Advertisement

MUDA CASE: ಸಿಎಂ, ಪತ್ನಿಗೆ ಇ.ಡಿ. ನೋಟಿಸ್‌?

12:36 AM Nov 08, 2024 | Team Udayavani |

ಬೆಂಗಳೂರು: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಈಗಾಗಲೇ ಲೋಕಾಯುಕ್ತ ವಿಚಾರಣೆ ಎದುರಿಸಿದ್ದು, ಇದರ ಬೆನ್ನಲ್ಲೇ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಶೀಘ್ರದಲ್ಲೇ ಇಬ್ಬರಿಗೂ ಸಮನ್ಸ್‌ ಜಾರಿ ಮಾಡಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳು ಹೆಚ್ಚಾಗಿವೆ.

Advertisement

ಮುಡಾ ಹಗರಣದಲ್ಲಿ ಸಿಎಂ ಸುತ್ತ ಸುತ್ತಿಕೊಂಡಿರುವ ಉರುಳು ಇನ್ನಷ್ಟು ಬಿಗಿಯಾಗುವ ಲಕ್ಷಣ ಗೋಚರಿಸಿದೆ. ಮುಡಾ ಅಕ್ರಮದ ವಿವರಗಳನ್ನು ಗೌಪ್ಯವಾಗಿ ಕೆದಕುತ್ತಿರುವ ಇ.ಡಿ. ಈಗಾಗಲೇ ಮುಡಾದ ಮಾಜಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದೆ.

ಮುಡಾ ಮಾಜಿ ಆಯುಕ್ತ ದಿನೇಶ್‌ ಹಾಗೂ ಮುಡಾದಲ್ಲಿ ಹಗರಣ ಶಾಮೀಲಾಗಿರುವ ಆರೋಪ ಎದುರಿಸುತ್ತಿರುವ ಉನ್ನತ ಹುದ್ದೆಯಲ್ಲಿರುವ ಕೆಲವು ಅಧಿಕಾರಿಗಳಿಗೆ ಈಗಾಗಲೇ ಇ.ಡಿ. ಸಮನ್ಸ್‌ ತಲುಪಿದೆ. ಇವರ ವಿಚಾರಣೆ ನಡೆಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಾಕ್ಷ್ಯ ಕಲೆ ಹಾಕಿದ ಬಳಿಕ ಸಿಎಂ ಹಾಗೂ ಅವರ ಪತ್ನಿಗೆ ಸಮನ್ಸ್‌ ನೀಡುವ ಸಾಧ್ಯತೆಗಳಿವೆ. ಸಿಎಂ ಅಕ್ರಮ ಎಸಗಿರುವುದಕ್ಕೆ ಸಣ್ಣ ಸಾಕ್ಷ್ಯ ಸಿಕ್ಕಿದರೂ ಅವರ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಸಂಗ್ರಹಿಸಿ ಅಲ್ಲೇ ಪ್ರಾಥಮಿಕ ವಿಚಾ ರಣೆಗೆ ಒಳಪಡಿಸುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಇಂಚಿಂಚೂ ಕೆದಕುತ್ತಿರುವ ಇ.ಡಿ.
ಮುಡಾ ಹಗರಣದ ಇಂಚಿಂಚು ಮಾಹಿತಿಯನ್ನು ಇ.ಡಿ. ಅಧಿಕಾರಿಗಳು ಕೆದಕಲು ಆರಂಭಿಸಿದ್ದಾರೆ. ಈಗಾಗಲೇ ಮುಡಾದ ಮಾಜಿ ಅಧಿಕಾರಿಗಳನ್ನು ದಾಖಲೆ ಮುಂದಿಟ್ಟು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇವರ ಹೇಳಿಕೆ ಆಧಾರದಲ್ಲೇ ತನಿಖೆ ಮುಂದುವರಿದಿದೆ. ಆದರೆ ಸಿಎಂ ತಮ್ಮ ಪ್ರಭಾವ ಬಳಸಿ ಮುಡಾ ನಿವೇಶನ ಖರೀದಿಸಿರುವ ಆರೋಪಕ್ಕೆ ಸಂಬಂಧಿಸಿ ಇನ್ನೂ ಬಲವಾದ ಸಾಕ್ಷ್ಯಗಳು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.

ಹೀಗಾಗಿ ಮುಡಾದಲ್ಲಿ ಅಕ್ರಮ ನಡೆದಿದೆ ಎನ್ನಲಾದ ಅವಧಿಯಿಂದ ಹಲವು ವರ್ಷಗಳವರೆಗಿನ ವ್ಯವಹಾರಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಇ.ಡಿ.ಯಿಂದ ಸಮನ್ಸ್‌ ಪಡೆದಿರುವ ಪ್ರಭಾವಿಗಳು ಸದ್ಯದಲ್ಲೇ ಅಧಿಕಾರಿಗಳ ಮುಂದೆ ಹಾಜರಾಗಿ ಹೇಳಿಕೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಮುಡಾ ಪ್ರಕರಣದ ಕುರಿತು ಬುಧವಾರ ಲೋಕಾಯುಕ್ತ ತನಿಖೆಗೆ ಹಾಜರಾಗಿ ಬಂದಿದ್ದೇನೆ. ಆದರೆ ಈಗ ಇದುವರೆಗೂ ನನಗೆ ಇ.ಡಿ.ಯಿಂದ ಯಾವುದೇ ನೋಟಿಸ್‌ ಬಂದಿಲ್ಲ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next