ಬೆಂಗಳೂರು: ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಪ್ರಸಕ್ತ ಸಾಲಿನಲ್ಲಿ ಸೀಟು ಹಂಚಿಕೆಗೆ ಜೂ.7 (ಗುರುವಾರ) ನಡೆಯಬೇಕಿದ್ದ ಸಾಮಾನ್ಯ ವರ್ಗದ (ಜನರಲ್ ಕೆಟಗರಿ) ಅಭ್ಯರ್ಥಿಗಳ ಮೂಲ ದಾಖಲಾತಿಗಳ ಪರಿಶೀಲನೆ ಮುಂದೂಡಲಾಗಿದೆ.
ಆದರೆ, ಮುಂದೂಡಿಕೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪಷ್ಟ ಕಾರಣ ಕೊಟ್ಟಿಲ್ಲ. ಪರಿಷ್ಕೃತ ವೇಳಾಪಟ್ಟಿ ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಕ್ರೀಡಾ ಕೋಟಾದಡಿ ಕೆಲವೊಂದು ಕ್ರೀಡೆಗಳನ್ನು ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಮಂಗಳವಾರ ಪರೀಕ್ಷಾ ಪ್ರಾಧಿಕಾರದ ಕಚೇರಿ ಎದುರು ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದರು. ಆದರೆ, ಈ ಹಿಂದಿನ ಪದ್ದತಿಯಂತೆ ಕ್ರೀಡಾ ಕೋಟಾದ ಸೀಟು ಹಂಚಿಕೆ ನಡೆಯಲಿದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿತು. ಅದರಂತೆ ಮಂಗಳವಾರ ಹಾಗೂ ಬುಧವಾರ ಕ್ರೀಡಾ, ಎನ್‌ಎಸ್‌ಎಸ್, ಅಂಗವೀಕಲ ಕೋಟಾದಡಿ ದಾಖಲಾತಿಗಳ ಪರಿಶೀಲನೆ ನಡೆದಿದೆ.
ಆದರೆ, ಜೂ.7ರಂದು ನಡೆಯಬೇಕಿದ್ದ ಸಾಮಾನ್ಯ ವರ್ಗದ ದಾಖಲಾತಿಗಳ ಪರಿಶೀಲನೆ ಮುಂದೂಡಲಾಗಿದ್ದು, ಪರಿಷ್ಕೃತ ವೇಳಾ ಪಟ್ಟಿ ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಈ ಕುರಿತು ಪ್ರಾಧಿಕಾರ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿರುವುದರಿಂದ ಮೂಲ ದಾಖಲಾತಿ ಪರಿಸೀಲನೆ ಯಾವಾಗ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದಂತಾಗಿದೆ. ಎಂದು ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ.