Advertisement

Hunsur: ಹಾಡಹಗಲೇ ಹಸುವಿನ ಮೇಲೆ ದಾಳಿ ಮಾಡಿದ ಹುಲಿ; ಭಯಭೀತರಾದ ಕೃಷಿಕರು

07:37 PM Nov 12, 2024 | Team Udayavani |

ಹುಣಸೂರು: ನಾಗರಹೊಳೆ ಉದ್ಯಾನದಂಚಿನ ಗ್ರಾಮಗಳಲ್ಲಿ ಹುಲಿ ಉಪಟಳ ಮುಂದುವರಿದಿದ್ದು, ನ.12ರ ಮಂಗಳವಾರ ಹಾಡಹಗಲೇ ವೀರನಹೊಸಹಳ್ಳಿಯ ತೋಟದಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿರುವ ಘಟನೆ  ನಡೆದಿದೆ.

Advertisement

ತಾಲೂಕಿನ ವೀರನಹೊಸಹಳ್ಳಿ ಗ್ರಾಮದ ವೆಂಕಟೇಶ್ ಶೆಟ್ಟಿ ಎಂಬವರ ಹಸು ಹುಲಿ ದಾಳಿಗೆ ತುತ್ತಾಗಿದ್ದು, ಹಸು ಸಾವು ಬದುಕಿನೊಂದಿಗೆ ಹೋರಾಟ ನಡೆಸುತ್ತಿದೆ.

ನ.12ರ ಮಂಗಳವಾರ ವೆಂಕಟೇಶ್‌, ಎಂದಿನಂತೆ ತಮ್ಮ ತೋಟದಲ್ಲಿ ಹಸುವನ್ನು ಮೇವು ಮೇಯಲು ಕಟ್ಟಿ ಹಾಕಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನದ ವೇಳೆಗೆ ಹುಲಿಯೊಂದು ತೋಟಕ್ಕೆ ನುಗ್ಗಿ ಹಸುವಿನ ಮೇಲೆ ದಾಳಿ ನಡೆಸಿ ಬೆನ್ನು ಹಾಗೂ ಕುತ್ತಿಗೆ ಭಾಗಕ್ಕೆ ತೀವ್ರವಾಗಿ ಗಾಯಗೊಳಿಸಿದೆ.

ಹುಲಿ ದಾಳಿಯಿಂದ ಹಸು ಬೆದರಿ ಚೀರಾಡುತ್ತಿದ್ದಾಗ ವೆಂಕಟೇಶ್ ಹಾಗೂ ತೋಟದಲ್ಲಿದ್ದ ಇತರ ಕಾರ್ಮಿಕರು ಕೂಗಾಟ ನಡೆಸಿ, ಹುಲಿಯತ್ತ ಕಲ್ಲು, ದೊಣ್ಣೆ ಬೀಸಿದ ಪರಿಣಾಮ ಹುಲಿ ಕಾಡಿನತ್ತ ಓಡಿ ಹೋಗಿದೆ.

ವೀರನಹೊಸಹಳ್ಳಿ ಅರಣ್ಯ ಪ್ರದೇಶದಲ್ಲಿ ಹುಲಿಯೊಂದು ಬೀಡು ಬಿಟ್ಟಿದ್ದು, ಕಾಡಂಚಿನ ಗ್ರಾಮಗಳಲ್ಲಿ ಹುಲಿ ಕಾಣಿಸಿಕೊಳ್ಳುತ್ತಿದೆ. ಅಲ್ಲದೆ ಅಕ್ಕ-ಪಕ್ಕದ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿಯಿಟ್ಟು ಕೊಂದು ಹಾಕುತ್ತಿದ್ದು, ದೂರಿತ್ತರೂ ಪ್ರಯೋಜನವಿಲ್ಲದಂತಾಗಿದೆ. ಹುಲಿ ದಾಳಿಯಿಂದಾಗಿ ಈ ಭಾಗದ ಗ್ರಾಮಸ್ಥರು ಭಯ ಭೀತರಾಗಿದ್ದಾರೆ.

Advertisement

ನ.11ರ ಸೋಮವಾರ ವೀರನಹೊಸಹಳ್ಳಿಗೆ ಸಮೀಪದ ಅಬ್ಬೂರಿನಲ್ಲಿ ಹುಲಿ ದಾಳಿಗೆ ಸಿಲುಕಿ ಹಸು ಸಾವನ್ನಪ್ಪಿತ್ತು.

ಕೂಡಲೇ ಅರಣ್ಯ ಇಲಾಖೆಯವರು ಬೋನಿಟ್ಟು ಹುಲಿಯನ್ನು ಸೆರೆ ಹಿಡಿಯಬೇಕೆಂದು ದೊಡ್ಡಹೆಜ್ಜೂರು ಗ್ರಾ.ಪಂ.ಉಪಾಧ್ಯಕ್ಷ ವೆಂಕಟೇಶ್ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next