Advertisement

Mumbai Coast: ಗೇಟ್‌ವೇ ಆಫ್‌ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!

08:55 AM Dec 19, 2024 | Team Udayavani |

ಮುಂಬಯಿ: ಪ್ರಸಿದ್ಧ ಪ್ರವಾಸಿ ತಾಣ ಎಲಿಫೆಂಟಾ ಗುಹೆಗಳತ್ತ ಸಾಗುತ್ತಿದ್ದ ಪ್ರಯಾಣಿಕ ದೋಣಿ (ಫೆರ್ರಿ)ಗೆ ನೌಕಾಪಡೆಯ ವೇಗದ ಬೋಟ್‌ ಢಿಕ್ಕಿಯಾಗಿ 13 ಮಂದಿ ಮೃತಪಟ್ಟ ಘಟನೆ ಮುಂಬಯಿ ಕರಾವಳಿಯಲ್ಲಿ ಬುಧವಾರ ಸಂಭವಿಸಿದೆ. ಈ ವೇಳೆ ಒಟ್ಟು 101 ಮಂದಿಯ ರಕ್ಷಿಸಲಾಗಿದೆ.

Advertisement

ಮೃತರಲ್ಲಿ 10 ಪ್ರವಾಸಿಗರು, ಓರ್ವ ನೌಕಾಪಡೆ ಸಿಬಂದಿ ಮತ್ತು ಬೋಟ್‌ ಎಂಜಿನ್‌ ಪೂರೈಕೆ ಮಾಡಿದ್ದ ಸಂಸ್ಥೆಯ ಇಬ್ಬರು ನೌಕರರು ಸೇರಿದ್ದಾರೆ. ಒಟ್ಟು 101
ಮಂದಿಯನ್ನು ರಕ್ಷಿಸಲಾಗಿದ್ದು, ಕಾಣೆಯಾದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ನೌಕಾಪಡೆ ತಿಳಿಸಿದೆ.

ನಡೆದದ್ದೇನು?

“ನೀಲ್‌ ಕಮಲ್‌’ ಹೆಸರಿನ ಫೆರ್ರಿ ದೋಣಿ 110 ಪ್ರಯಾಣಿಕರೊಂದಿಗೆ ಗೇಟ್‌ ವೇ ಆಫ್ ಇಂಡಿಯಾದಿಂದ ಹೊರಟಿತ್ತು. ಇತ್ತ ಸಮುದ್ರದಲ್ಲಿ ನೌಕಾಪಡೆಗೆ ಸೇರಿದ ಸ್ಪೀಡ್‌ ಬೋಟ್‌ ಪರೀಕ್ಷಾರ್ಥ ಬುಧವಾರ ಸಂಜೆ 4 ಗಂಟೆ ಸುಮಾರಿಗೆ  ಓಡಾಟ ನಡೆಸುತ್ತಿತ್ತು. ಎಂಜಿನ್‌ನಲ್ಲಿ ದೋಷ ಕಾಣಿಸಿಕೊಂಡ ಕಾರಣ ಬೋಟ್‌ನ ವೇಗ ಏಕಾಏಕಿ ಹೆಚ್ಚಿ, ಚಾಲಕನ ನಿಯಂತ್ರಣ ಕಳೆದುಕೊಂಡು ಪ್ರಯಾಣಿಕ ದೋಣಿಗೆ ಢಿಕ್ಕಿ ಹೊಡೆಯಿತು. ದೋಣಿಯಲ್ಲಿದ್ದ ಪ್ರವಾಸಿಗ ರೊಬ್ಬರು ಘಟನೆಯ ವೀಡಿಯೋ ಮಾಡಿದ್ದು ವೈರಲ್‌ ಆಗಿದೆ.

ಚಾಲಕನ ವಿರುದ್ಧ ಪ್ರಕರಣ ದಾಖಲು

ಅನಾಹುತ ನಡೆಯುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ನೌಕಪಡೆ, ಕರಾವಳಿ ಪಡೆಯ ಸಿಬ್ಬಂದಿಗಳು ರಕ್ಷಣಾ ಕಾರ್ಯ ನಡೆಸಿವೆ. ನೌಕಪಡೆಯ ನಾಲ್ಕು ಹೆಲಿಕಾಪ್ಟರ್‌ಗಳು, ನೌಕಾಪಡೆಯ 11 ಕ್ರಾಫ್ಟ್‌ಗಳು, ಕರಾವಳಿ ಕಾವಲು ಪಡೆಯ ಒಂದು ಬೋಟ್‌ ಮತ್ತು ಸ್ಥಳೀಯ ಪೊಲೀಸರು ರಕ್ಷಣಾ ಕಾರ್ಯಕ್ಕೆ ನೆರವಾಗಿದ್ದಾರೆ. ನೌಕಾಪಡೆ ಸ್ಪೀಡ್‌ ಬೋಟ್‌ ಚಾಲಕನ ವಿರುದ್ಧ ಪ್ರಕರಣವೂ ದಾಖಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಫೆರ್ರಿ ದೋಣಿಯಲ್ಲಿನ ಪ್ರವಾಸಿಗರು ʼ ಸ್ಪೀಡ್‌ ಬೋಟ್‌ ನಮ್ಮತ್ತ ನುಗ್ಗುವುದನ್ನು ದೂರದಿಂದಲೇ ಗಮನಿಸಿದೆವು. ಅದು ನಮ್ಮತ್ತ ವೇಗವಾಗಿ ಬಂದು ಢಿಕ್ಕಿ ಹೊಡೆಯುತ್ತದೆ ಎಂಬುದು ಖಚಿತವಾಗಿತ್ತು. ಆದರೆ ನಾವು ಅಸಹಾಯಕರಾಗಿದ್ದೆವು. ಕಣ್ಣ ಮುಂದೆಯೇ ದುರಂತ ನಡೆದು ಹೋಯಿತುʼ ಎಂದರು.


ಸಂತಾಪ, ಪರಿಹಾರ ಘೋಷಣೆ:
ಈ ದುರ್ಘಟನೆ ಬಗ್ಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‌ ಸಂತಾಪ ಸೂಚಿಸಿದ್ದಾರೆ. ಫಡ್ನವೀಸ್‌ ಸಿಎಂ ಪರಿಹಾರ ನಿಧಿಯಿಂದ ಮೃತಪಟ್ಟವರ ಕುಟುಂಬಗಳಿಗೆ 5ಲಕ್ಷ ರೂ. ಪರಿಹಾರ ಘೋಷಿಸಿದರೆ, ಕೇಂದ್ರ ಸರಕಾರದ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಕೂಡ ಮೃತಪಟ್ಟವರ ಕುಟುಂಬಗಳಿಗೆ 2ಲಕ್ಷ ರೂ. ಪರಿಹಾರ, ಗಾಯಗೊಂಡವರಿಗೆ ತಲಾ 50 ಸಾವಿರ ರೂ.ಘೋಷಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next