Advertisement

ಪ್ರಯಾಣಿಕರ ನಿರ್ವಹಣೆಯೇ ಸವಾಲು!

11:57 AM Jul 18, 2017 | Team Udayavani |

ಬೆಂಗಳೂರು: “ನಮ್ಮ ಮೆಟ್ರೋ’ ಮೊದಲ ಹಂತದಲ್ಲಿ ಸಂಪೂರ್ಣವಾಗಿ ವಾಣಿಜ್ಯ ಸಂಚಾರ ಆರಂಭಗೊಂಡು ಸೋಮವಾರಕ್ಕೆ ಒಂದು ತಿಂಗಳಾಗಿದೆ. ಮೊದಲ ತಿಂಗಳಲ್ಲೇ ಐದು ಲಕ್ಷ ಪ್ರಯಾಣಿಕರ ಗುರಿ ಹೊಂದಿದ್ದ ಬಿಎಂಆರ್‌ಸಿ ಪಾಲಿಗೆ ಸದ್ಯಕ್ಕೆ ಆ ಗುರಿ ತಲುಪದಿರುವುದೇ ಹಿತ ಎನಿಸಿದೆ. 

Advertisement

ಏಕೆಂದರೆ, ಪ್ರಸ್ತುತ ನಿತ್ಯ ಪ್ರಯಾಣಿಸುತ್ತಿರುವ 3.20 ಲಕ್ಷ ಪ್ರಯಾಣಿಕರಿಗೆ ನೂಕುನುಗ್ಗಲು ಉಂಟಾಗುತ್ತಿದೆ. ಈ ಜನದಟ್ಟಣೆ ನಿರ್ವಹಣೆಗೆ ಹಲವು ಹಸಿರು ಮಾರ್ಗದ ರೈಲುಗಳನ್ನೂ ನೇರಳೆ ಮಾರ್ಗದಲ್ಲಿ ಕಾರ್ಯಾಚರಣೆಗೆ ತೊಡಗಿಸುವ ಮೂಲಕ ದಟ್ಟಣೆ ಬೇಡಿಕೆ ನಿರ್ವಹಿಸುವ ಪ್ರಯತ್ನ ಮಾಡಲಾಗುತ್ತಿದೆ. ದರೊಂದಿಗೆ ಹಸಿರು ಮಾರ್ಗದ ಇನ್ನೂ ಕೆಲವು ರೈಲುಗಳನ್ನು ನೇರಳೆ ಮಾರ್ಗದಲ್ಲಿ ಓಡಿಸುವ ಪ್ರಯೋಗಕ್ಕೆ ನಿಗಮ ಚಿಂತನೆ ನಡೆಸಿದೆ.

ಹೀಗಿರುವಾಗ ಐದು ಲಕ್ಷ ಪ್ರಯಾಣಿಕರ ನಿರ್ವಹಣೆ ಸವಾಲಾಗಿದೆ. ಈ ಮೊದಲು ಮೊದಲ ಹಂತ ಆರಂಭಗೊಂಡ ಮೊದಲ ತಿಂಗಳಲ್ಲೇ ಮೆಟ್ರೋದಲ್ಲಿ ನಿತ್ಯ ಓಡಾಡುವವರ ಸಂಖ್ಯೆ ಐದು ಲಕ್ಷ ದಾಟಲಿದೆ ಎಂದು ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕರು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ತಿಂಗಳಲ್ಲಿ ಸರಾಸರಿ 3.20 ಲಕ್ಷ ಪ್ರಯಾಣಿಕರು ಮಾತ್ರ ಸಂಚರಿಸಲು ಸಾಧ್ಯವಾಗಿದ್ದು, ನಿತ್ಯ 80ರಿಂದ 85 ಲಕ್ಷ ರೂ. ಆದಾಯ ಬರುತ್ತಿದೆ.

ಇರುವ ರೈಲುಗಳೆಷ್ಟು?
ಪ್ರಸ್ತುತ ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣದಲ್ಲಿ ಒಟ್ಟಾರೆ 50 ಮೆಟ್ರೋ ರೈಲುಗಳಿವೆ. ಇದರಲ್ಲಿ ನಿತ್ಯ ಕಾರ್ಯಾಚರಣೆ ಮಾಡುತ್ತಿರುವುದು 38 ರೈಲುಗಳು. ಈ ಪೈಕಿ 18 ನೇರಳೆ ಮತ್ತು 20 ಹಸಿರು ಮಾರ್ಗದಲ್ಲಿವೆ. ಉಳಿದ 12ರಲ್ಲಿ 6 ತುರ್ತು ಸೇವೆ ಮತ್ತು 6 ನಿರ್ವಹಣೆಯಲ್ಲಿರುತ್ತವೆ. ಕಾರ್ಯಾಚರಣೆಯಲ್ಲಿರುವ ರೈಲುಗಳು ಪ್ರತಿ ಮೂರು ದಿನಕ್ಕೊಮ್ಮೆ ನಿರಂತರವಾಗಿ ನಿರ್ವಹಣೆ (ಪ್ರಿವೆಂಟಿವ್‌ ಮೆಂಟೇನನ್ಸ್‌) ಮಾಡಲಾಗುತ್ತದೆ. ಹಾಗಾಗಿ, ಎಲ್ಲ ರೈಲುಗಳನ್ನು ಕಾರ್ಯಾಚರಣೆಗಿಳಿಸಲು ಆಗುವುದಿಲ್ಲ ಎಂದು ಬಿಎಂಆರ್‌ಸಿ ಅಧಿಕಾರಿಯೊಬ್ಬರು ತಿಳಿಸುತ್ತಾರೆ. 

ಆದರೆ, ನಿತ್ಯ ಐದು ಲಕ್ಷ ಪ್ರಯಾಣಿಕರನ್ನು ನಿರ್ವಹಿಸಲು ಈಗಲೂ ಬಿಎಂಆರ್‌ಸಿಎಲ್‌ ಸಿದ್ಧವಾಗಿದೆ. ಇದಕ್ಕಾಗಿ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ. ಶಾರ್ಟ್‌ ಟ್ರೂಪ್‌ ರೈಲು ಸೇವೆ ಅಂದರೆ ಹೆಚ್ಚು ದಟ್ಟಣೆ ಇರುವ ಮಾರ್ಗಗಳ ನಡುವೆಯೇ ಮೆಟ್ರೋ ಸೇವೆ ಕಲ್ಪಿಸುವುದು, ಕಡಿಮೆ ಪ್ರಯಾಣಿಕರಿರುವ ಮಾರ್ಗಗಳಿಂದ ರೈಲುಗಳನ್ನು ಸ್ಥಳಾಂತರಿಸುವುದು, ಪ್ರತಿ 3 ನಿಮಿಷಕ್ಕೊಂದು ರೈಲು ಓಡಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ನಿಗಮದ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು. 

Advertisement

ಮೊದಲ ಹಂತದ ಸೇವೆ ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡು ತಿಂಗಳಾಗಿದೆ. ಈ ಅವಧಿಯಲ್ಲಿ ನಿರಂತರವಾಗಿ ಪ್ರಯಾಣಿಕರ ಸಂಖ್ಯೆ ಏರುಗತಿಯಲ್ಲಿ ಸಾಗಿರುವುದು ತೃಪ್ತಿ ತಂದಿದೆ. ಸರಾಸರಿ 3ರಿಂದ 3.20 ಲಕ್ಷ ಜನ ನಿತ್ಯ ಪ್ರಯಾಣಿಸುತ್ತಿದ್ದು, ವರ್ಷಾಂತ್ಯಕ್ಕೆ ಐದು ಲಕ್ಷ ತಲುಪಲಿದೆ. ತಕ್ಷಣಕ್ಕೆ ಐದು ಲಕ್ಷ ಪ್ರಯಾಣಿಕರು ಬಂದರೆ, ನಿಭಾಯಿಸುವುದು ಕಷ್ಟ. ಆದರೆ, ನಿರ್ವಹಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 
-ಪ್ರದೀಪ್‌ಸಿಂಗ್‌ ಖರೋಲಾ, ಬಿಎಂಆರ್‌ಸಿಎಲ್‌ ಎಂಡಿ

Advertisement

Udayavani is now on Telegram. Click here to join our channel and stay updated with the latest news.

Next