Advertisement

UKTL: ಕೃಷಿ ಭೂಮಿ ಯಾವುದೇ ಕಾರಣಕ್ಕೂ ಕೊಡುವುದಿಲ್ಲ: ಯಕೆಟಿಎಲ್‌ ವಿರೋಧಿ ಹೋರಾಟ ಸಮಿತಿ

12:07 AM Oct 30, 2024 | Team Udayavani |

ಮಂಗಳೂರು: ಉಡುಪಿ – ಕಾಸರಗೋಡು 400 ಕೆವಿ ಟ್ರಾನ್ಸ್‌ಮಿಷನ್‌ ಲೈನ್‌(ಯುಕೆಟಿಎಲ್‌) ಯೋಜನೆಗಾಗಿ ಈಗ ಗುರುತಿಸಲಾದ ಪ್ರದೇಶದ ರೈತರು ಫಲವತ್ತಾದ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ನೀಡುವುದಿಲ್ಲ. ವಿದ್ಯುತ್‌ ಲೈನ್‌ ರವಾನಿಸಲು ಇತರ ಅನೇಕ ಅವಕಾಶಗಳಿದ್ದು ಅವುಗಳನ್ನು ಇಲಾಖೆ ಬಳಸಿಕೊಳ್ಳಲಿ. ಈ ಬಗ್ಗೆ ಜನ ಜಾಗೃತಿ ಮೂಡಿಸುವ ಪಾದಯಾತ್ರೆ ಸೇರಿದಂತೆ ವಿವಿಧ ಹೋರಾಟಗಳನ್ನು ಆಯೋಜಿಸಲಾಗುವುದು ಎಂದು ಯೋಜನೆ ವಿರೋಧಿ ಹೋರಾಟ ಸಮಿತಿಯ ಮುಖಂಡ ಚಂದ್ರಹಾಸ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ವಿದ್ಯುತ್‌ ಸಂಪರ್ಕ ಜಾಲಕ್ಕೆ ಯಾವುದೇ ವಿರೋಧವಿಲ್ಲ. ಆದರೆ ಈಗಾಗಲೇ ಅಭಿವೃದ್ಧಿಗೊಂಡು ಕೃಷಿ ವಲಯವಾಗಿರುವ ಪ್ರದೇಶಗಳನ್ನು ಯೋಜನೆಗೆ ಗುರುತಿಸಲಾಗಿದೆ. ಬೇರೆ ರಾಜ್ಯ, ಜಿಲ್ಲೆಗಳಿಗೆ ಮಾಡಲಾಗುತ್ತಿರುವ ಯೋಜನೆಗಾಗಿ ನಮ್ಮ ಫ‌ಲವತ್ತಾದ ಕೃಷಿಭೂಮಿಯನ್ನು ನಾಶ ಪಡಿಸುವುದನ್ನು ವಿರೋಧಿಸುತ್ತಿ ದ್ದೇವೆ. ಯೋಜನೆಯಿಂದ ಉಭಯ ಜಿಲ್ಲೆಗಳ 1,150 ಎಕರೆ ಭೂಭಾಗ ಬಲಿಯಾಗುತ್ತದೆ. ಸುಮಾರು 2,300 ಎಕರೆಯಷ್ಟು ಜಮೀನು ಉಪಯೋಗಕ್ಕೆ ಇಲ್ಲದಂತಾಗಲಿದೆ. ಇದಲ್ಲದೆ, 328 ಮನೆಗಳು, 26 ದೈವಸ್ಥಾನಗಳು, 8 ಮಸೀದಿ, 16 ದೇವಸ್ಥಾನ,14 ಶಾಲೆಗಳು, 3 ಸೆಮಿನರಿಗಳುಈ ಕಾರಿಡಾರ್‌ ಹಾದುಹೋಗುವ ಜಾಗದಲ್ಲಿ ಬರಲಿದೆ ಎಂದರು.

ಭೂಗತ ಕೇಬಲ್‌ ಅಳವಡಿಸಿ:
ಯುಕೆಟಿಎಲ್‌ ಯೋಜನೆಗಾಗಿ ಕೃಷಿ ಭೂಮಿ ನಾಶ ಮಾಡುವ ಬದಲು ಭೂಗತ ಕೇಬಲ್‌ ಅಳವಡಿಸಿ ಯೋಜನೆ ಮುಂದುವರೆಸಬಹುದು. ಸಮುದ್ರ ಮಾರ್ಗ, ರೈಲ್ವೇ ಹಳಿ, ಹೆದ್ದಾರಿ ಬದಿಯಲ್ಲಿ ರವಾನಿಸಲು ಅವಕಾಶವಿದ್ದು ಅವುಗಳನ್ನು ಬಳಸಿಕೊಳ್ಳಬಹುದು ಎಂದರು.ಪ್ರಮುಖರಾದ ರಾಜೀವ ಗೌಡ, ದಯಾನಂದ ಶೆಟ್ಟಿ, ಉದಯ ಕುಮಾರ್‌, ಅಲೊನ್ಸ್‌ ಡಿ’ಸೋಜಾ ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ
ಕಚೇರಿಗೆ ಮುತ್ತಿಗೆ
ಪ್ರಸ್ತುತ ಹೋರಾಟಕ್ಕೆ ರಾಜ್ಯದ ರೈತ ಸಂಘಟನೆಗಳು ಬೆಂಬಲಿಸಿವೆ. ಫಲವತ್ತಾದ ಭೂಮಿಯನ್ನು ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ಇದೆ. ಈ ಹಿನ್ನೆಲೆಯಲ್ಲಿ ಹೋರಾಟ ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ರೈತ ಮುಖಂಡ ಶ್ರೀಧರ ಶೆಟ್ಟಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next