Advertisement

ಚಿಕ್ಕೋಡಿ ಸೌಂದರ್ಯ ಹೆಚ್ಚಿಸಿದ ಟ್ರೀ-ಪಾರ್ಕ್‌; 35 ಎಕರೆ ಪ್ರದೇಶದಲ್ಲಿ ಸೊಬಗು

06:31 PM Jul 08, 2023 | Team Udayavani |

ಚಿಕ್ಕೋಡಿ: ಕಾಂಕ್ರೀಟ್‌ ನಗರದ ಮಧ್ಯದಲ್ಲಿ ತಲೆ ಎತ್ತಿನಿಂತ ಹಸಿರು ಬನ.. ಟ್ರಾಫಿಕ್‌ ಕಿರಿಕಿರಿ ನಡುವೆಯೂ ವೈವಿಧ್ಯಮಯ ಮರ ಗಿಡಗಳ ಚೆಲುವು.. ಪ್ರಶಾಂತ ವಾತಾವರಣ. ಪುಟ್ಟ ಹಕ್ಕಿಗಳ ಚಿಂವ್‌.. ಚಿಂವ್‌..ನಾದದೊಂದಿಗೆ ಹಸಿರಿನ ರಸದೌತಣ. ಬೇಸತ್ತಮನಗಳಿಗೆ ನೆಮ್ಮದಿ ನಿಲ್ದಾಣ. ಇಂತಹ ಅಚ್ಚರಿ ಉದ್ಯಾನವನ ಇರುವುದು ಚಿಕ್ಕೋಡಿ ನಗರದಲ್ಲಿ.

Advertisement

ಚಿಕ್ಕೋಡಿ ಅರಣ್ಯ ಇಲಾಖೆ ಮತ್ತು ಶಾಸಕ ಗಣೇಶ ಹುಕ್ಕೇರಿ ಹಾಗೂ ವಿಧಾನ ಪರಿಷತ್‌ ಸದಸ್ಯ ಪ್ರಕಾಶ ಹುಕ್ಕೇರಿ ಮೇಲುಸ್ತುವಾರಿಯಲ್ಲಿ ರೂಪುಗೊಂಡ ಹೈಟೆಕ್‌ ಉದ್ಯಾನವನ ಚಿಕ್ಕೋಡಿ ನಗರದ ಜನರಿಗೆ ಅಚ್ಚುಮೆಚ್ಚಿನ ತಾಣವಾಗಿದೆ.
ಚಿಕ್ಕೋಡಿ-ನಿಪ್ಪಾಣಿ ರಸ್ತೆ ಬದಿಗೆ ಹೊಂದಿಕೊಂಡಿರುವ ಸುಮಾರು 35 ಎಕರೆ ಪ್ರದೇಶದ ಹೈಟೆಕ್‌ ಟ್ರೀ ಪಾರ್ಕ್‌ನ್ನು ಇಳಿಜಾರು ರೂಪದಲ್ಲಿ ಹಂತ ಹಂತವಾಗಿ ನಿರ್ಮಿಸಲಾಗಿದೆ. ಸುತ್ತಲು ಬೆಂಚ್‌ಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರು ಆರಾಮಾಗಿ ಕುಳಿತು ವಿಶ್ರಾಂತಿ ಪಡೆಯಬಹುದು. ಪಾರ್ಕ್‌ ಹೊರ ಮತ್ತು ಒಳಭಾಗದಲ್ಲಿಯೂ ಕಲ್ಲು ಬೆಂಚ್‌ಗಳನ್ನು ಹೊಂದಿಸಲಾಗಿದೆ.

ಮಕ್ಕಳಿಗಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿದ್ದು ಆಟಕ್ಕೆ ಬೇಕಾದ ಜಾರುಬಂಡಿ, ಜೋಕಾಲಿ ಸೇರಿ ಸಕಲ ಸೌಲಭ್ಯ ಅಳವಡಿಸಲಾಗಿದೆ. ಇದರೊಂದಿಗೆ ಅಗತ್ಯ ಮೂಲಭೂತ ಸೌಕರ್ಯಗಳೆಲ್ಲವನ್ನೂ ಕಲ್ಪಿಸಲಾಗಿದ್ದು, ಯುವಕರು, ಮಹಿಳೆಯರು ಹಾಗೂ ಹಿರಿಯರಿಗೆ ನೆಮ್ಮದಿ ತಾಣವನ್ನಾಗಿ ರೂಪಿಸಲು ಅವಶ್ಯಕ ಸೌಲಭ್ಯ ನೀಡಿ, ಆಕರ್ಷಣೀಯ ಉದ್ಯಾನವನವಾಗಿ ಅಭಿವೃದ್ಧಿ ಪಡಿಸಲಾಗಿದೆ.

ಒಮ್ಮೆ ಈ ಉದ್ಯಾನವನದ ಒಳಹೊಕ್ಕು ಹೊರ ಬಂದರೆ ಮನಸ್ಸು ಹಗುರವಾಗುತ್ತದೆ ಎಂದು ಸಾರ್ವಜನಿಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲಾ ಸ್ಥಾನಮಾನ ಹೊಂದಿರುವ ಚಿಕ್ಕೋಡಿ ನಗರದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ
ಟ್ರೀ-ಪಾರ್ಕ್‌ ಅಭಿವೃದ್ಧಿಗೆ ಹೆಚ್ಚುವರಿಯಾಗಿ 50 ಲಕ್ಷ ರೂ. ಅನುದಾನ ತಂದು ಅಗತ್ಯ ಮೂಲಭೂತ ಸೌಕರ್ಯಗಳೆಲ್ಲವನ್ನೂ ಅಳವಡಿಸಿ ಮಕ್ಕಳು, ಯುವ ಕರು, ಮಹಿಳೆಯರು ಹಾಗೂ ಹಿರಿಯರಿಗೆ ನೆಮ್ಮದಿ ತಾಣವನ್ನಾಗಿ ರೂಪಿಸಲಾಗಿದ್ದು, ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಿದೆ ಎನ್ನುತ್ತಾರೆ ವಿಧಾನ ಪರಿಷತ್‌ ಸದಸ್ಯ ಪ್ರಕಾಶ ಹುಕ್ಕೇರಿ.

ಮಾರುದ್ದ ಬೆಳೆದ ವಿವಿಧ ಜಾತಿಯ ಮರಗಳು:
ಕಳೆದ ನಾಲ್ಕೈದು ವರ್ಷಗಳ ಹಿಂದೆ ಅರಣ್ಯ ಇಲಾಖೆ ವಿವಿಧ ಜಾತಿಯ ಸಾವಿರಾರು ಸಸಿ ನೆಟ್ಟಿದ್ದು, ಅವುಗಳು ಇಂದು ಮಾರುದ್ದ ಬೆಳೆದು ನಿಂತಿವೆ. ನಗರದ ಜನರಿಗೆ ಬೆಳಗಿನ ಜಾವ ಮತ್ತು ಸಂಜೆ ಹೊತ್ತಿನಲ್ಲಿ ವಿಹಾರಕ್ಕೆ ಹೋಗಲು ಉತ್ತಮ ಪರಿಸರ ಒದಗಿಸುತ್ತಿವೆ.

Advertisement

ಪರಿಸರ ಸಮತೋಲನ, ಜನರ ಆರೋಗ್ಯ ಸಂರಕ್ಷಣೆ ಹಾಗೂ ಮುಂದಿನ ಪೀಳಿಗೆಗೆ ಹಸಿರು ಪರಿಸರದ ಮಹತ್ವ ಸಾರುವ ನಿಟ್ಟಿನಲ್ಲಿ ನವ ಉದ್ಯಾನ ನಿರ್ಮಿಸಲಾಗಿದೆ. ಇದನ್ನು ಸರಿಯಾಗಿ ಉಳಿಸಿಕೊಂಡು ಹೋಗುವ ಜವಾಬ್ದಾರಿ ಜನರ ಮೇಲಿದೆ. ಸಾರ್ವಜನಿಕರು ಇದನ್ನು ಸ್ವಂತ ಕೈತೋಟದಂತೆ ಕಾಳಜಿಯಿಂದ ಕಾಪಾಡಿಕೊಂಡು, ವ್ಯವಸ್ಥೆಯ ದುರುಪಯೋಗವಾಗದಂತೆ ಎಚ್ಚರಿಕೆ
ವಹಿಸಿದರೆ ಈ ನವ ಉದ್ಯಾನವನ ನಗರಕ್ಕೆ ಮುಕುಟಪ್ರಾಯವಾಗುವುದರಲ್ಲಿ ಸಂಶಯವಿಲ್ಲ.
ಗಣೇಶ ಹುಕ್ಕೇರಿ, ಶಾಸಕರು, ಚಿಕ್ಕೋಡಿ ಸದಲಗಾ

ಕಡಿಮೆ ಅವಧಿಯಲ್ಲಿ ಟ್ರೀ ಪಾರ್ಕ್‌ ಉತ್ತಮ ಬೆಳವಣಿಗೆ ಕಂಡಿದೆ. ಪ್ರಸಕ್ತ ವರ್ಷದಲ್ಲಿ ಪಾರ್ಕ್‌ದಲ್ಲಿ ಕೆನೋಪಿ ವಾಕ್‌, ಹ್ಯಾಂಗಿಂಗ್‌
ಬ್ರಿಡ್ಜ್, ಮಕ್ಕಳ ಆಟವಾಡುವ ಸಾಮಗ್ರಿ, ಬಾವಿ, ಧ್ಯಾನ ಕಟ್ಟೆ, ಗುರುಕುಲ ವನ ನಿರ್ಮಾಣ ಮಾಡುವ ಗುರಿ ಇದೆ. ಇಡೀ ಜಿಲ್ಲೆಯಲ್ಲಿ ಚಿಕ್ಕೋಡಿ ಟ್ರೀ-ಪಾರ್ಕ್‌ ಮಾದರಿಯಾಗಲಿದೆ.
ಪ್ರಶಾಂತ ಗೌರಾಣಿ,
ವಲಯ ಅರಣ್ಯಾಧಿಕಾರಿ, ಚಿಕ್ಕೋಡಿ

Advertisement

Udayavani is now on Telegram. Click here to join our channel and stay updated with the latest news.

Next