ಬೆಂಗಳೂರು: ಮೊದಲನೇ ವಿವಾಹ ಸಂಗತಿ ಮುಚ್ಚಿಟ್ಟು 14 ವರ್ಷದ ಅಪ್ರಾಪೆ¤ಯನ್ನು ಮದುವೆ ಮಾಡಿಕೊಂಡಿದ್ದ ಸೈಯದ್ ಮುಜಾಮಿಲ್ (24) ಎಂಬಾತನಿಗೆ 10 ವರ್ಷಗಳ ಜೈಲುಶಿಕ್ಷೆ ವಿಧಿಸಿ ನಗರದ ಪೋಕೊ ನ್ಯಾಯಾಲಯ ತೀರ್ಪು ನೀಡಿದೆ.
2014ರ ಆಗಸ್ಟ್‌ನಲ್ಲಿ ನಡೆದಿದ್ದ ವಿವಾಹ ಸಂಬಂಧ ಬಾಲ್ಯ ವಿವಾಹ ಹಾಗೂ ಅತ್ಯಾಚಾರ (ಪೋಕೊ) ಕಾಯ್ದೆಯಡಿ ಮೈಕೋಲೇಔಟ್ ಠಾಣೆ ಪೊಲೀಸರು ಆರೋಪಿ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಅದರಂತೆ ವಿಚಾರಣೆ ಪೂರ್ಣಗೊಳಿಸಿ ತೀರ್ಪು ನೀಡಿರುವ ನ್ಯಾಯಾಧೀಶರಾದ ವನಮಾಲ ಯಾದವ್, ಕೃತ್ಯ ಎಸಗಿದ ಅಪರಾಧಿ ಸೈಯದ್ ಮುಜಾಮಿಲ್‌ಗೆ 10 ವರ್ಷ ಜೈಲು ಶಿಕ್ಷೆ ಹಾಗೂ ಈ ಕೃತ್ಯಕ್ಕೆ ಸಹಕರಿಸಿದ ಆರೋಪಿ ಅಪ್ರುಶ್ ಪಾಷಾನಿಗೆ 40 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಿದ್ದಾರೆ.
14ನೇ ವರ್ಷದ ಮಗಳನ್ನು ಆಕೆಯ ತಂದೆ, ತಾಯಿ ಹಾಗೂ ಸಂಬಂಧಿಕರು ಆಟೋಚಾಲಕ ಸೈಯದ್ ಮುಜಾಮಿಲ್‌ಗೆ 2014ರ ಆಗಸ್ಟ್ 24ರಂದು ವಿವಾಹ ಮಾಡಿಕೊಟ್ಟಿದ್ದರು. ಈ ವೇಳೆ ಬಾಲಕಿಗೆ 18 ವರ್ಷ ತುಂಬಿದೆ ಎಂದು ಆಕೆಯ ಪೋಷಕರು ಮತ್ತು ಮುಜಾಮಿಲ್ ಮದುವೆ ಮಾಡಿಸುವ ಮೌಲ್ವಿಗೆ ತಿಳಿಸಿದ್ದರು. ಅಲ್ಲದೆ, ಮದುವೆಯಾದ ದಿನವೇ ಮುಜಾಮಿಲ್ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ.
ಇದಕ್ಕೆ ಮುನ್ನವೇ ಮುಜಾಮಿಲ್‌ಗೆ ಬೇರೆ ಮದುವೆಯಾಗಿದ್ದು, ಪತ್ನಿ ಆತನನ್ನು ತೊರೆದಿದ್ದಳು. ಈ ವಿಚಾರವನ್ನೂ ಆತ ಮುಚ್ಚಿಟ್ಟಿದ್ದ. ತನ್ನ ಅಪ್ರಾಪ್ತ ತಂಗಿಗೆ ಮದುವೆ ಮಾಡಿದ್ದನ್ನು ತಿಳಿದ ಆಕೆಯ ಅಣ್ಣ ತನ್ನ ಪೋಷಕರು ಮತ್ತು ಮುಜಾಮಿಲ್ ವಿರುದ್ಧ ಮೈಕೋಲೇಔಟ್ ಠಾಣೆಯಲ್ಲಿ ದೂರು ನೀಡಿದ್ದ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದರು.
ಎಲ್ಲರೂ ನಾಪತ್ತೆ: ಆದರೆ, ಮುಜಾಮಿಲ್ ಮತ್ತಿತರರ ವಿರುದ್ಧ ದೂರು ದಾಖಲಾದ ಕೆಲವೇ ದಿನಗಳಲ್ಲಿ ದೂರು ನೀಡಿದ ಬಾಲಕ, ಸಂತಸ್ತೆ ಹಾಗೂ ಪ್ರಕರಣದ ಇನ್ನಿತರೆ ಆರೋಪಿಗಳಾದ 10 ಮಂದಿ ನಾಪತ್ತೆಯಾಗಿದ್ದು, ಇದುವರೆಗೂ ಪತ್ತೆಯಾಗಿಲ್ಲ ಎಂದು ಪ್ರಾಸಿಕ್ಯೂಶನ್ ಪರ ವಾದಿಸಿದ್ದ ಸರ್ಕಾರಿ ಅಭಿಯೋಜಕ ಎಸ್.ಎನ್ ಹಿರೇಮನಿ ತಿಳಿಸಿದ್ದಾರೆ.