Advertisement

ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ

05:37 PM Nov 18, 2024 | Team Udayavani |

ಉದಯವಾಣಿ ಸಮಾಚಾರ
ಗಜೇಂದ್ರಗಡ: ನಾಡಿನ ಪ್ರವಾಸಿ ತಾಣಗಳಲ್ಲೊಂದಾದ ಕಲ್ಯಾಣ ಚಾಲುಕ್ಯರ ಕಾಲದ ಅಕ್ಕಾದೇವಿ ಆಡಳಿತದಲ್ಲಿ
ವಿದ್ಯಾ ಕೇಂದ್ರವಾಗಿದ್ದ ಸೂಡಿ ಗ್ರಾಮದಲ್ಲಿ “ಸೂಡಿ ಉತ್ಸವ’ ಆಚರಿಸುವುದರ ಮೂಲಕ ಗ್ರಾಮವನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವ ನಿಟ್ಟಿನಲ್ಲಿ ಸರ್ಕಾರ ಇಚ್ಛಾಶಕ್ತಿ ತೋರಬೇಕಿದೆ. ಕಲೆ, ಸಾಹಿತ್ಯ, ಸಂಸ್ಕೃತಿ, ಧಾರ್ಮಿಕ, ಸಾಂಸ್ಕೃತಿಕ ಭವ್ಯ ಪರಂಪರೆಯನ್ನು ಸಾರುವ ಮಹತ್ತರ ಜವಾಬ್ದಾರಿ ನಿಭಾಯಿಸಬೇಕಿದೆ.

Advertisement

10ನೇ ಶತಮಾನದ ಕಲ್ಯಾಣ ಚಾಲುಕ್ಯರ ರಾಣಿ ಅಕ್ಕಾದೇವಿ ರಾಜಧಾನಿಯಾಗಿದ್ದ ಸೂಡಿ ಅತ್ಯಂತ ಉಚ್ಚ್ರಾಯ ಸ್ಥಿತಿಯಲ್ಲಿದ್ದಾಗ ಇಲ್ಲಿ ನಿರ್ಮಿಸಿರುವ ಜೋಡು ಕಳಸದ ದೇಗುಲ ಅಕ್ಕೇಶ್ವರ(ಅನಂತ ಶಯನ ಮಲ್ಲಿಕಾರ್ಜುನ) ದೇವಾಲಯ, ನಗರೇಶ್ವರ ದೇವಾಲಯ, ನಾಗಕುಂಡ ಪುಷ್ಕರಣಿ, ಹಂಪಿ ಸ್ವರೂಪದ ಬೃಹದಾಕಾರದ ಏಕಶಿಲೆ ಕಡಲೆಕಾಳು ಗಣಪತಿ, ನಂದಿ, ಈಶ್ವರ ವಿಗ್ರಹವಿರುವ ಮಂಟಪಗಳು, 60 ಅಡಿ ಎತ್ತರದ ಹುಡೆ ಸೇರಿದಂತೆ ಗ್ರಾಮದಲ್ಲಿ ಎಲ್ಲಿ ನೋಡಿದರಲ್ಲಿ ಮೈನವಿರೇಳಿಸುವ ಶಿಲ್ಪಕಲೆಗಳು ರಾರಾಜಿಸುತ್ತಿವೆ. ಆದರೆ ವ್ಯವಸ್ಥೆಯ ಲೋಪದಿಂದ ಕಾಲಕಾಲಕ್ಕೆ ಜೀರ್ಣೋದ್ಧಾರಗೊಳ್ಳದೇ ಹಾಳು ಕೊಂಪೆಯಂತಾಗಿದೆ.

ಸರ್ಕಾರ ನಡೆಸುವ ಉತ್ಸವಗಳಲ್ಲಿ ಕಲೆ, ಸಂಗೀತ, ಸಾಹಿತ್ಯ, ನಾಟಕ, ನೃತ್ಯ, ಜಾನಪದ, ಕಲಾಮಾಧ್ಯಮ ಅಲ್ಲದೇ ದೇಶದ ಹೆಸರಾಂತ ಕವಿ-ವಿದ್ವಾಂಸರು, ಸಂಗೀತಕಾರರು, ಇತಿಹಾಸಕಾರರ ಮೂಲಕ ಅಲ್ಲಿನ ಇತಿಹಾಸ, ಸಂಸ್ಕೃತಿ ಪರಂಪರೆಯನ್ನು ಜನರ ಮನದಾಳದಲ್ಲಿ ಬೇರೂರುವಂತೆ ಮಾಡುವುದಲ್ಲದೇ ಮುಂದಿನ ಪೀಳಿಗೆಗೂ ಪರಿಚಯಿಸುವ ಮಹತ್ತರ ಕಾರ್ಯಕ್ಕೆ ಮುಂದಾಗಬೇಕೆನ್ನುವುದು ತಜ್ಞರ ಅಭಿಮತ.

ಐತಿಹಾಸಿಕ ಹಿನ್ನಲೆ ಜತೆ ವಾಸ್ತುಶಿಲ್ಪಗಳ ನೆಲೆಬೀಡಾಗಿರುವ ಗಜೇಂದ್ರಗಡ ತಾಲೂಕು ವ್ಯಾಪ್ತಿಯ ಸೂಡಿ ಗ್ರಾಮದಲ್ಲಿ ಸೂಡಿ ಉತ್ಸವ ಆಚರಣೆ ಜತೆ ಶಿಲಾ ಶಾಸನಗಳ ರಕ್ಷಣೆ ಕುರಿತು ಸಂಬಂಧಪಟ್ಟ ಇಲಾಖೆ ಮತ್ತು ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಸರ್ಕಾರದ ಗಮನಕ್ಕೆ ತರಲಾಗುವುದು.
● ಗೋವಿಂದರೆಡ್ಡಿ, ಗದಗ ಜಿಲ್ಲಾಧಿಕಾರಿ

Advertisement

ಐತಿಹಾಸಿಕ ಸ್ಮಾರಕ ಹಾಗೂ ಅದ್ಭುತ ಶಿಲ್ಪಕಲೆ ಹೊಂದಿರುವ ಸೂಡಿ ಗ್ರಾಮದಲ್ಲಿ ಸೂಡಿ ಉತ್ಸವ ನಡೆಸಿ ಮುಂದಿನ ಯುವ ಪೀಳಿಗೆಗೆ ಇತಿಹಾಸ ಪರಿಚಯಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಜತೆ ಜಿಲ್ಲಾಡಳಿತ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಸೂಡಿ ಉತ್ಸವ ಹೋರಾಟ ಸಮಿತಿ, ಸಾಹಿತಿಗಳು, ಚಿಂತಕರು, ಕನ್ನಡ ಪರ ಸಂಘಟನೆಗಳು, ಗ್ರಾಮದ ನಾಗರಿಕರ ನೇತೃತ್ವದಲ್ಲಿ ಹೋರಾಟಕ್ಕೆ ಮುಂದಾಗುವುದು ಅನಿವಾರ್ಯ.
●ಸಂಗಮೇಶ ಅಬ್ಬಿಗೇರಿ, ಸೂಡಿ ಉತ್ಸವ ಹೋರಾಟ ಸಮಿತಿ ಸಂಚಾಲಕ

■ ಡಿ.ಜಿ.ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next