Advertisement

Deepavali Festival: ಅಳಿವಿನ ಕಡೆ ಸಾಗುತಿದೆ ಹಬ್ಬಗಳ ಸಂಸ್ಕೃತಿಯ ಮೆರುಗು

05:01 PM Nov 05, 2024 | Team Udayavani |

ಹಬ್ಬಗಳು ಬಂತೆಂದರೆ ಸಾಕು ಅದೇನೋ ಸಂತೋಷ – ಸಂಭ್ರಮ. ಕುಟುಂಬದ ಹಿರಿಯ- ಕಿರಿಯರೆಲ್ಲರೂ ಜತೆಗೂಡಿ ಹಬ್ಬವನ್ನು ಆಚರಿಸುವುದು ಹಿಂದಿನಿಂದ ಬಂದ ಪದ್ಧತಿ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಬ್ಬವು ಮಹತ್ವ ಪೂರ್ಣವಾದುದು, ಏಕೆಂದರೆ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬ ಹರಿದಿನಗಳು ವಿಶೇಷವಾದ ಸ್ಥಾನವನ್ನು ಪಡೆದಿದೆ.

Advertisement

ಇದು ಇತ್ತೀಚಿಗೆ ಹುಟ್ಟಿಕೊಂಡದ್ದಲ್ಲ ಹಿಂದಿನ ಪರಂಪರೆಯಿಂದ ಪ್ರಾರಂಭವಾಗಿ ಆಚರಿಸಲ್ಪಟ್ಟು ಮುಂದಿನ ಪೀಳಿಗೆಗೂ ಮುಂದುವರೆಸಿಕೊಂಡು ಹೋಗುವಂತಹದ್ದಾಗಿದೆ. ಇದು ಭಾಂದವ್ಯಗಳನ್ನು ಬೆಸೆಯುವುದು ಮಾತ್ರವಲ್ಲದೆ ಮನೆ – ಮನಗಳಲ್ಲಿ ಸಂತೋಷ ಸಂಭ್ರಮ ಬೆಳಗುವಂತಹುದು.

ಆದರೆ ಹಬ್ಬಗಳ ಆಚರಣೆ, ಸಂಸ್ಕೃತಿಗಳು ಹಿಂದಿನ ಕ್ರಮದ ಜತೆಗೆ ಸಾಗುತಿಲ್ಲ. ಕಾರಣ, ಆಧುನಿಕ ತಂತ್ರಜ್ಞಾನದಿಂದ ಬದಲಾದ ಇಂದಿನ ಸಮಾಜ. ಮೊಬೈಲ್‌ ತಂತ್ರಜ್ಞಾನಗಳು ಲಗ್ಗೆ ಇಟ್ಟಂತೆ ಹಬ್ಬದ ಸಂಭ್ರಮವನ್ನು ತನ್ನ ಗರ್ಭದೊಳಗೆ ಮರೆಮಾಚಿರುವುದು ಬೇಸರದ ಸಂಗತಿಯೂ ಹೌದು. ಆಧುನಿಕತೆಯೂ ಪ್ರತಿಯೊಂದು ವಿಚಾರಗಳನ್ನು ಸುತ್ತುವರೆಯುತ್ತ ಸಾಗಿರುವುದು ಮಾತ್ರವಲ್ಲದೆ ಮನಸ್ಥಿತಿ, ಆಸಕ್ತಿಗಳನ್ನು ಬದಲಾಯಿಸಿದೆ.

ನಮ್ಮ ಪೀಳಿಗೆಗಿಂತ ಸ್ವಲ್ಪ ಹಿಂದೆ ನೋಡುವುದಾದರೆ ಹಬ್ಬಗಳ ಆಚರಣೆ, ಸಂಸ್ಕೃತಿಗಳ ವೈಭವವೇ ಅದ್ಬುತ. ಭಕ್ತಿ ಪೂರ್ವಕ ಆಚರಣೆಯೂ ಮನ ಮುಟ್ಟುವಂತಿತ್ತು. ಸಂತಸ ಸಂಭ್ರಮಗಳು ಮನೆ ಮಾಡುತ್ತಿದ್ದವು. ಹಿರಿಯರ ಆಚರಣೆ, ನಂಬಿಕೆಗಳು ಪೀಳಿಗೆಯಿಂದ ಪೀಳಿಗೆಗೆ ಮುಂದುವರೆದು ಸಾಗುತ್ತಿತ್ತು. ಆದರೆ ಇಂದು ಅವಿಭಕ್ತ ಕುಟುಂಬಗಳ ಸಂಖ್ಯೆ ಬಹು ವಿರಳವಾಗಿ ವಿಭಕ್ತ ಕುಟುಂಬಗಳು ಹೆಚ್ಚಾಗಿ ಆಧುನಿಕ ಯುಗದ ಬ್ಯುಸಿ ಲೈಫ್ಗೆ ಮೊರೆ ಹೋದ ಕಾರಣ ದಿಂದ ಹಬ್ಬಗಳ ಮೇಲಿನ ಆಸಕ್ತಿ ಇಲ್ಲದಂತಾಗಿದೆ. ಹಿಂದೆ ಕುಟುಂಬಗಳಂತು ಹಬ್ಬ ಹರಿದಿನಗಳು ಬಂದರೆ ಸಾಕು ಅವರ ಹಬ್ಬದ ಗಡಿಬಿಡಿಯ ಕಾರ್ಯಕ್ಕೆ ಎಡೆಯಿಲ್ಲ. ಹಿರಿಯರು, ಕಿರಿಯರು ಎಲ್ಲರೂ ಕುಟುಂಬದೊಂದಿಗೆ ಒಂದಾಗಿ ಆಚರಿಸುತ್ತಿದ್ದ ಆ ದಿನಗಳು ಇಂದು ಮಾತಿಗೆ ಮಾತ್ರ ಸೀಮಿತವಾಗಿದೆ ಎಂದೆನಿಸುವುದು.

ಇತ್ತೀಚಿನ ದಿನಗಳಲ್ಲಿ ಹಬ್ಬಗಳು ಆಚರಣೆಗಿಂತ ಆಡಂಬರವನ್ನೇ ಅವಲಂಬಿಸಿದೆ. ಭಕ್ತಿಗಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ತೋರ್ಪಡಿಕೆಯ ಭಕ್ತಿಯೇ ಸಹಜವಾಗಿ ಕಾಣಬಹುದು. ಡಿಜೆ ಕುಣಿತದಿಂದ ಹಬ್ಬ ಅಸಂಸ್ಕೃತಿಯ ರೂಪ ಪಡೆಯುತ್ತಿದೆ. ಬದಲಾಗುತ್ತಿರುವ ಹಬ್ಬಗಳ ಸಂಸ್ಕೃತಿಯೂ ಹಬ್ಬಗಳ ಪರಿಕಲ್ಪನೆಯ ಚಿತ್ರಣವನ್ನೇ ಬದಲಾಯಿಸಿದೆ.ಇದೇ ರೀತಿ ಮುಂದುವರಿದರೆ ಮುಂದಿನ ಪೀಳಿಗೆಯ ಹಬ್ಬಗಳ ಆಚರಣೆ ಬರೀ ಸಾಮಾಜಿಕ ಜಾಲತಾಣಕಷ್ಟೇ ಸೀಮಿತವಾಗಬಹುದು.

Advertisement

ಇನ್ನಾದರೂ ನಮ್ಮ ಸಂಸ್ಕೃತಿಯನ್ನು ಬೆಳೆಸಲು ಎಚ್ಚೆತ್ತುಕೊಳ್ಳೋಣ. ಆಡಂಬರದ ಆಚರಣೆಗೆ ತೆರೆ ಎಳೆದು ಹಬ್ಬಗಳನ್ನು ಸಂಪ್ರದಾಯಕವಾಗಿ ಆಚರಿಸಿ ಅಳಿವಿನತ್ತ ಸಾಗುತ್ತಿರುವ ಸಂಸ್ಕೃತಿಯನ್ನು ಉಳಿಸುವುದು ನಮ್ಮ ಕರ್ತವ್ಯವು ಹೌದು. ನಮ್ಮ ಆಚಾರ – ವಿಚಾರ, ಸಂಸ್ಕಾರಗಳು ಮುಂದಿನ ಪೀಳಿಗೆಗೂ ಮಾದರಿಯಾಗಿ ಅಳಿವಿನತ್ತ ಸಾಗುತ್ತಿರುವ ಸಂಸ್ಕೃತಿಯ ಮೆರುಗನ್ನು ಎತ್ತಿ ಉಳಿಸೋಣ.

-ವಿಜಯಲಕ್ಷ್ಮೀ, ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next