ಹೊಸದಿಲ್ಲಿ : ದೇಶದಲ್ಲಿನ ಭ್ರಷ್ಟಾಚಾರವನ್ನು ಆಮೂಲಾಗ್ರವಾಗಿ ಕಿತ್ತು ಹಾಕುವ ಪ್ರಧಾನಿ ನರೇಂದ್ರ ಮೋದಿ ಅವರ ಯತ್ನಕ್ಕೆ ಭಾರೀ ದೊಡ್ಡ ಹೊಡೆತ ಎನ್ನುವ ರೀತಿಯಲ್ಲಿ ಪಂಜಾಬ್ ನ್ಯಾಶನಲ್ ಬ್ಯಾಂಕ್ (ಪಿಎನ್‌ಬಿ) ಗೆ 13,000 ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಬಿಲಿಯಾಧಿಪತಿ ವಜ್ರಾಭರಣ ಉದ್ಯಮಿ ಮೆಹುಲ್ ಚೋಕ್ಸಿ ಅವರು ತನ್ನ ಪಾಸ್ ಪೋರ್ಟನ್ನು ಆಂಟಿಗಾ ಸರಕಾರಕ್ಕೆ ಒಪ್ಪಿಸುವ ಮೂಲಕ ತನ್ನ ಭಾರತೀಯ ಪೌರತ್ವಕ್ಕೆ ತಿಲಾಂಜಲಿ ಕೊಟ್ಟಿದ್ದಾರೆ. ಆಂಟಿಗಾ ದಲ್ಲಿನ ಭಾರತೀಯ ಹೈಕಮಿಷನ್ ಗೆ ಚೋಕ್ಸಿ ಅವರು ತನ್ನ ಪಾಸ್ ಪೋರ್ಟ್ ಒಪ್ಪಿಸಿ ಅದರ ಜತೆಗೆ 177 ಅಮೆರಿಕನ್ ಡಾಲರ್ ಕೊಟ್ಟಿದ್ದಾರೆ. ಇನ್ನು ಮುಂದೆ ಚೋಕ್ಸಿ ಅವರ ಹೊಸ ವಿಳಾಸ ಜಾಲಿ ಹಾರ್ಬರ್, ಮಾರ್ಕ್ಸ್ ಆಂಟಿಗಾ ಎಂದಾಗಿರುತ್ತದೆ ಎಂದು ಮೂಲಗಳು ತಿಳಿಸಿವೆ. 59ರ ಹರೆಯದ ಚೋಕ್ಸಿ ಅವರು ಈಗೊಂದು ವರ್ಷದಿಂದ ಆಂಟಿಗಾದಲ್ಲೇ ನೆಲೆಸಿದ್ದಾರೆ. ತನ್ನ ಅನಾರೋಗ್ಯದ ಕಾರಣ ಆಂಟಿಗಾ ದಿಂದ ಭಾರತಕ್ಕೆ 41 ತಾಸುಗಳ ಸುದೀರ್ಘ ಪ್ರಯಾಣವನ್ನು ಕೈಗೊಂಡು ಭಾರತದಲ್ಲಿ ವಿಚಾರಣೆ ಎದುರಿಸಲು ಬರಲಾರೆ ಎಂದು ಚೋಕ್ಸಿ ಅವರು ಕಳೆದ ವರ್ಷ ಡಿ.25ರಂದು ಕೋರ್ಟಿಗೆ ತಿಳಿಸಿದ್ದರು. ಆದರೆ ತಾನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ತನಿಖೆಯನ್ನು ಎದುರಿಸಲು ಸಿದ್ಧನಿದ್ದೇನೆ ಎಂದಿದ್ದ ಚೋಕ್ಸಿ ಇಡಿಯ ವಿಚಾರಣ ಪ್ರಕ್ರಿಯೆಯ ದಾರಿ ತಪ್ಪಿಸಲೆಂಬಂತೆ ಜಾರಿ ನಿರ್ದೇಶನಾಲಯ ತನ್ನ ಅನಾರೋಗ್ಯದ ಮಾಹಿತಿಗಳನ್ನು ಕೋರ್ಟ್ ಜತೆಗೆ ಹಂಚಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದರು.