ಸಂತೆಮರಹಳ್ಳಿ: ಗ್ರಾಮೀಣ ವಿದ್ಯಾರ್ಥಿಗಳಿಗೆ ವಿಜ್ಞಾನ ಹಾಗೂ ಗಣಿತ ವಿಷಯಗಳು ಇನ್ನೂ ಕಬ್ಬಿಣದ ಕಡಲೆಯಾಗಿಯೇ ಇದೆ. ಈ ವಿಷಯವನ್ನು ಸುಲಭವಾಗಿ ತಿಳಿಸಿಕೊಡಲು ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಇದನ್ನು ಮಕ್ಕಳಿಗೆ ಕಲಿಸಲು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ರಂಗಸ್ವಾಮಿ ಸಲಹೆ ನೀಡಿದರು.
ಯಳಂದೂರು ತಾಲೂಕಿನ ಯರಗಂಬಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ-01 ರಲ್ಲಿ ಮಂಗಳವಾರ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಮೂಹ ಮಾಧ್ಯಮಗಳ ಭರಾಟೆಯಿಂದ ಶಿಕnಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಕ್ರಾಂತಿಕಾರಕ ಬದಲಾವಣೆಗಳಾಗಿವೆ. ಇದಕ್ಕೆ ಮುಂದುವರಿದ ತಂತ್ರಜ್ಞಾನ ಕಾರಣವಾಗಿದೆ. ತಂತ್ರಜ್ಞಾನದಲ್ಲಿ ಅವಿಷ್ಕಾರಗಳು ಅನಿವಾರ್ಯವಾಗಿದೆ. ಇದಕ್ಕೆ ಪೂರಕ ಶಿಕ್ಷಣ ನಿಡುವ ಅಗತ್ಯತೆ ಇದೆ ಎಂದರು.
ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಜ್ಞಾನ ಹಾಗೂ ಗಣಿತ ವಿಷಯಗಳ ಬಗ್ಗೆ ಸಾಕಷ್ಟು ಮಾಹಿತಿ ಲಭಿಸುತ್ತದೆ. ಆದರೆ, ಗ್ರಾಮೀಣ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಕಡಿಮೆ. ಈ ಉದ್ದೇಶದಿಂದಲೇ ಶಿಕ್ಷಣ ಇಲಾಖೆ ವತಿಯಿಂದ ವಿಜ್ಞಾನ ಪರಿಕರಗಳು, ಲ್ಯಾಬ್‌ಗಳನ್ನು ಅಭಿವೃದ್ಧಿ ಪಡಿಸಲು ಅನೇಕ ಕ್ರಮಗಳನ್ನು ವಹಿಸಲಾಗಿದೆ. ಅಲ್ಲದೇ ಶಿಕ್ಷಕರಿಗೂ ಅತ್ಯುತ್ತಮ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತದೆ.
ವಿಷಯ ಪರಿಣಿತರಾದ ಶಿಕ್ಷಕರು ಮಕ್ಕಳಲ್ಲಿ ಆಸಕ್ತಿಕರ ಪ್ರಯೋಗಗಳನ್ನು ಮಾಡಿಸಿ, ಮಾದರಿಗಳ ಮೂಲಕ ವಿಷಯ ಬೋಧಿಸಬೇಕು ಎಂದು ಮನವಿ ಮಾಡಿದರು. ವಸ್ತು ಪ್ರದರ್ಶದಲ್ಲಿ ರಸಾಯನ, ಭೌತ ಹಾಗೂ ಜೀವ ವಿಜ್ಞಾನದ ಮಾದರಿಗಳನ್ನು ಮಕ್ಕಳು ಪ್ರದರ್ಶಿಸಿದರು. ಗುಂಬಳ್ಳಿ, ಯರಗಂಬಳ್ಳಿ ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಪೋಷಕರು ವಸ್ತು ಪ್ರದರ್ಶನ ವೀಕ್ಷಿಸಿದರು.
ಗ್ರಾಪಂ ಪಿಡಿಒ ವೆಂಕಟಾಚಲಮೂರ್ತಿ, ಮುಖ್ಯಶಿಕ್ಷಕ ಎಸ್.ಸಾವುಕಯ್ಯ, ಟಿಜಿಟಿ ಶಿಕ್ಷಕ ಆರ್. ಶಿವಣ್ಣ, ಕೆ.ಮಲ್ಲಿಕಾರ್ಜುನಯ್ಯ, ಸಿ.ಜಯಪ್ರಕಾಶ್, ಎಸ್. ಶಿವಮ್ಮ, ವೈ.ಆರ್.ಗಿರೀಶ್, ಎನ್.ಶ್ರೀಕಂಠ, ಎಂ.ರಾಜಣ್ಣ, ಮಹೇಂದ್ರ ಎಸ್‌ಡಿಎಂಸಿ ಸದಸ್ಯರು ಹಾಜರಿದ್ದರು.