Advertisement

Udupi: ನಿರ್ವಹಣೆಯಿಲ್ಲದೆ ಸೊರಗಿದ ಮಹಿಷಮರ್ದಿನಿ ಪಾರ್ಕ್‌

06:20 PM Nov 11, 2024 | Team Udayavani |

ಉಡುಪಿ: ಬೈಲೂರು ವಾರ್ಡ್‌ ನಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸಲ್ಪಟ್ಟ ಮಹಿಷಮರ್ದಿನಿ ಉದ್ಯಾನವನ ಸೂಕ್ತ ನಿರ್ವಹಣೆ ಇಲ್ಲದೆ ಪಾಳುಬಿದ್ದಿದೆ. ಒಂದೂವರೆ ವರ್ಷಗಳ ಹಿಂದೆ ಪ್ರಾಧಿಕಾರವು ಸುಮಾರು 10 ಸೆಂಟ್ಸ್‌ ಸ್ಥಳದಲ್ಲಿ 25 ಲ.ರೂ. ವೆಚ್ಚದಲ್ಲಿ ನಿರ್ಮಿಸಿತ್ತು. ಆರಂಭದಲ್ಲಿ ಮಕ್ಕಳು ಸಹಿತ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಿ ಕಾಲ ಕಳೆಯುತ್ತಿದ್ದರು. ಆದರೆ ಇಲ್ಲಿನ ನಿರ್ವಹಣೆ ಸಮಸ್ಯೆಯಿಂದ ಜನರು ಅತ್ತ ಹೋಗಲೂ ಹಿಂಜರಿಯುವಂತಹ ಪರಿಸ್ಥಿತಿ ಎದುರಾಗಿದೆ.

Advertisement

ಪಾರ್ಕ್‌ನಲ್ಲಿ ಏನೇನಿದೆ?
ಮಕ್ಕಳ ಆಟಕ್ಕೆ ಬೇಕಿರುವ ಬಹುತೇಕ ಎಲ್ಲ ಆಟದ ವಸ್ತುಗಳೂ ಈ ಪಾರ್ಕ್‌ನಲ್ಲಿವೆ. ಮುಖ್ಯವಾಗಿ ಎರಡು ತೊಟ್ಟಿಲು, ವ್ಯಾಯಾಮ ಮಾಡುವ ಯಂತ್ರ, ಜಾರುಬಂಡಿ, ಸಿಮೆಂಟ್‌ನ ಕುರ್ಚಿ, ಬೆಂಚ್‌ಗಳು ಹಾಗೂ ವಾಕಿಂಗ್‌ ಮಾಡಲು ಸ್ಥಳಾವಕಾಶವೂ ಇಲ್ಲಿದೆ. ಪೋಷಕರು ಮಕ್ಕಳನ್ನು ಪಾರ್ಕ್‌ ನಲ್ಲಿ ಬಿಟ್ಟು ಕುಳಿತುಕೊಳ್ಳಲೂ ಬಹುದು ಅಥವಾ ವಾಕಿಂಗ್‌ ಕೂಡ ಮಾಡಬಹುದಾದ ಅವಕಾಶ ಇಲ್ಲಿ ಕಲ್ಪಿಸಲಾಗಿತ್ತು.

ಪ್ರಸ್ತುತ ಸ್ಥಿತಿ ಅಯೋಮಯ
ಪ್ರಸ್ತುತ ಪಾರ್ಕ್‌ ಒಳಗೆ ಪ್ರವೇಶಿಸುವುದಕ್ಕೇ ಇಲ್ಲಿ ಇರಿಸು ಮುರಿಸು ಉಂಟಾಗುತ್ತಿದೆ. ಎಲ್ಲೆಂದರಲ್ಲಿ ಕಸಕಡ್ಡಿಗಳು ತುಂಬಿಕೊಂಡು ಕಸದ ಕೊಂಪೆಯಂತಾಗಿದೆ. ಮಳೆಗಾಲದ ಸಂದರ್ಭದಲ್ಲಿ ಕೆಳಗೆ ಬಿದ್ದಿದ್ದ ಗೆಲ್ಲುಗಳು ಇನ್ನು ಕೂಡ ಅಲ್ಲಿಯೇ ಅಂಗಾತ ಮಲಗಿದ ಸ್ಥಿತಿಯಲ್ಲಿವೆ. ಸಣ್ಣಪುಟ್ಟ ಗಿಡಗಳು ಬೆಳೆದು ನಿಂತು ಪೊದೆಗಳಾಗಿವೆ. ತುಕ್ಕು ಹಿಡಿದ ಕಬ್ಬಿಣದ ಸರಳುಗಳು ಮಕ್ಕಳಿಗೆ ಅಪಾಯಕಾರಿಯಾಗುವಂತಿದೆ. ಕಸ, ಪ್ಲಾಸ್ಟಿಕ್‌ ತ್ಯಾಜ್ಯಗಳು ಎಲ್ಲೆಂದರಲ್ಲಿ ತುಂಬಿಕೊಂಡಿದ್ದು, ಇಲ್ಲಿ ಕಾಲು ಹಾಕಲೂ ಹಿಂದೆ ಮುಂದೆ ನೋಡಬೇಕಾದಂತಹ ಸ್ಥಿತಿಯಿದೆ. ಪ್ಲಾಸ್ಟಿಕ್‌, ಗಾಜಿನ ಬಾಟಲಿಗಳು, ಪೇಪರ್‌ಗಳು ಎಲ್ಲೆಂದರಲ್ಲಿ ಬಿದ್ದುಕೊಂಡಿವೆ.

ಬೇಕಿದೆ ಸೂಕ್ತ ನಿರ್ವಹಣೆ
ಉದ್ಯಾನವನ ನಿರ್ಮಾಣದ ಆರಂಭದಲ್ಲಿ ಸ್ಥಳೀಯರೇ ಇದರ ನಿರ್ವಹಣೆ ನೋಡಿ ಕೊಳ್ಳುವುದಾಗಿ ತಿಳಿಸಿದ್ದರು. ಆದರೆ ಅನಂತರ ನಗರಸಭೆಗೆ ಇದರ ನಿರ್ವಹಣೆ ನೋಡಿಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ಪ್ರಸ್ತುತ ನಿರ್ವಹಣೆ ಇಲ್ಲದಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಈ ಬಗ್ಗೆ ಶಾಸಕರ ಗಮನಕ್ಕೆ ತರಲಾಗುವುದು ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.

Advertisement

ಮಕ್ಕಳನ್ನು ಕಳುಹಿಸಲು ಹಿಂದೇಟು
ಪಾರ್ಕ್‌ ಉದ್ಘಾಟನೆಯ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸೇರಿದ್ದರು. ಆದರೆ ಈಗ ಮಕ್ಕಳೇ ಆ ಪಾರ್ಕ್‌ಗೆ ಹೋಗುವುದು ಬೇಡ ಅನ್ನುತ್ತಿದ್ದಾರೆ. ಕಾರಣ ಎಲ್ಲೆಂದರಲ್ಲಿ ಕಸ ತುಂಬಿರುವುದು ಹಾಗೂ ಗಾಜಿನ ಚೂರುಗಳು ವಿವಿಧೆಡೆ ಕಂಡುಬರುತ್ತಿವೆ. ಮಕ್ಕಳು ಬಿದ್ದರೆ ಅಥವಾ ಬರಿಕಾಲಿನಲ್ಲಿ ಓಡಾಟ ಮಾಡಿದರೆ ಗಾಜು ಕಾಲಿನ ತಾಗುವ ಸಾಧ್ಯತೆಗಳಿವೆ. ಈ ಕಾರಣಕ್ಕೆ ಮಕ್ಕಳನ್ನು ಅತ್ತ ಕರೆದುಕೊಂಡು ಹೋಗುವುದನ್ನೇ ಬಿಟ್ಟಿದ್ದೇವೆ ಎನ್ನುತ್ತಾರೆ ಪೋಷಕರೊಬ್ಬರು.

ಪರಿಶೀಲಿಸಿ ಸೂಕ್ತ ಕ್ರಮ
ಬೈಲೂರು ವಾರ್ಡ್‌ನಲ್ಲಿರುವ ಉದ್ಯಾನವನವು ನಗರಸಭೆಗೆ ಹಸ್ತಾಂತರವಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಇಲ್ಲಿನ ಸ್ಥಿತಿಗತಿಗಳನ್ನು ಗಮನಿಸಿಕೊಂಡು ನಗರಸಭೆಯ ಮೂಲಕ ಸ್ವತ್ಛಗೊಳಿಸಲು ಆದ್ಯತೆ ನೀಡಲಾಗುವುದು.
-ಡಾ| ಉದಯ ಶೆಟ್ಟಿ, ಪೌರಾಯುಕ್ತರು (ಪ್ರಭಾರ) ನಗರಸಭೆ

-ಪುನೀತ್‌ ಸಾಲ್ಯಾನ್

Advertisement

Udayavani is now on Telegram. Click here to join our channel and stay updated with the latest news.

Next