ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿದ ನಾಯಕ ಕೊಹ್ಲಿಯ ನಿರ್ಧಾರವನ್ನು ಟೀಂ ಇಂಡಿಯಾ ಬೌಲರ್ ಗಳು ಹುಸಿ ಮಾಡಲಿಲ್ಲ. ಆಸೀಸ್ ಆರಂಭಿಕರಿಬ್ಬರನ್ನು ಕೇವಲ 27 ರನ್ ಗಳಿಗೆ ಪೆವಿಲಿಯನ್ ಗೆ ಅಟ್ಟಿದ ಭುವನೇಶ್ವರ್ ಕುಮಾರ್ ಭಾರತಕ್ಕೆ ಮೊದಲ ಮೆಲುಗೈ ಒದಗಿಸಿದರು. ನಂತರ ನಡೆದದ್ದು ಚಾಹಲ್ ಮ್ಯಾಜಿಕ್.
Advertisement
6 ವಿಕೆಟ್ ಕಿತ್ತ ಚಾಹಲ್: ಈ ಸರಣಿಯಲ್ಲಿ ಮೊದಲ ಬಾರಿಗೆ ಆಡುವ ಬಳಗದಲ್ಲಿ ಅವಕಾಶ ಪಡೆದ ಯುಜುವೇಂದ್ರ ಚಾಹಲ್ ಭರ್ಜರಿ ಬೌಲಿಂಗ್ ನಡೆಸಿದರು. ತನ್ನ 10 ಓವರ್ ನಲ್ಲಿ 42 ರನ್ ಗಳಿಗೆ 6 ವಿಕೆಟ್ ಕಿತ್ತು ಕಾಂಗರೂ ಬ್ಯಾಟ್ಸ್ ಮನ್ ಗಳು ರನ್ ಕಲೆಹಾಕಲು ಹೆಣಗಾಡುವಂತೆ ಮಾಡಿದರು. ಉಳಿದಂತೆ ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ ತಲಾ ಎರಡು ವಿಕೆಟ್ ಕಿತ್ತರು. ಕೈ ಹಿಡಿದ ಹ್ಯಾಂಡ್ಸ್ ಕಾಂಬ್: ಒಂದೆಡೆ ಆಸೀಸ್ ವಿಕೆಟ್ ಗಳು ಉರುಳಿತ್ತಿದ್ದರೂ ಮಧ್ಯಮ ಕ್ರಮಾಂಕದ ಆಟಗಾರ ಪೀಟರ್ ಹ್ಯಾಂಡ್ಸ್ ಕಾಂಬ್ ಅರ್ಧ ಶತಕ ಗಳಿಸಿ ತಂಡದ ಮೊತ್ತ 200 ತಲುಪಲು ಸಹಾಯ ಮಾಡಿದರು. 63 ಎಸೆತಗಳಲ್ಲಿ 58 ರನ್ ಗಳಿಸಿ ಚಾಹಲ್ ಗೆ ವಿಕೆಟ್ ಒಪ್ಪಿಸಿದರು. ಉಳಿದಂತೆ ಕಳೆದ ಪಂದ್ಯದ ಶತಕವೀರ ಶಾನ್ ಮಾರ್ಶ್ 39, ಉಸ್ಮಾನ್ ಖ್ವಾಜಾ 34 ರನ್ ಗಳಿಸಿದರು.