಿರುದ್ಧವೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ವು ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್‌ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

20-90 ಸೀಟ್‌ಗಳು ಬ್ಲಾಕ್‌
ವಿವಿಧ ಕಾಲೇಜುಗಳಲ್ಲಿ ಎಂಜಿನಿಯರಿಂಗ್‌ ಕೋರ್ಸ್‌ ಗಳ ಒಟ್ಟು 2,348 ಸೀಟ್‌ ಬ್ಲಾಕಿಂಗ್‌ ಮಾಡಿದ ಅನಂತರ ಹಾಗೇ ಉಳಿದಿವೆ. ಇದೆಲ್ಲವುಗಳ ವಿರುದ್ಧವೂ ಮೊಕದ್ದಮೆ ದಾಖಲಿಸುವುದಿಲ್ಲ.

ಒಂದೊಂದು ಕಾಲೇಜುಗಳಲ್ಲಿ ಕನಿಷ್ಠ 20ರಿಂದ ಗರಿಷ್ಠ 92 ಸೀಟ್‌ ಬ್ಲಾಕಿಂಗ್‌ ಮಾಡಿರುವುದರ ಪಟ್ಟಿ ತರಿಸಿಕೊಳ್ಳಲಾಗಿದೆ. ಇದಕ್ಕೊಂದು ಕಟ್‌ ಆಫ್ ಸೀಟ್‌ ಸಹಿತ ಮಾನದಂಡ ನಿಗದಿಪಡಿಸಿ, ಅಂತಹವುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

ಹೆಚ್ಚು ಬೇಡಿಕೆ ಇರುವ ಕೋರ್ಸ್‌ಗಳು ಬೆರಳೆಣಿಕೆಯಷ್ಟಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಅವುಗಳಿಗೆ ಸೀಟ್‌ ಬ್ಲಾಕ್‌ ಮಾಡಿ ಅನಂತರ ಪ್ರವೇಶ ಪಡೆದುಕೊಂಡಿಲ್ಲ. ಅವುಗಳನ್ನು ಪಟ್ಟಿ ಮಾಡಿ ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳಿಗೆ ಈಗಾಗಲೇ ಸೀಟು ಹಂಚಿಕೆಯಾಗಿದ್ದರೂ ಕಾಲೇಜುಗಳಿಗೆ ಏಕೆ ಪ್ರವೇಶ ಪಡೆದಿಲ್ಲ ಎಂದು ಕಾರಣ ಕೇಳಿ ನೋಟಿಸ್‌ ನೀಡಲಾಗಿತ್ತು. ಅದರಲ್ಲಿ ಶೇ. 50ಕ್ಕೂ ಅಧಿಕ ವಿದ್ಯಾರ್ಥಿಗಳು ತಮಗೆ ಮಾಹಿತಿ ಇರಲಿಲ್ಲ ಅಥವಾ ಆಪ್ಷನ್‌ ಎಂಟ್ರಿ ಕೊಟ್ಟಿರಲಿಲ್ಲ ಅಂತ ಸಮಜಾಯಿಷಿ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಕಾಲೇಜುಗಳ ಪಾತ್ರದ ಬಗ್ಗೆಯೂ ತನಿಖೆ
ಹೀಗೆ ಸೀಟು ಹಂಚಿಕೆಯಾದ ಅನಂತರವೂ ಪ್ರವೇಶ ಪಡೆಯದ ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದು, ಮೊದಲ ಮತ್ತು ಎರಡನೇ ಸುತ್ತಿನಲ್ಲೇ ಸೀಟು ಹಂಚಿಕೆಯಾಗುತ್ತಿತ್ತು. ಆದರೆ ಕೊನೆಯ ಹಂತದವರೆಗೆ ಕಾದು ಅಲ್ಲಿ ಸೀಟ್‌ ಬ್ಲಾಕ್‌ ಮಾಡಿದ್ದಾರೆ. ಇದು ಕೂಡ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದ ಸಚಿವರು, ಈ ಹಂತದಲ್ಲಿ ಕಾಲೇಜುಗಳ ವಿರುದ್ಧ ಕ್ರಮ ಕೈಗೊಳ್ಳುವುದು ತಪ್ಪಾಗುತ್ತದೆ. ಈ ಜಾಲದಲ್ಲಿ ಕಾಲೇಜುಗಳ ಪಾತ್ರ ಎಲ್ಲಿಯವರೆಗೆ ಇದೆ ಎಂಬುದು ನೋಡಬೇಕಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next