Advertisement

ಇಂದಿನಿಂದ WHO ವಾರ್ಷಿಕ ಸಭೆ ಒತ್ತಾಯಕ್ಕೆ ಭಾರತ ಸೇರ್ಪಡೆ ; ನಿರ್ಣಯಕ್ಕೆ 62 ರಾಷ್ಟ್ರಗಳ ಸಹಿ

08:12 AM May 19, 2020 | Hari Prasad |

ಜಿನೇವಾ: ಚೀನದ ಪ್ರಯೋಗಶಾಲೆಯಿಂದಲೇ ಕೋವಿಡ್ ವೈರಸ್‌ ಉಗಮವಾಗಿದೆ ಎನ್ನುವುದು ಅಮೆರಿಕದ ಪ್ರಬಲ ವಾದ.

Advertisement

ಅದಕ್ಕೆ ಪೂರಕವಾಗಿ ಆಸ್ಟ್ರೇಲಿಯಾ ಮತ್ತು ಐರೋಪ್ಯ ರಾಷ್ಟ್ರಗಳ ಒಕ್ಕೂಟ ಸೇರಿದಂತೆ 62 ರಾಷ್ಟ್ರಗಳು ಒತ್ತಾಯಪಡಿಸಿವೆ. ಈ ರಾಷ್ಟ್ರಗಳ ಪಾಲಿಗೆ ಈಗ ಭಾರತ ಕೂಡ ಸೇರಿಕೊಂಡಿದೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವಾರ್ಷಿಕ ಸಭೆ ಸೋಮವಾರದಿಂದ ಶುರುವಾಗಲಿದೆ. ಇದೇ ಸಭೆಯಲ್ಲಿ ಡಬ್ಲ್ಯುಎಚ್‌ಒದ ಕಾರ್ಯಕಾರಿ ಸಮಿತಿಯ ಮುಖ್ಯಸ್ಥ ಸ್ಥಾನದ ಹೊಣೆ ಕೂಡ ಭಾರತಕ್ಕೇ ಸಿಕ್ಕಿದೆ. ಸಭೆಯಲ್ಲಿ ಭಾರತದ ಅಧಿಕಾರ ಗ್ರಹಣ ಸಮಾರಂಭವೂ ನಡೆಯಲಿದೆ.

ವೈರಸ್‌ ಮಾನವರಿಗೆ ಹೇಗೆ ಹರಡಿತು, ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಿಡೆಸಬೇಕು ಎನ್ನುವುದೇ ಭಾರತವೂ ಸೇರಿದಂತೆ ಎಲ್ಲ ರಾಷ್ಟ್ರಗಳ ಆಗ್ರಹವಾಗಿದೆ. ರಾಷ್ಟ್ರಗಳ ಒತ್ತಾಯದ ಬಗ್ಗೆ ಚರ್ಚೆ ನಡೆಸಲು ಈಗಾಗಲೇ ನಿರ್ಣಯವೊಂದನ್ನು ಸಿದ್ಧಪಡಿಸಲಾಗಿದೆ.

ಕೋವಿಡ್ ಹುಟ್ಟಿನ ಕುರಿತು ತನಿಖೆಗೆ ಆಗ್ರಹಿಸಿರುವ ಯುರೋಪ್‌ ರಾಷ್ಟ್ರಗಳ ಒಕ್ಕೂಟ ಮತ್ತು ಆಸ್ಟ್ರೇಲಿಯಾಗಳ ಕ್ರಮ ಬೆಂಬಲಿಸಿ, ಭಾರತ ಸಹಿ ಹಾಕಿದೆ. ಚೀನದ ವುಹಾನ್‌ ನಗರದಲ್ಲಿ ಕಳೆದ ವರ್ಷ ಕೋವಿಡ್ ಸಾಂಕ್ರಾಮಿಕ ಕಾಣಿಸಿಕೊಂಡ ಬಳಿಕ, ಇದೇ ಮೊದಲ ಬಾರಿಗೆ ಭಾರತ ಇಂತಹ ನಿರ್ಣಯವೊಂದನ್ನು ಬೆಂಬಲಿಸುತ್ತಿದೆ.

Advertisement

ವಿಶ್ವ ಆರೋಗ್ಯ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಮಂಡಿಸಲಾಗುವ ಕರಡು ನಿರ್ಣಯವನ್ನು 62 ರಾಷ್ಟ್ರಗಳು ಬೆಂಬಲಿಸಿವೆ. ಕೋವಿಡ್ ವೈರಸ್‌ ಇಡೀ ವಿಶ್ವಕ್ಕೆ ಹರಡಿದ ಬಗ್ಗೆ ಪಾರದರ್ಶಕವಾಗಿ ತನಿಖೆ ನಡೆಯಬೇಕು. ಸದಸ್ಯ ರಾಷ್ಟ್ರಗಳು ಕೋವಿಡ್ ಸೋಂಕಿನ ಬಗ್ಗೆ ಸಕಾಲಕ್ಕೆ, ಸರಿಯಾದ, ಸಮಗ್ರ ಮಾಹಿತಿಯನ್ನು ಆರೋಗ್ಯ ಸಂಸ್ಥೆಗೆ ನೀಡಬೇಕು ಎಂದು 7 ಪುಟಗಳ ಈ ಕರಡು ನಿರ್ಣಯದಲ್ಲಿ ಆಗ್ರಹಿಸಲಾಗಿದೆ. ಆದರೆ, ಇದರಲ್ಲಿ ಚೀನ ಅಥವಾ ವುಹಾನ್‌ ನಗರದ ಬಗ್ಗೆ ಯಾವುದೇ ಉಲ್ಲೇಖ ಮಾಡಲಾಗಿಲ್ಲ.

ಏಳು ಪುಟಗಳ ನಿರ್ಣಯಕ್ಕೆ ಸಹಿ ಹಾಕಿದ 62 ರಾಷ್ಟ್ರಗಳ ಪೈಕಿ ಪ್ರಮುಖವಾದವುಗಳೆಂದರೆ ಬಾಂಗ್ಲಾದೇಶ, ಕೆನಡಾ, ರಷ್ಯಾ, ಇಂಡೋನೇಶ್ಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯು.ಕೆ., ಜಪಾನ್‌ ಸೇರಿವೆ.

ಕೋವಿಡ್ ಹಿನ್ನೆಲೆಯಲ್ಲಿ ವೀಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಯಲಿದೆ. ಹೀಗಾಗಿ, ಕರಡು ನಿರ್ಣಯದ ಬಗ್ಗೆ ಯಾವ ರೀತಿ ಚರ್ಚಿಸಲಾಗುವುದು ಎಂಬುದು ತಿಳಿದು ಬಂದಿಲ್ಲ. ಆದರೆ, ಸಭೆಯಲ್ಲಿ ಸದಸ್ಯ ರಾಷ್ಟ್ರಗಳು ಈ ಕರಡು ನಿರ್ಣಯದ ಮೇಲಿನ ಚರ್ಚೆಗೆ ಆಗ್ರಹಿಸುವ ಸಾಧ್ಯತೆಯಿದ್ದು, ಚೀನವನ್ನು ಗುರಿಯಾಗಿಸುವ ಯತ್ನ ಇದಾಗಿರಲಿದೆ ಎನ್ನಲಾಗಿದೆ.

ಏಕೆಂದರೆ ಅಮೆರಿಕದ ಆಗ್ರಹಕ್ಕೆ ಮಣಿದು ಚೀನ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಇಲ್ಲ. ದೇಶದ ಹಲವು ಕ್ಷೇತ್ರಗಳಲ್ಲಿ ಚೀನದ ಕಂಪೆ‌ನಿಗಳು ವಿವಿಧ ರೀತಿಯಲ್ಲಿ ಹೂಡಿಕೆ ಮಾಡಿವೆ. ಅಮೆರಿಕ ಮತ್ತು ಭಾರತ ನಡುವೆ ಎಷ್ಟೇ ರೀತಿಯ ಗಾಢ ಬಾಂಧವ್ಯ ಇದ್ದರೂ ಚೀನ ನೆರೆಯ ರಾಷ್ಟ್ರವಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಏಶ್ಯಾದಲ್ಲಿ ಅದರ ಪ್ರಸ್ತುತತೆಯನ್ನು ಹಲವು ಕಾರಣಗಳಿಗಾಗಿ ನಿರಾಕರಿಸುವ ಸ್ಥಿತಿಯಲ್ಲಿ ಭಾರತ ಇಲ್ಲವೇ ಇಲ್ಲ.

ಮಾರ್ಚ್‌ನಲ್ಲಿ ವೀಡಿಯೋ ಕಾನ್ಫರೆನ್ಸ್‌ ಮೂಲಕ ನಡೆದಿದ್ದ ಜಿ20 ರಾಷ್ಟ್ರಗಳ ಶೃಂಗಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು, ವಿಶ್ವ ಆರೋಗ್ಯ ಸಂಸ್ಥೆಯ ಸುಧಾರಣೆಗೆ ಕರೆ ನೀಡಿದ್ದರು. ಸಂಸ್ಥೆಯ ಕಾರ್ಯ ನಿರ್ವಹಣೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಬಗ್ಗೆ ಆಗ್ರಹಿಸಿದ್ದರು. ಇದರ ಜತೆಗೆ ವಿಶ್ವ ಆರೋಗ್ಯ ಸಂಸ್ಥೆಯೇ ಸ್ವಂತ ಬಲದಿಂದ ವಿಶ್ವದಲ್ಲಿನ ಮಾರಕ ರೋಗದ ಬಗ್ಗೆ ಲಸಿಕೆ, ಔಷಧ ಕಂಡುಹಿಡಿಯುವಂತೆ ಆಗಬೇಕು ಎಂದು ಪ್ರತಿಪಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next