ಆಳಂದ: ಸಮಾಜವಾದಿಗಳಿಂದಲೇ ದೇಶದಲ್ಲಿ ಬದಲಾವಣೆ ಸಾಧ್ಯವಿದೆ. ಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯುವ ನಿರ್ಣಾಯಕ ಪಾತ್ರವಹಿಸಲಿದೆ. ಅಭ್ಯರ್ಥಿ ಅರುಣಕುಮಾರ ಪಾಟೀಲ ಅವರನ್ನು ಗೆಲ್ಲಿಸಿದರೆ ಸಚಿವ ಸ್ಥಾನ ದೊರೆತು ಬಿಹಾರ ಮಾದರಿಯಲ್ಲಿ ಕ್ಷೇತ್ರದ ಅಭಿವೃದ್ಧಿಯಾಗಲಿದೆ ಎಂದು ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಖೀಲೇಶ ಕಟಿಯಾರ್ ಹೇಳಿದರು.
ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ಜೆಡಿಯು ತಾಲೂಕು ಘಟಕ ಸೋಮವಾರ ಹಮ್ಮಿಕೊಂಡಿದ್ದ ಬಹಿರಂಗ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಭ್ರಷ್ಟಾಚಾರ, ಮದ್ಯಮುಕ್ತ, ರೈತಪರ ಧ್ವನಿ ಎತ್ತುವ ಜೆಡಿಯುನಂತ ಸಮಾಜವಾದಿಗಳ ಪಕ್ಷ ಬಲಪಡಿಸಿದರೆ ಸಮಾಜ, ದೇಶದಲ್ಲಿ ಬದಲಾವಣೆಯಾಗಲಿದೆ. ಅರುಣಕುಮಾರ ಪಾಟೀಲ ಉದ್ಯಮಿಯಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದು 2 ಸಾವಿರಕ್ಕೂ ಹೆಚ್ಚು ನಿರುದ್ಯೋಗಿಗಳಿಗೆ ಉದ್ಯೋಗ, ಶಿಕ್ಷಣ, ಆರೋಗ್ಯ ಸೇವೆ ಒದಗಿಸುವ ಮೂಲಕ ಕ್ಷೇತ್ರದಲ್ಲಿ ಅಭಿವೃದ್ಧಿ ಕನಸಿಗೆ ಜನಸ್ಪಂದಿಸಿಗೆಲ್ಲಿಸಿದರೆ ಬದಲಾಣೆಯಾಗಲಿದೆ. ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ ಕುಮಾರ ಅವರ ಜನಪರ ಆಡಳಿತ ದೇಶೇಕ್ಕೆ ಮಾದರಿಯಾಗಿದೆ. 12 ವರ್ಷಗಳಿಂದ ಒಬ್ಬರೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ಇಲ್ಲ. ಇಂಥ ಪಕ್ಷಕ್ಕೆ ಬೆಂಬಲಿಸಿ ಮತ ನೀಡಬೇಕು ಎಂದು ಮನವಿ ಮಾಡಿದರು.
ಸಮಾವೇಶ ಉದ್ಘಾಟಿಸಿ ಮಾತನಾಡಿದ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ, ಕ್ಷೇತ್ರದಲ್ಲಿ ಶಾಸಕ ಬಿ.ಆರ್. ಪಾಟೀಲ, ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರಿಗಿಂತಲೂ ಅಭಿವೃದ್ಧಿ ಆಲೋಚನೆಯಲ್ಲಿ ಮುಂದೆ ಇರುವ ಜೆಡಿಯು ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಅರುಣಕುಮಾರ ಅವರನ್ನು ಮತದಾರರು ಗೆಲ್ಲಿಸಿದರೆ ಭ್ರಷ್ಟಾಚಾರ ರಹಿತ ಮತ್ತು ಪಾರದರ್ಶಕ ಆಡಳಿತ ನೀಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಅಭಿವೃದ್ಧಿ ಮತ್ತು ಬದಲಾವಣೆಗಾಗಿ ಜೆಡಿಯು ಅಭ್ಯರ್ಥಿ ಗೆಲಿಸಬೇಕು ಎಂದು ಮನವಿ ಮಾಡಿದರು.
ಅಭ್ಯರ್ಥಿ, ಜೆಡಿಯು ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣಕುಮಾರ ಪಾಟೀಲ ಮಾತನಾಡಿ, ಹಾಲಿ, ಮಾಜಿ ಶಾಸಕರ 30 ವರ್ಷದ ಸ್ವಾರ್ಥ ಸಾಧನೆ ಆಡಳಿತದಿಂದ ಕ್ಷೇತ್ರ ಬಡವಾಗಿದೆ. ಅಭಿವೃದ್ಧಿ ಕಾಣದೆ ಜನ ಕಂಗಾಲಾಗಿದ್ದಾರೆ. ಇದನ್ನು ಮನಗಂಡು ಕ್ಷೇತ್ರದಲ್ಲಿ ಉಚಿತವಾಗಿ ಆರೋಗ್ಯ ಶಿಬಿರ, ನಿರುದ್ಯೋಗಿಗಳಿಗೆ ಉದ್ಯೋಗ, ವೃತ್ತಿ ಕೌಶಲ, ಯುವಕ, ಯುವತಿಯರಿಗೆ ಕಂಪ್ಯೂಟರ್ ತರಬೇತಿ ನೀಡಿದ್ದು, ನಿರುದ್ಯೋಗ ಮುಕ್ತ ಕ್ಷೇತ್ರ ಹಾಗೂ ಅಭಿವೃದ್ಧಿಯಲ್ಲಿ ಮಾದರಿ ಕ್ಷೇತ್ರವನ್ನಾಗಿಸಲು ಸಂಕಲ್ಪ ತೊಟ್ಟು ಉದ್ಯಮ ಕ್ಷೇತ್ರದಿಂದ
ರಾಜಕೀಯಕ್ಕೆ ಬಂದಿದ್ದೇನೆ. ಜನರು ಆಶೀರ್ವದಿಸಿದರೆ ಹೆಚ್ಚಿನ ಕೆಲಸ ಮಾಡಿ ಋಣ ತೀರಿಸುತ್ತೇನೆ ಎಂದು ಹೇಳಿದರು.
ಯಾರೊಂದಿಗೂ ಒಳ ಮತ್ತು ಹೊರ ಒಪ್ಪಂದ ಮಾಡಿಕೊಳ್ಳದೇ, ಹೆಂಡ ಹಂಚದೆ ಚುನಾವಣೆ ಎದುರಿಸುತ್ತೇನೆ. ಮತದಾರರು ಯಾರಿಗೂ ಹೆದರಬೇಕಾಗಿಲ್ಲ. ಕಾನೂನು ಎಲ್ಲರಿಗೂ ಒಂದೆ. ತಾಕತ್ತಿದ್ದರೆ ಎದುರಾಳಿಗಳು ಬರಲಿ. ಮತ ನೀಡಿ ಎದುರಾಳಿಗಳಿಗೆ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.
ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ಕೆ.ವಿ. ಶಿವರಾಮ, ತಾಲೂಕು ಅಧ್ಯಕ್ಷ ಕಲ್ಯಾಣರಾವ ಪಾಟೀಲ ಭೂಸನೂರ, ಡಾ| ಬಸವಂತರಾವ ಪಾಟೀಲ, ಭೂಸನೂರಿನ ಬಾಳಾಸಾಹೇಬ ದೇಶಮುಖ ಮಾತನಾಡಿದರು.
ಮುಖಂಡ ಚಂದ್ರಶೇಖರ ಪಾಟೀಲ ಹಳ್ಳಿಸಲಗರ, ಮಲ್ಲಿನಾಥ ನಿಂಬಾಳ, ಸೂರ್ಯಕಾಂತ ಹತ್ತರಕಿ, ಸಿದ್ದಣ್ಣ ಝಳಕಿ, ಮಹಮದ್‌ಸಾಬ, ಶಿವಾನಂದ ಹಿರೇಮಠ ಇದ್ದರು. ಇದೇ ವೇಳೆ ವಿವಿಧ ಪಕ್ಷಗಳಿಂದ ಜೆಡಿಯುಗೆ ಸೇರ್ಪಡೆಯಾದ ಮುಖಂಡರನ್ನು ಸ್ವಾಗತಿಸಲಾಯಿತು. ಗಂಗಾಧರ ಕುಂಬಾರ ನಿರೂಪಿಸಿದರು.